ಮಳೆ ಹಾನಿ ಅನುದಾನ ಬಳಕೆಯಾಗಿಲ್ಲ:ನಳಿನ್ ಕುಮಾರ್

ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಕಳೆದ ವರ್ಷ 1.5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಈ ಪೈಕಿ ಕೇವಲ 40 ರಿಂದ 50 ಲಕ್ಷ ರೂಪಾಯಿ ಮಾತ್ರ ಬಳಕೆಯಾಗಿದೆ ಎಂದರು.
ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಕೆಲಸಗಳು ಅಪೂರ್ಣವಾಗಿರುವ ಬಗ್ಗೆ ಗಮನ ಸೆಳೆದ ಸಂಸದರು ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಮಂಗಳೂರಲ್ಲಿ ಕೃತಕ ನೆರೆ ಭೀತಿ: ಭಾರೀ ಮಳೆ ಇನ್ನಷ್ಟೇ ಆಗಬೇಕು, ಆದರೆ ಈಗಾಗಲೇ ಮಂಗಳೂರು ನಗರ ಪ್ರದೇಶ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿಗಳಿಲ್ಲದ ಕಾರಣ ನೆರೆಗೆ ತುತ್ತಾಗುತ್ತಿದೆ. ಮುಖ್ಯ ಮಂತ್ರಿಗಳ ನೂರು ಕೋಟಿ ರೂಪಾಯಿ ಯೋಜನೆಯಲ್ಲಿ ರಸ್ತೆಗಳ ಕಾಂಕ್ರೀಟಿಕರಣಗೊಳಿಸಲಾಗಿದ್ದು ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸದಿರುವುದು ಈ ಸಮಸ್ಯೆಗೆ ಮೂಲ ಕಾರಣ.
ಗದ್ದೆಗಳನ್ನು ಸಮತಟ್ಟುಗೊಳಿಸಿ ವಸತಿ ಸಮುಚ್ಚಯ ನಿರ್ಮಿಸಿರುವುದು ಕೂಡಾ ಮಳೆಗಾಲದಲ್ಲಿ ನೆರೆ ಸಮಸ್ಯೆ ತಲೆದೋರಲು ಕಾರಣವಾಗಿದೆ.ಕುದ್ರೋಳಿ, ಕೊಡಿಯಾಲ್‌ಬೈಲ್, ಜೆಪ್ಪು, ಪಾಂಡೇಶ್ವರ ಮುಂತಾದ ಕಡೆಗಳಲ್ಲಿ ಮಳೆಗಾಲದಲ್ಲಿ ಜನರು ನೆಮ್ಮದಿಯಿಂದ ಬದುಕುವುದೇ ಅಸಾಧ್ಯ ಎನ್ನುವಂತಾಗಿದೆ.
ಜೋರಾಗಿ ಮಳೆ ಸುರಿದರೆ ಮನೆಯೊಳಗೆ ಮಳೆ ನೀರು ನುಗ್ಗುವ ಭೀತಿ ನಿರಂತರ. ಮಂಗಳೂರಿನ ಮುಖ್ಯ ರಸ್ತೆಗಳು ಚರಂಡಿಗಳಿಲ್ಲದ ಕಾರಣದಿಂದ ಮಳೆಗಾಲದಲ್ಲಿ ಹೊಳೆಗಳಾಗುತ್ತಿವೆ. ಕೇವಲ ಮೂರು ದಿನಗಳ ಮಳೆಯಿಂದಾಗಿ ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್ ಸಮೀಪದ ರಾವ್ ಅಂಡ್ ರಾವ್ ವೃತ್ತ ಮಳೆ ನೀರಿನಿಂದ ಮುಳುಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಬಂಟ್ವಾಳದಿಂದ ಉಡುಪಿವರೆಗೆ ಈ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಮಳೆ ನೀರು ಉಕ್ಕಿಹರಿಯುವ ಅಪಾಯವಿದೆ. ಅಂತೂ ಕರಾವಳಿ ಪ್ರದೇಶ ಈ ಮಳೆಗಾಲದಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿರುತ್ತದೆ.












Click it and Unblock the Notifications