ಶಿವಮೊಗ್ಗದಲ್ಲಿ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳು ಬೆಂಕಿಗೆ ಆಹುತಿ

ಶಿವಮೊಗ್ಗದಲ್ಲಿ ಮೌಲ್ಯಮಾಪನಕ್ಕಾಗಿ ಸಂಗ್ರಹಿಸಿಡಲಾಗಿದ್ದ ಹಿಂದಿ ಭಾಷೆಯ ಉತ್ತರ ಪತ್ರಿಕೆಗಳ ಸುಮಾರು 16 ಬಂಡಲ್‌ಗಳು ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಬೂದಿಯಾಗಿವೆ. ಇವೆಲ್ಲವೂ ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು. ಪರೀಕ್ಷೆ ಬರೆದು ರಜಾ ಕಳೆಯುತ್ತಿದ್ದ ವಿದ್ಯಾರ್ಥಿಗಳು ಈಗ ಮತ್ತೆ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತಾಗಿದೆ.
ಉತ್ತರ ಪತ್ರಿಕೆಗಳು ಸುಟ್ಟು ಕರಕಲಾದ ಕಾರಣ, ಮೈಸೂರು ಜಿಲ್ಲೆಯ 14 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಮಂಡಳಿ ನಿರ್ಧರಿಸಿದೆ. ಉತ್ತರ ಪತ್ರಿಕೆಗಳು ಅಷ್ಟೇನು ಹಾನಿಯಾಗಿಲ್ಲ ಎಂದು ಮಂಡಳಿ ಪ್ರತಿಪಾದಿಸುತ್ತಿತ್ತು. ಮಂಡಳಿ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಉತ್ತರ ಪತ್ರಿಕೆಗಳು ಸುಟ್ಟು ಕರಕಲಾಗಿರುವ ಅಂಶ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆ ಅನಿವಾರ್ಯವಾಗಿದ್ದು ಒಂದೆರಡು ದಿನಗಳಲ್ಲಿ ದಿನಾಂಕ ಮತ್ತಿರರ ವಿವರಗಳನ್ನು ಪ್ರಕಟಿಸಲಾಗುತ್ತದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಆದರೆ ಪರೀಕ್ಷೆ ಮುಗಿಸಿ ರಜೆಯಲ್ಲಿರುವ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾಹಿತಿ ನೀಡುವುದು ಹೇಗೆ ಎಂಬುದು ಮಂಡಳಿಗೆ ದೊಡ್ಡತಲೆನೋವಾಗಿದೆ. ಮಾಧ್ಯಮಗಳ ಮೂಲಕ ಈ ಬಗ್ಗೆ ತಿಳುವಳಿಕೆ ನೀಡಲು ಮಂಡಲಿ ಮುಂದಾಗಿದೆ.












Click it and Unblock the Notifications