ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ರೌಡಿ ಆನೆಗಳ ಪುಂಡಾಟಿಕೆ, ಪ್ರತ್ಯಕ್ಷ ವರದಿ

By * ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

ಮೈಸೂರು, ಜೂನ್ 8: ಇದುವರೆಗೆ ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ದಾಂಧಲೆ ನಡೆಸುತ್ತಾ ರೈತರ ಪಾಲಿಗೆ ಕಂಟಕವಾಗಿದ್ದ ಕಾಡಾನೆಗಳು ಇಂದು ಮುಂಜಾನೆ ಮೈಸೂರು ನಗರದ ಹೃದಯ ಭಾಗದಲ್ಲಿ ಕಾಣಿಸಿಕೊಂಡು ಇಡೀ ನಗರವೇ ಬೆಚ್ಚಿಬೀಳುವಂತೆ ಮಾಡಿವೆ.

ಅಷ್ಟೇ ಅಲ್ಲ ನಗರದಾದ್ಯಂತ ಎಲ್ಲೆಂದರಲ್ಲಿ ದಾಳಿ ಮಾಡಿದ ಕಾಡಾನೆ ಒಬ್ಬ ವ್ಯಕ್ತಿ ಹಾಗೂ ಹಸುವಿನ ಪ್ರಾಣ ತೆಗೆದಿದೆಯಲ್ಲದೆ, ಹಲವಾರು ವಾಹನಗಳನ್ನು ಜಖಂಗೊಳಿಸಿದೆ. ಕಾಡಾನೆಯನ್ನು ಕಂಡು ಪ್ರಾಣಭಯದಲ್ಲಿ ಓಡಿದ ಸಂದರ್ಭ ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ.

ಬಹುಶಃ ಇದೇ ಮೊದಲ ಬಾರಿಗೆ ಇಂತಹವೊಂದು ಘಟನೆ ಮೈಸೂರಿನಲ್ಲಿ ನಡೆದಿದ್ದು, ಪುಂಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹಾಗೂ ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಆದರೆ ಆನೆಗಳನ್ನು ಅಷ್ಟು ಸುಲಭವಾಗಿ ಸರೆಹಿಡಿಯುವುದು ಸಾಧ್ಯವಾಗುವಂತೆ ಕಂಡು ಬರುವಂತಿಲ್ಲ.

ಬಂಬೂ ಬಜಾರ್‌ನಲ್ಲಿ ಪ್ರತ್ಯಕ್ಷ: ಮೈಸೂರು ನಗರಕ್ಕೆ ನಗರಕ್ಕೆ ಆಗಮಿಸಿರುವ ಈ ಆನೆಗಳು ತಿ.ನರಸೀಪುರದಿಂದ ಬನ್ನೂರು ಮಾರ್ಗವಾಗಿ ಬಂದಿವೆ ಎನ್ನಲಾಗಿದ್ದು, ಬೆಳಿಗ್ಗೆ ಸುಮಾರು 5ಗಂಟೆ ವೇಳೆಯಲ್ಲಿ ಮೊದಲ ಬಾರಿಗೆ ನಗರದ ಬಂಬೂಬಜಾರ್‌ನಲ್ಲಿ ಪ್ರತ್ಯಕ್ಷವಾಗಿವೆ. ಆ ನಂತರ ಒಂದು ಕಾಡಾನೆ ನಗರದ ಹೊರ ವಲಯದ ನಾಯ್ಡುನಗರದ ಫಾರಂ ಹೌಸ್‌ನಲ್ಲಿ ಸೇರಿಕೊಂಡರೆ ಮತ್ತೊಂದು ಕಾಡಾನೆ ನೇರವಾಗಿ ಕೆಆರ್‌ರಸ್ತೆಯಲ್ಲಿ ಸಾಗಿ ಅಲ್ಲಿ ಕಟ್ಟಿಹಾಕಿದ್ದ ಹಸುವೊಂದನ್ನು ಸೊಂಡಿಲಿನಿಂದ ಬಡಿದು, ಕೋರೆಯಿಂದ ಚುಚ್ಚಿ ಸಾಯಿಸಿದೆ.

