ಉಪಮೇಯರ್ ತೊರೆಯುವ ಮುನ್ನ ದಯಾನಂದ್ ಮದುವೆ ಗಡಿಬಿಡಿ

ಬೆನ್ನಿಗಾನಹಳ್ಳಿ ವಾರ್ಡ್ ಮೂಲಕ ಮೊದಲ ಬಾರಿಗೆ ಕಾರ್ಪೊರೇಟರ್ ಆಯ್ಕೆಯಾಗಿ, ಅತ್ಯಂತ ಕಿರಿಯ ವಯಸ್ಸಿಗೆ ಉಪ ಮೇಯರ್ ಹುದ್ದೆ ಅಲಂಕರಿಸಿದ ಅಗ್ಗಳಿಕೆ ನಮ್ಮ ದಯಾನಂದ್ ಅವರದ್ದು. ಮಾಜಿ ಮೇಯರ್ ಆಗಿಯೇ ಹಸೆ ಮಣೆ ಏರಬೇಕು ಎಂದು ಬಯಸಿರುವ ದಯಾನಂದ್ ಮೇಯರ್ ನಟರಾಜ್ ಗೆ ದುಂಬಾಲು ಬಿದ್ದು, ಏಪ್ರಿಲ್ 30 ರವರೆಗೂ ಉಪ ಮೇಯರ್ ಆಗಿ ಇರುವಂತೆಯೇ ನೋಡಿಕೊಳ್ಳಿ ಎಂದು ಅಹವಾಲು ಸಲ್ಲಿಸಿದ್ದಾರೆ ಎಂದು ಬಿಬಿಎಂಪಿ ಮೂಲಗಳು ಡಂಗುರ ಹೊಡೆಯುತ್ತಿವೆ.
ಎಷ್ಟೇ ಆಗಲಿ ನಟರಾಜ್ ಮಹಾ ಪುರಪಿತೃ. ತಮ್ಮ ಪುರದಲ್ಲಿ ಮಕ್ಕಳ ಮದುವೆಯಾಗುತ್ತಿದ್ದರೆ ಪಿತೃ ಸ್ಥಾನದಲ್ಲಿ ನಿಂತು ಆಶೀರ್ವಾದ ಮಾಡದಿರುತ್ತಾರೆಯೇ. ಹಾಗಾಗಿಯೇ ದಯಾನಂದ್ ಕೋರಿಕೆಗೂ ತಥಾಸ್ತು ಎಂದಿದ್ದಾರೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ದಿನಾಂಕವನ್ನು ರವಷ್ಟು ಮುಂದಕ್ಕೆ ಹಾಕಿ. ಏಪ್ರಿಲ್ 30ಕ್ಕೆ ನಿಗದಿ ಮಾಡಿದರೆ ಹೇಗೆ ಎಂದು ಪ್ರಾದೇಶಿಕ ಆಯುಕ್ತರಿಗೆ ಅದಾಗಲೇ ಪತ್ರ ಬರೆದಿದ್ದಾರೆ. ಇದಕ್ಕೇನಾದರೂ ಆಯುಕ್ತರು ಮನ್ನಣೆ ನೀಡಿದರೆ ದಯಾನಂದರು ನಿರ್ವಿಘ್ನವಿಲ್ಲದೆ ಉಪ ಮೇಯರ್ ಆಗಿಯೇ ಸಪ್ತಪದಿ ತುಳಿದು ತಮ್ಮ ಬಯಕೆ ಈಡೇರಿಸಿಕೊಳ್ಳಬಹುದು. ನಿಮ್ಮ ಹಾರೈಕೆ ಏನು!?
ನಮ್ಮ ವರನ ಪ್ರವರ ಹೀಗಿದೆ: ಸಿಲಿಕಾನ್ ಸಿಟಿಯ ಪ್ರತಿಷ್ಠೆಗೆ ತಕ್ಕಂತೆ ದಯಾನಂದ್ ಬೆಂಗಳೂರಿಗೆ ಭೂಷಣಪ್ರಾಯರು ಎಂಬುದಲ್ಲಿ ಎರಡು ಮಾತಿಲ್ಲ. ಪಾಲಿಟಿಕ್ಸು ಅಥವಾ ಐಎಎಸ್ ಅಧಿಕಾರಿಯಾಗಿ ಮಾತ್ರ ಪೌರ ಸೇವೆ ಮಾಡಬಹುದು ಎಂಬುದನ್ನು ನಂಬಿರುವ ದಯಾನಂದು ಐಎಎಸ್ ಬರೆದವರೆ. ಅದಕ್ಕೂ ಮುನ್ನ, ಎಂಟೆಕ್ ಪಾಸು ಮಾಡವ್ರೆ. ಟ್ವೀಟು, ಬ್ಲಾಗು ಎಂದೆಲ್ಲ ಸೋ ಕಾಲ್ಡ್ ಸೋಯಿಷಲ್ ನೆಟ್ ವರ್ಕಿಂಗ್ ನಲ್ಲಿ ಸದಾ ಬಿಜಿಯಾಗಿರುತ್ತಾರೆ. ಜನರನ್ನು ತಲುಪಲು ಇದೇ ರಾಜಮಾರ್ಗ ಎಂಬುದು ಅವರ ಖಡಕ್ ನಿಲುವು. ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಯಾನಂದ್ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.












Click it and Unblock the Notifications