ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ನೆತ್ತಿ ಮೇಲೆ ಕತ್ತಿ: ಏನೋ, ಎಂತೋ!?

By Srinath
|
Google Oneindia Kannada News

Karnataka BJP Dissidence
ಬೆಂಗಳೂರು, ಮಾ. 22: ಉಪಚುನಾವಣೆಯ ಸಮ್ಮುಖದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಕೊತಕೊತನೆ ಕುದಿಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿ ಎಂಬುದು ಭಿನ್ನರ ಒಂದಂಶದ ಮೊರೆಯಾಗಿದ್ದರೆ ಸುತರಾಂ ನಾನು ಕುರ್ಚಿ ಬಿಡುವುದಿಲ್ಲ ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಬೆಂಗಳೂರು ಮತ್ತು ದೆಹಲಿ ಸ್ತರದಲ್ಲಿ ಮಂಗಳವಾರವೂ ಬಿರುಸಿನ ಚಟುವಟಿಕೆಗಳು ನಡೆದಿವೆ.

ಬಿಕ್ಕಟ್ಟಿನ ಮಧ್ಯೆ ಬೈಠಕ್: ಮಂಗಳವಾರ ಬೆಳಗ್ಗೆ ಇತ್ತ ಬೆಂಗಳೂರಿನಲ್ಲಿ ಕೇಶವಕೃಪಾದಲ್ಲಿ ಆರ್ ಎಸ್ ಎಸ್ ಬೈಠಕ್ ನಡೆದಿದೆ. ವರ್ಷದಲ್ಲಿ ಮೂರು ಬಾರಿ ನಾವು ಬೈಠಕ್ ನಡೆಸುತ್ತೇವೆ. ಇದು ಕೊನೆಯ ಬೈಠಕ್. ಪಕ್ಷದಲ್ಲಿ ಭಿನ್ನಮತದ ಬಗ್ಗೆ ವಿಶೇಷವಾಗೇನೂ ಚರ್ಚಿಸೆವು ಎಂದು ಆರೆಸ್ಸೆಸ್ ನಾಯಕರು ಹೇಳಿಕೊಂಡಿದ್ದಾರೆ. ಗಮನಾರ್ಹವೆಂದರೆ ಯಾವೊಬ್ಬ ಯಾವ ರಾಜಕೀಯ ನಾಯಕರೂ ಬೈಠಕ್-ನಲ್ಲಿ ಕಾಣಿಸಿಕೊಂಡಿಲ್ಲ. ಅಷ್ಟರಮಟ್ಟಿಗೆ ಇದು ರಾಜಕೀಯದಿಂದ ದೂರವುಳಿದಿದೆ. ಆದರೂ ಎರಡು ದಿನಗಳ ಈ ಬೈಠಕ್ ತೀವ್ರ ಕುತೂಹಲ ಕೆರಳಿಸಿದೆ. ಎರಡೂ ಗುಂಪುಗಳು ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ನಿವಾಸಳಿಗೆ ಎಡತಾಕುತ್ತಿರುವುದು ಆರೆಸ್ಸೆಸ್ ಸಮನ್ವಯ ಸಮಿತಿ ನಾಯಕರಿಗೆ ತೀವ್ರ ಇರುಸು ಮುರುಸು ಆಗಿದೆ. ದೆಹಲಿ ಬೆಳವಣಿಗೆಗಳನ್ನು ನೋಡಿಕೊಂಡು ರಾಜಕೀಯ ನಾಯಕರು ಬುಧವಾರ ಬೈಠಕ್-ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ವೀಡಿಯೊ:
ಬಿಜೆಪಿ ಭಿನ್ನಮತ, ಯಡಿಯೂರಪ್ಪ ಕುರ್ಚಿಗೆ ಕುತ್ತು

