ಅಂತೂ ಬಂತು ಬೆಂಗಳೂರು ರೈಲು ನಿಲ್ದಾಣಕ್ಕೂ ಲಗೇಜ್ ಟ್ರಾಲಿ

ತುಮಕೂರು ರಸ್ತೆ ಕಡೆಯ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಈ ಟ್ರಾಲಿಗಳನ್ನು ಗುರುವಾರ ಉದ್ಘಾಟಿಸಿದ ನೈಋತ್ಯ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕ ಎಸ್. ಮಣಿ, 'ಪ್ರಯಾಣಿಕರ ಅನುಕೂಲಕ್ಕಾಗಿ ಮಾತ್ರ ಈ ಟ್ರಾಲಿಗಳನ್ನು ಬಳಸುವಂತೆ ಕೂಲಿಕಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ' ಎಂದು ಹೇಳಿದರು.
'ಪರವಾನಗಿ ಪಡೆದ ಕೂಲಿಕಾರರು ಈ ಟ್ರಾಲಿಗಳನ್ನು ನಿರ್ವಹಣೆ ಮಾಡಲಿದ್ದಾರೆ. ನಗರ ನಿಲ್ದಾಣ ಹಾಗೂ ದಂಡು ನಿಲ್ದಾಣಗಳಲ್ಲಿಯೂ ಕ್ರಮವಾಗಿ 30 ಹಾಗೂ 25 ಸರಕು ಸಾಗಣೆ ಟ್ರಾಲಿ ಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಒದಗಿಸಲಾಗಿದೆ' ಎಂದು ಅವರು ತಿಳಿಸಿದರು.
'ಟ್ರಾಲಿಗಳ ಮೂಲಕ ಸರಕು ಸಾಗಿಸಲು ಪ್ರಯಾಣಿಕರು ಮೊದಲಿನ ರೀತಿಯಲ್ಲೇ ನಿಗದಿತ ಮೊತ್ತ ಪಾವತಿಸಬೇಕು. ಇದರಿಂದ ಕಾರ್ಮಿಕರು ತಲೆ ಅಥವಾ ಭುಜದ ಮೇಲೆ ಸರಕು ಸಾಗಿಸುವುದನ್ನು ತಪ್ಪಿಸಿದಂತಾಗಿದೆ. ಅಲ್ಲದೆ, ಪ್ರಯಾಣಿಕರಲ್ಲಿಯೂ ಒಳ್ಳೆಯ ಅಭಿಪ್ರಾಯ ಮೂಡಲು ಇದು ಸಹಕಾರಿಯಾಗಲಿದೆ' ಎಂದು ಮಣಿ ಹೇಳಿದರು.
ಇದೇ ಸಂದರ್ಭದಲ್ಲಿ ಟ್ರಾಲಿಗಳ ಜತೆಗೆ, ವಿಶೇಷವಾಗಿ ಹಿರಿಯ ನಾಗರಿಕರು, ಅಂಗವಿಕಲರ ಸೌಲಭ್ಯಕ್ಕಾಗಿ ಬ್ಯಾಟರಿ ಚಾಲಿತ ಸರಕು ಸಾಗಣೆ ವಾಹನ ಸೌಲಭ್ಯವನ್ನೂ ಒದಗಿಸಲಾಗಿದೆ. ಎಸಿಸಿ ಲಿಮಿಟೆಡ್ ಈ ಬ್ಯಾಟರಿ ಚಾಲಿತ ಸರಕು ಸಾಗಣೆ ವಾಹನವನ್ನು ಪ್ರಾಯೋಜಿಸಿದ್ದು, ಇದು ನಿಲ್ದಾಣದಲ್ಲಿ ಒದಗಿಸಿರುವ ಎರಡನೆಯ ವಾಹನವಾಗಿದೆ.
ನಗರ ರೈಲು ನಿಲ್ದಾಣದಲ್ಲಿ ನಾಲ್ಕು ಬ್ಯಾಟರಿ ಚಾಲಿತ ಸರಕು ಸಾಗಣೆ ವಾಹನಗಳನ್ನು ಒದಗಿಸಲಾಗಿದ್ದು, ಈ ವಾಹನದ ಸೌಲಭ್ಯ ಪಡೆಯಲು ಇಚ್ಛಿಸುವ ಪ್ರಯಾಣಿಕರು ಮೊಬೈಲ್ ಸಂಖ್ಯೆ: 99025 45012 ಸಂಪರ್ಕಿಸಬಹುದು.












Click it and Unblock the Notifications