ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಸೆನ್ಸ್ ಇಲ್ಲದೆ ಡ್ರೈವ್ ಮಾಡುವ ಮೈಸೂರು ಬಾಲಕ

By * ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

3-year-old Mysore boy drives car
ಮೈಸೂರು, ಮೇ 5 : ಯಾರೂ ಮಾಡದ್ದನ್ನು ತಾವು ಮಾಡಿ ಆ ಮೂಲಕ ತಮ್ಮ ಸಾಧನೆಯನ್ನು ಗಿನ್ನಿಸ್ ದಾಖಲೆ ಮಾಡಬೇಕೆಂದು ಹಂಬಲಿಸುವವರು ವಿಶ್ವದಲ್ಲಿ ಸಾವಿರಾರು ಮಂದಿಯಿದ್ದಾರೆ. ಅವರ ನಡುವೆ ಈಗ ಮೈಸೂರಿನ 3 ವರ್ಷ 9 ತಿಂಗಳ ಪೋರನೊಬ್ಬ ಕಾರು ಚಲಾಯಿಸಿ ಗಿನ್ನಿಸ್ ದಾಖಲೆ ಬರೆಯುವ ತವಕದಲ್ಲಿದ್ದಾನೆ.

ಈ ಪೋರನ ಹೆಸರು ಎನ್.ಡಿ. ಸುಮುಖ್. ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ದಯಾನಂದ ಹಾಗೂ ನಾಗಶ್ರೀ ದಂಪತಿಗಳ ಪುತ್ರನಾದ ಈತನಿಗೆ ಸೋದರಮಾವ ಎಸ್.ಕೆ.ವಿವೇಕಾನಂದರವರೇ ಪ್ರೇರಣೆಯಂತೆ. ಮಾವ ತಮ್ಮ ಓಮ್ನಿಯನ್ನು ಚಾಲನೆ ಮಾಡುತ್ತಿದ್ದರೆ ಅವರ ತೊಡೆ ಮೇಲೆ ಕುಳಿತು ಸ್ಟೇರಿಂಗ್ ತಿರುಗಿಸುತ್ತಿದ್ದನಂತೆ. ಸಾಮಾನ್ಯವಾಗಿ ಮಕ್ಕಳು ಈ ರೀತಿಯ ತುಂಟಾಟಗಳನ್ನು ಮಾಡುವುದು ಸಾಮಾನ್ಯ. ಆದರೆ ಸುಮುಖ್ ಮಾಡುತ್ತಿದ್ದುದು ತುಂಟಾಟವಾಗಿರಲಿಲ್ಲ ಅದು ಕಲಿಯುವ ಹಂಬಲವಾಗಿತ್ತು. ದಿನಕಳೆದಂತೆ ಮಾವನ ತೊಡೆ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ಪೋರ ಕೇವಲ ಮೂರು ತಿಂಗಳಲ್ಲಿ ಸ್ಟೇರಿಂಗ್ ಮೇಲೆ ಹಿಡಿತ ಸಾಧಿಸಿದ. ಇದನ್ನು ನೋಡಿದ ಮಾವ ವಿವೇಕಾನಂದರು ಆತನನ್ನು ಮೈದಾನಕ್ಕೆ ಕರೆದೊಯ್ದು ಅಭ್ಯಾಸ ಮಾಡಿಸಲು ಮುಂದಾದರು. ಅವರ ಮಾರ್ಗದರ್ಶನದಲ್ಲಿ ಕೇವಲ ಒಂಬತ್ತು ತಿಂಗಳಲ್ಲಿ ಸುಮುಖ್ ಲೀಲಾಜಾಲವಾಗಿ ಓಮ್ನಿಯನ್ನು ಚಾಲಿಸತೊಡಗಿದನು.