ಅಷ್ಟರಲ್ಲಿಯೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಅದಕ್ಕೆ ಅರಿವಳಿಕೆ ಮದ್ದನ್ನು ನೀಡಿದರಾದರು ಅದು ಪ್ರಯೋಜನವಾಗಿಲ್ಲ. ಆ ನಂತರ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸಾಗಿ ಮೋರ್ ಕಾಂಪ್ಲೆಕ್ಸ್ ಬಳಿ ಕಾಡಾನೆಯನ್ನು ನೋಡಲು ಹೊರಬಂದಿದ್ದ ಸೆಕ್ಯೂರಿಟಿ ಗಾರ್ಡ್ ರೇಣುಕಾಪ್ರಸಾದ್(55) ಎಂಬ ವ್ಯಕ್ತಿಯನ್ನು ಸೊಂಡಿಲಿನಿಂದ ಒಗೆದು ಕೊಂದು ಹಾಕಿದೆ. ಸಾರ್ವಜನಿಕರ ಬೊಬ್ಬೆ ಕಿರುಚಾಟಕ್ಕೆ ಇನ್ನಷ್ಟು ಕ್ರೋಧಗೊಂಡ ಕಾಡಾನೆ ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನಗಳನ್ನು ಜಖಂಗೊಳಿಸುತ್ತಾ ಮಹಾರಾಣಿ ಕಾಲೇಜಿನತ್ತ ಸಾಗಿದೆ.

ಆ ನಂತರ ಅಲ್ಲಿಂದ ಡಿಸಿ ಕಛೇರಿ ದಾಟಿ ಸರಸ್ವತಿಪುರಂ ಕಡೆಗೆ ತೆರಳಿ ಅಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿಗೆ ನುಗ್ಗಿ ಮಹಿಳಾ ಹಾಸ್ಟೆಲ್ ಬಳಿ ದಾಂಧಲೆ ನಡೆಸಿತು. ಈ ನಡುವೆ ಕಾಡಾನೆಯನ್ನು ಹಿಂಬಾಲಿಸಿದ ತಂಡ ನಾಲ್ಕು ಬಾರಿ ಅರಿವಳಿಕೆ ಮದ್ದನ್ನು ಅದರ ಮೇಲೆ ಪ್ರಯೋಗಿಸಿದರೂ ಅದು ಪ್ರಜ್ಞೆ ತಪ್ಪಲಿಲ್ಲ.

ಆ ನಂತರ ಅಲ್ಲಿಂದ ಮುಂದೆ ಸಾಗಿದ ಪುಂಡಾನೆ ಕುಕ್ಕರಳ್ಳಿ ಕೆರೆ ಬಳಿಯಿರುವ ಡೋಬಿ ಘಾಟ್‌ನ ಪೊದೆಯೊಳಗೆ ಸೇರಿಕೊಂಡಿತು. ಈ ಸಂದರ್ಭ ಐದನೇ ಬಾರಿಗೆ ಅರಿವಳಿಕೆ ಮದ್ದನ್ನು ನೀಡಲಾಯಿತಾದರೂ ಅದು ಪೊದೆಯೊಳಗೆ ಹೋಗಿ ನಿಂತಿದ್ದರಿಂದ ಕಾರ್ಯಾಚರಣೆಗೆ ಅನಾನುಕೂಲವಾಯಿತು. ಆದರೆ ಆ ವೇಳೆಗೆ ಅರಿವಳಿಕೆ ಮದ್ದು ಕೆಲಸ ಮಾಡಿದ್ದರಿಂದ ನರಹಂತಕ ಆನೆ ಪೊದೆಯೊಳಗೆ ಸೇರಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿತು.

ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿಗಳು ಅದನ್ನು ಸುತ್ತುವರಿದು ಸರಪಳಿ ಹಾಗೂ ಹಗ್ಗದಿಂದ ಕಟ್ಟಿ ತಮ್ಮ ವಶಕ್ಕೆ ತೆಗೆದುಕೊಂಡರು. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆನೆಯನ್ನು ಎಲ್ಲಿಗೆ ಸಾಗಿಸಬೇಕು ಎಂಬುವುದರ ಬಗ್ಗೆ ಇನ್ನಷ್ಟೆ ತಿಳಿಯ ಬೇಕಿದೆ. ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾದ ಕಾರ್ಯಾಚರಣೆ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆಯಿತು.

ಶಾಲಾ ಕಾಲೇಜಿಗೆ ರಜೆ: ಈ ನಡುವೆ ನಗರಕ್ಕೆ ಕಾಡಾನೆ ಆಗಮಿಸಿ ದಾಂಧಲೆ ನಡೆಸುತ್ತಿರುವ ಸುದ್ದಿ ಹರಡುತ್ತಿದ್ದಂತೆಯೇ ಕುತೂಹಲಗೊಂಡ ಸಾರ್ವಜನಿಕರು ತಂಡೋಪತಂಡವಾಗಿ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸುತ್ತಿದ್ದುದರಿಂದ ಪೊಲೀಸರಿಗೆ ಜನರನ್ನು ನಿಯಂತ್ರಿಸಿ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡವುದು ಕಷ್ಟದ ಕೆಲಸವಾಗಿ ಪರಿಣಮಿಸತೊಡಗಿತು.

