ಉ.ಪ್ರದಲ್ಲಿ ಭೀಕರ ರೈಲು ಅಪಘಾತ, 35 ಸಾವು

ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಮಾಳ್ವಾ ರೈಲು ನಿಲ್ದಾಣದ ಬಳಿ ಭೀಕರ ದುರ್ಘಟನೆ ಸಂಭವಿಸಿದ್ದು, ಇಂಜಿನ್ ಸೇರಿದಂತೆ 12 ಬೋಗಿಗಳು ಹಳಿ ತಪ್ಪಿವೆ. ಮೂರು ತ್ರೀ ಟಯರ್ ಎಸಿ ಕೋಚ್, ಐದು ಸ್ಲೀಪರ್ ಕೋಚ್ ಮತ್ತು ಎರಡು ಸಾರ್ವಜನಿಕ ಬೋಗಿಗಳು ಭಾರೀ ಹಾನಿಗೀಡಾಗಿವೆ. ನಜ್ಜುಗುಜ್ಜಾಗಿರುವ ಬೋಗಿಗಳನ್ನು ಕತ್ತರಿಸಲು ಗ್ಯಾಸ್ ಕಟರ್ ಗಳನ್ನು ಬಳಸಲಾಗುತ್ತಿದೆ.
ಗಾಯಗೊಂಡವರನ್ನು ಫತೇಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಕಾರ್ಯ ಭರದಿಂದ ಸಾಗಿದ್ದು, ನಜ್ಜುಗುಜ್ಜಾಗಿರುವ ಕೆಲ ಬೋಗಿಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರಬಹುದೆಂದು ಅಂದಾಜು ಮಾಡಲಾಗಿದೆ. ಸಾವಿನ ಸಂಖ್ಯೆ ಇನ್ನೂ ಏರುವ ಸಂಭವವಿದೆ. ರೈಲಿನಲ್ಲಿ 1200 ಜನರು ಪ್ರಯಾಣಿಸುತ್ತಿದ್ದರು.
ಚಾಲಕ ಎಮರ್ಜೆನ್ಸಿ ಬ್ರೇಕನ್ನು ಹಾಕಿದ ಪರಿಣಾಮ ಬೋಗಿಗಳು ಹಳಿತಪ್ಪಿವೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ದುರಂತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಅಪಘಾತದಿಂದಾಗಿ ಒಟ್ಟು 13 ರೈಲುಗಳು ರದ್ದಾಗಿವೆ.
ರೈಲ್ವೆ ಇಲಾಖೆ ಸತ್ತವರಿಗೆ 5 ಲಕ್ಷ ರು. ಪರಿಹಾರ ಘೋಷಿಸಿದೆ. ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ರು. ಮತ್ತು ಸಣ್ಣಪುಟ್ಟ ಗಾಯ ಆದವರಿಗೆ 25 ಸಾವಿರ ರು. ನೀಡುವುದಾಗಿ ಹೇಳಿದೆ. ಪರಿಹಾರಕ್ಕಾಗಿ ಮೂರು ರೈಲುಗಳು ಅಪಘಾತವಾದ ಸ್ಥಳಕ್ಕೆ ಧಾವಿಸಿವೆ. ರಾಷ್ಟ್ರೀಯ ವಿಪ್ಪತ್ತು ಪರಿಹಾರ ದಳದ 100 ಜನರು ಪರಿಹಾರದಲ್ಲಿ ನಿರತರಾಗಿದ್ದಾರೆ.
ಈ ಅಪಘಾತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಗೌಹಾತಿ-ಪುರಿ ಎಕ್ಸ್ ಪ್ರೆಸ್ ರೈಲು ಆಸ್ಸಾಂ ಬಳಿ ಹಳಿತಪ್ಪಿದ್ದು, 50 ಜನ ಗಾಯಗೊಂಡಿದ್ದಾರೆ.












Click it and Unblock the Notifications