ಸುಮುಖ್‌ಗೆ ವಾಹನ ಚಾಲಿಸುವುದರಲ್ಲಿ ಆಸಕ್ತಿಯಿರುವುದನ್ನು ನೋಡಿದ ಮಾವ ಚಾಲನೆಗೆ ಅನುಕೂಲವಾಗುವಂತೆ ಕಾರಿನ ಬ್ರೇಕ್, ಆಕ್ಸಲರೇಟರ್, ಬ್ರೇಕ್‌ಗೆ ಕಬ್ಬಿಣದ ತುಂಡು ಅಳವಡಿಸಿ ಆತನ ಕಾಲಿಗೆ ಎಟುಕುವಂತೆ ಮಾಡಿದ್ದಾರೆ. ಕುಳಿತು ಚಾಲನೆ ಮಾಡಲು ಅನುಕೂಲವಾಗುವಂತೆ ಸೀಟನ್ನು ಕೂಡ ಎತ್ತರಿಸಿದ್ದಾರೆ. ತನ್ನ ಮಾವನಿಂದ ತರಬೇತಿ ಪಡೆದಿರುವ ಸುಮುಖ್ ವಾಹನ ದಟ್ಟಣೆಯಲ್ಲಿಯೂ ಲೀಲಾಜಾಲವಾಗಿ ವಾಹನ ಚಾಲಿಸುತ್ತಾನೆ. ಗಂಟೆಗೆ 60 ಕಿ.ಮೀ ವೇಗದಲ್ಲಿ ಚಾಲನೆ ಮಾಡುವ ಈತ ಕಳೆದ ಏಪ್ರಿಲ್ 22ರಂದು ಶಿವಮೊಗ್ಗದ ಮೈದಾನದಲ್ಲಿ ವಾಹನ ಚಾಲಿಸಿ ಸೈ ಎನಿಸಿಕೊಂಡಿದ್ದಾನೆ. ಇಂಗ್ಲೆಂಡ್‌ನಲ್ಲಿ 9 ವರ್ಷದ ಬಾಲಕ ಕಾರು ಚಾಲನೆ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದು, ಅದನ್ನು ಮುರಿದು ತನ್ನ ಹೆಸರು ಬರೆಯುವ ಆತುರದಲ್ಲಿದ್ದಾನೆ ಈ ಪೋರ.

ಮೇ 6ರಂದು ಮೈಸೂರಿನ ಕಲಾ ಮಂದಿರದಲ್ಲಿ ಬಸವಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಈ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಸಚಿವ ಎಸ್.ಎ.ರಾಮದಾಸ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದು, ಅವರ ಸಮ್ಮುಖದಲ್ಲಿ ಓಮ್ನಿಯನ್ನು ಚಾಲಿಸುವ ಇರಾದೆ ಪೋರನದಾಗಿದೆ.

ಚಿಕ್ಕಂದಿನಿಂದಲೇ ಸೂಕ್ಷ್ಮಗ್ರಹಿಕೆಯ ಬುದ್ದಿ ಹೊಂದಿರುವ ಸುಮುಖ್ ಅನುಕರಣೆ ಮಾಡುವುದರಲ್ಲಿಯೂ ಮಾಡುವುದರಲ್ಲಿಯೂ ನಿಸ್ಸೀಮನಾಗಿದ್ದಾನೆ. ಈಗಾಗಲೇ ಬೇಬಿಸಿಟ್ಟಿಂಗ್ ಮುಗಿಸಿರುವ ಸುಮುಖ್‌ನನ್ನು ಎಲ್‌ಕೆಜಿಗೆ ಸೇರಿಸುವ ಸಿದ್ದತೆಯಲ್ಲಿ ಹೆತ್ತವರಿದ್ದಾರೆ. ಈ ಮೂರು ವರ್ಷದ ಹುಡುಗ ಅಸಾಧಾರಣ ಸಾಧನೆಯನ್ನೇನೋ ಮಾಡುತ್ತಿದ್ದಾನೆ. ಆದರೆ, ಇದು ನ್ಯಾಯ ಸಮ್ಮತವೆ? ವಾಹನ ಚಲಾಯಿಸಲು ಲೈಸೆನ್ಸ್ ಕೂಡ ಪಡೆದಿರದ ಇವ ಏನಾದರೂ ಹೆಚ್ಚುಕಡಿಮೆ ಮಾಡಿದರೆ ಅಥವಾ ಮಾಡಿಕೊಂಡರೆ ಯಾರು ಹೊಣೆ? ಪಾಲಕರು ಚಿಂತಿಸಲಿ.

English summary
3-year-old boy from Mysore has surprises everyone by driving car independently. He has set his eyes on Guinness Book of Records to become the youngest kid to drive car. Is this legally allowed? Should he be allowed to drive car without licence?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X