ಈ ಸಂದರ್ಭ ಲಾಠಿ ಬೀಸಿ ಜನರನ್ನು ನಿಯಂತ್ರಿಸುವ ಕಾರ್ಯವನ್ನು ಪೊಲೀಸರು ಮಾಡಬೇಕಾಯಿತು. ಇನ್ನೊಂದೆಡೆ ಪೊಲೀಸರು ಸಾರ್ವಜನಿಕರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಕ್ಕೆ ಬಾರದಂತೆ ಸೂಚನೆ ನೀಡಿದರು. ಅಲ್ಲದೆ ಜಿಲ್ಲಾಡಳಿತದಿಂದ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಯಿತು.

ಸಾಕಾನೆಗಳ ಬಳಕೆ: ಕಾಡಾನೆಯನ್ನು ಸೆರೆ ಹಿಡಿಯಲು ಸಾಕಾನೆಗಳ ಸಹಾಯ ಪಡೆಯುವ ನಿಟ್ಟಿನಲ್ಲಿ ಕೊಡಗಿನ ತಿತಿಮತಿಯಿಂದ ಅಭಿಮನ್ಯು, ನಾಗರಹೊಳೆಯಿಂದ ಅರ್ಜುನ್, ಚಾಮರಾಜನಗರದ ಕೆ.ಗುಡಿಯಿಂದ ಗಜೇಂದ್ರ ಹಾಗೂ ಶ್ರೀರಾಮ ಆನೆಯನ್ನು ಕರೆತರಲು ಸೂಚನೆ ನೀಡಲಾಯಿತು. ಆದರೆ ಈ ಆನೆಗಳು ಮೈಸೂರು ತಲುಪುವ ವೇಳೆಗೆ ನರಹಂತಕ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಮತ್ತೊಂದು ಕಾಡಾನೆ ಸೆರೆಗೆ ಯತ್ನ: ನಗರಕ್ಕೆ ಎರಡು ಕಾಡಾನೆಗಳು ಆಗಮಿಸಿದ್ದು, ಒಂದೊಂದು ಆನೆ ಒಂದೊಂದು ದಿಕ್ಕಿನಲ್ಲಿ ಸಾಗಿದ್ದವು. ಆದರೆ ನಾಯ್ಡುನಗರದತ್ತ ತೆರಳಿದ ಆನೆ ಫಾರಂ ಹೌಸ್‌ನಲ್ಲಿ ಸೇರಿಕೊಂಡಿದ್ದರಿಂದ ಸಾರ್ವಜನಿಕರಿಗೆ ಯಾವುದೇ ಉಪಟಳ ಮಾಡಿಲ್ಲ. ಆದರೆ ಅದು ಅಲ್ಲಿಂದ ಹೊರಬಂದು ಯಾವ ಕ್ಷಣದಲ್ಲಿಯೂ ದಾಂಧಲೆ ನಡೆಸುವ ಸಾಧ್ಯತೆಯಿರುವುದರಿಮದ ಅದರತ್ತ ಕಾರ್ಯಾಚರಣೆಗೆ ಮತ್ತೊಂದು ತಂಡ ತೆರಳಿದ್ದು, ಕಾರ್ಯಪ್ರವೃತ್ತವಾಗಿರುವ ಬಗ್ಗೆ ತಿಳಿದು ಬಂದಿದೆ.

ಮೃತರ ಕುಟುಂಬಕ್ಕೆ ಪರಿಹಾರ: ನರಹಂತಕ ಆನೆಯಿಂದ ಮೃತಪಟ್ಟ ರೇಣುಕಾಪ್ರಸಾದ್ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 5 ಲಕ್ಷ ರೂಪಾಯಿಯ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೆ ಅರಣ್ಯ ಸಚಿವ ವಿಜಯಶಂಕರ್ ಕೂಡ ಮೂರೂವರೆ ಲಕ್ಷ ರೂಪಾಯಿಯ ಪರಿಹಾರ ಘೋಷಿಸಿದ್ದಾರೆ.

English summary
Two tuskars entered Mysore city on the morning of Tuesday 8th June. The pair went round the city localities terrorizing people, killed a security guard, created havoc.After fours of 'operation pachyderm' one elephant trapped, another one still hiding in a farm house - eye witness report by Lava Kumar in Mysore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X