ಜಗದೀಶ್ವರಪ್ಪ ಜೋಡಿ ತಾಳಕ್ಕೆ ಅನಂತ ಮೇಳ...
ಈ ಮದ್ಯೆ ಪಕ್ಷದ ಅಧ್ಯಕ್ಷ ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ಬಳ್ಳಾರಿ ರೆಡ್ಡಿ ಸೋದರರು ಮತ್ತು ಭಿನ್ನಮತದ ಸೂತ್ರಧಾರಿ ಎಂದೇ ಬಿಂಬಿತವಾಗಿರುವ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಅವರು ಯಡಿಯೂರಪ್ಪ ವಿರುದ್ಧ ನಿರ್ಣಾಯಕ ಸಮರ ಸಾರಿದ್ದಾರೆ. ಅನಂತಕುಮಾರ್ ಅವರನ್ನು ಹೆಸರಿಸದೇ ಪಕ್ಷದ ರಾಷ್ಟ್ರೀಯ ನಾಯಕರೊಬ್ಬರು ಭಿನ್ನಮತ ಉಲ್ಬಣಕ್ಕೆ ಕಾರಣೀಭೂತರಾಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಅಧ್ಯಕ್ಷರಿಗೆ ದೂರು ನೀಡಲು ನಿರ್ಧರಿಸಿರುವುದಾಗಿ ಸಿಎಂ ಆಪ್ತವಲಯ ತಿಳಿಸಿದೆ. ಇದರಿಂದ ಭಿನ್ನಮತದ ಪಾತ್ರಧಾರಿಗಳು ಕೆಂಡಾಮಂಡಲವಾಗಿದ್ದಾರೆ. ಆಯಪ್ಪ (ಯಡಿಯೂರಪ್ಪ) ವಾಪಸ್ (ದಿಲ್ಲಿಯಿಂದ) ಬರಲಿ. ನಾವೂ ಸೈನ್ಯ ಕಟ್ಟಿಕೊಂಡು ಹೋಗುತ್ತೇವೆ. ನಮ್ಮ ತಾಕತ್ತೂ ಏನೆಂದು ತೋರಿಸ್ತೇವೆ ಎಂದು ಹೂಂಕರಿಸಿದ್ದಾರೆ.

ಅತ್ತ ದಿಲ್ಲಿ ವನವಾಸ ಮುಂದುವರಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರ ಪಕ್ಷದ ನಾಯಕರಿಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ. ನಾಯಕತ್ವದ ಬದಲಾವಣೆಗೆ ಸುತರಾಂ ಒಪ್ಪುವುದಿಲ್ಲ ಎಂದು ಪುನರುಚ್ಛರಿಸಿರುವ ಯಡಿಯೂರಪ್ಪ ಅವರು ಬಿಗಿ ಪ್ರತಿತಂತ್ರ ಹೆಣೆದಿದ್ದಾರೆ. ಮೊದಲು ಸಂಸತ್ ಭವನದಲ್ಲಿ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳಲಿದ್ದಾರೆ. ಬಳಿಕ ನಾಗಪುರದಲ್ಲಿರುವ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಸಂಜೆ ವೇಳೆಗೆ ದಿಲ್ಲಿಗೆ ಆಗಮಿಸುತ್ತಿದ್ದಂತೆ ಅವರನ್ನೂ ಯಡಿಯೂರಪ್ಪ ಭೇಟಿ ಮಾಡಲಿದ್ದಾರೆ.

ಏನೋ, ಎಂತೋ... ಪದೇ ಪದೆ ಭಿನ್ನಮತ ಉದ್ಭವವಾಗುತ್ತಿರುವ ಬಗ್ಗೆ ರೋಸಿಹೋಗಿರುವ ಯಡಿಯೂರಪ್ಪ ಈ ಇಬ್ಬರೂ ನಾಯಕರ ಬಳಿ ಖಡಕ್ಕಾಗಿಯೇ ಮಾತನಾಡುವ ಲಕ್ಷಣಗಳಿವೆ. 'ಉಪಚುನಾವಣೆ ಮುನ್ನಾ ಸಂದರ್ಭದಲ್ಲಿ ಈ ಆಟವೆಲ್ಲ ನಡೆಯದು. ಇದ್ರೆ ನಾನು ಸಿಎಂ ಆಗಿರಬೇಕು ಇಲ್ಲವೇ ಸರಕಾರ ಬೀಳಲಿದೆ' ಎಂದು ದಾಳ ಉರುಳಿಸಲು ಯಡಿಯೂರಪ್ಪ ಚಿಂತಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ಉಪಚುನಾವಣೆ ಬಗ್ಗೆ ಯಾರೊಬ್ಬರೂ ಮಾತನಾಡಲು ಸಿದ್ಧರಿಲ್ಲ. ಯಡಿಯೂರಪ್ಪ ಏನೋ, ಎಂತೋ ಎಂಬ ಆತಂಕದ ಛಾಯೆ ಆವರಿಸಿದೆ. ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆಯಿದೆ.

English summary
It seems dissidence in Karnataka BJP has reached boiling point. RSS Baitak in Bangalore and central leaders are trying to pacify the dissident groups. By Tuesday Evening (March 22) the picture would be clear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X