ಒಸಾಮಾ ಫಿನಿಷ್, ದಾವೂದ್ ಪಾಳಿ ಯಾವಾಗ?

ಐಎಸ್ಐನನ್ನು ಭಯೋತ್ಪಾದಕ ಸಂಘಟನೆ ಎಂದು ಕಡೆಗೂ ಒಪ್ಪಿಕೊಂಡಿರುವ ಅಮೆರಿಕಾ, ಅಟ್ಟಹಾಸದಿಂದ ಮೆರೆದಾಡುತ್ತಿರುವ ದಾವೂದ್ ಇಬ್ರಾಹಿಂನನ್ನು ಮಟ್ಟಹಾಕಲು ಮುಂದಾಗುವುದೆ? 1993ರಲ್ಲಿ ಮುಂಬೈಯಲ್ಲಿ ಸರಣಿ ಬಾಂಬ್ ದಾಳಿ ನಡೆಸಿದ್ದ ಆತನನ್ನು ಹತ್ಯೆಗೈಯುವುದಿರಲಿ ಇನ್ನೂ ಹಿಡಿಯಲಾಗಿಲ್ಲ. ಈ ನಡವೆ, ಒಸಾಮಾನನ್ನು ಹೊಸಕಿಹಾಕಲು ಅಮೆರಿಗಾ ಯಶಸ್ವಿಯಾಗಿರುವುದು ಜನರಲ್ಲಿ ಆಶಾಭಾವನೆ ಮೂಡಿಸಿದೆ.
ಖೈದಾ ಸೇಡು, ಪ್ರವಾಸಿಗರಿಗೆ ಎಚ್ಚರಿಕೆ : ಒಸಾಮಾ ಬಿನ್ ಲಾಡೆನ್ ನನ್ನು ಅಮೆರಿಕದ ಸೇನೆ ಹತ್ತು ವರ್ಷದ ನಂತರ, ಭಯೋತ್ಪಾದನೆಯ ಆಗರವಾಗಿರುವ ಪಾಕಿಸ್ತಾನದಲ್ಲಿ ಮೇ 1ರ ಬೆಳಗಿನ ಜಾವ 12.30ಕ್ಕೆ ಭೀಕರವಾಗಿ ಹತ್ಯೆಗೈದಿದ್ದು, ಸೆಪ್ಟೆಂಬರ್ 11ರ ಭಯಾನಕತೆಯನ್ನು ಕಣ್ಣಾರೆ ಕಂಡಿರುವ ಅಮೆರಿಕನ್ನರಿಗೆ ಮಾತ್ರವಲ್ಲ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯಬೇಕೆಂದು ಬಯಸುವ ಜಗತ್ತಿನ ಎಲ್ಲರಲ್ಲೂ ಹರ್ಷ ಮೂಡಿಸಿದೆ.
ನಟ್ಟನಡುರಾತ್ರಿಯಲ್ಲೇ ಇಡೀ ಅಮೆರಿಕ ಎಚ್ಚೆತ್ತು ಕುಳಿತು ಗೆಲುವಿನ ಕೇಕೆ ಹಾಕುತ್ತಿದೆ. ಸೆಪ್ಟೆಂಬರ್ 11ರ ಆ ದಾಳಿಯಲ್ಲಿ ತಮ್ಮ ಬಂಧು, ಗೆಳೆಯರನ್ನು ಕಳೆದುಕೊಂಡ ಕಣ್ಣೀರಿಟ್ಟಿದ್ದ ಜನರು ಈಗ ಆನಂದಭಾಷ್ಪ ಸುರಿಸುತ್ತಿದ್ದಾರೆ. ಆದರೆ, ಇದೇ ಸಮಯದಲ್ಲಿ ಅಲ್ ಖೈದಾದ ಅಧಿನಾಯಕ ಒಸಾಮಾ ಬಿನ್ ಲಾಡೆನ್ ಸತ್ತಿದ್ದರೂ ಭಯೋತ್ಪಾದನೆ ಜಗತ್ತಿನ ಮೂಲೆಮೂಲೆಗಳಲ್ಲಿ ಇನ್ನೂ ಜೀವಂತವಾಗಿದೆ ಎಂಬ ಅರಿವು ಅಮೆರಿಕಾಗಿದೆ. ಲಾಡೆನ್ ನನ್ನು ಹಿಡಿದರೆ ಅಥವಾ ಸಾಯಿಸಿದರೆ ವಿಧ್ವಂಸಕ ಅಣುಯುದ್ಧ ಮಾಡುವುದಾಗಿ ಕಣಕಣದಲ್ಲೂ ದ್ವೇಷ ತುಂಬಿಕೊಂಡಿರುವ ಅಲ್ ಖೈದಾ ಹೇಳಿರುವುದು ಇದಕ್ಕೆ ಸಾಕ್ಷಿ.
ಅಮೆರಿಕಾದ ವಿರುದ್ಧ ಅಥವಾ ವಿಶ್ವದಾದ್ಯಂತ ಸಂಚರಿಸುವ ಅಮೆರಿಕನ್ನರ ವಿರುದ್ಧ ಅಲ್ ಖೈದಾ ಉಗ್ರರು ಸೇಡಿನ ದಾಳಿ ನಡೆಸಬಹುದೆಂಬ ಎಚ್ಚರಿಕೆಯನ್ನು ಜನತೆಗೆ ಅಮೆರಿಕಾ ಸರಕಾರ ನೀಡಿದೆ. ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಾಗುತ್ತಿರುವುದು ಈ ಕಳವಳವನ್ನು ಇಮ್ಮಡಿಗೊಳಿಸಿದೆ. ಪಾಕಿಸ್ತಾನದಲ್ಲಿ ಇರುವ ಅಮೆರಿಕನ್ನರು ಸಂಚರಿಸುವುದನ್ನು ಕಡಿಮೆ ಮಾಡಬೇಕೆಂದು ಕಟ್ಟೆಚ್ಚರಿಕೆ ನೀಡಿದೆ. ಜನ ಮನೆಯಲ್ಲೇ ಉಳಿಯಬೇಕು, ಹೊಟೇಲುಗಳಲ್ಲಿ ಅಥವಾ ಸಾರ್ವಜನಿಕವಾಗಿ ಜಮಾಯಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications