ಈ ಸಾಹಸಿ ಗೃಹಿಣಿಗೆ ಎವರೆಸ್ಟ್ ಏರುವಾಸೆ!

ಎವರೆಸ್ಟ್ ಶಿಖರವನ್ನು ಏರಿದ ಪ್ರಪ್ರಥಮ ಮಹಿಳೆ ಬಚೇಂದ್ರಿ ಪಾಲ್ ಅವರ ಯಶೋಗಾಥೆ ಓದಿದ ಮೇಲೆ ನನಗೂ ಈ ರೀತಿ ಸಾಹಸ ಮಾಡಲು ಮನಸ್ಸಾಯಿತು ಎಂದು ಪ್ರೇಮಲತಾ ಅಗರ್‌ವಾಲ್ ಹೇಳುತ್ತಾರೆ. ಎವರೆಸ್ಟ್ ಆರೋಹಣ ಯಾತ್ರೆ ಮಾರ್ಚ್ 25ರಂದು ಆರಂಭವಾಗಲಿದ್ದು, ಜೂನ್ 1ಕ್ಕೆ ಹಿಂದಿರುಗುವ ಯೋಜನೆಯಿದೆ. ಪ್ರೇಮಲತಾ ಅವರ ಸಾಹಸಕ್ಕೆ ಟಾಟಾ ಸಮೂಹ ಸಂಸ್ಥೆಯು ಪ್ರೋತ್ಸಾಹ ನೀಡಿದೆ.
ಉತ್ಸಾಹಿ ಮಹಿಳೆ: ಪ್ರೇಮಲತಾ ಅವರು ಈ ಮೊದಲು ಹಲವು ಪರ್ವತಾರೋಹಣಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. 2004ರಲ್ಲಿ ನೇಪಾಳದ ಐಲ್ಯಾಂಡ್ ಪೀಕ್ (20,600 ಅಡಿ), 2006ರಲ್ಲಿ ಕಾರಕೋರಂ ಪಾಸ್ (18,300 ಅಡಿ) ಮತ್ತು ವೌಂಟ್ ಸ್ಟಾಕ್ ಕಾಂಗ್ರೆ (20150 ಅಡಿ) ಪರ್ವತಗಳನ್ನು ಅವರು ಏರಿದ್ದರು. ಎವರೆಸ್ಟ್ ಆರೋಹಣಕ್ಕೆ ಪೂರ್ವ ತಯಾರಿಯಂತೆ ರೋಪ್ ತಂತ್ರಗಾರಿಕೆ, ಎತ್ತರ ಪ್ರದೇಶಗಳಲ್ಲಿ ಬೇಕಾಗುವ ಔಷಧಗಳ ಸೇವನೆ, ಸ್ವರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ.
ಸಂಪ್ರದಾಯವಾದಿ ಮರವಾಡಿ ಕುಟುಂಬದ ಪ್ರೇಮಲತಾ ತನ್ನ ಪುತ್ರಿಯರನ್ನು ಟೆನಿಸ್ ಕ್ರೀಡೆಯಲ್ಲಿ ಹುರಿದುಂಬಿಸಲು ಜಮ್‌ಶೆಡ್‌ಪುರದ ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣಕ್ಕೆ ಬರುತ್ತಿದ್ದರು. 2000ರಲ್ಲಿ ಟಾಟಾ ಕ್ರೀಡಾ ಪ್ರತಿಷ್ಠಾನವು ಆಯೋಜಿಸಿದ್ದ ಪರ್ವತ ಬೈಕಿಂಗ್ ಹಾಗೂ ಶಿಖರ ಆರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಪರ್ವತಾರೋಹಣದ ಬಗ್ಗೆ ಆಸಕ್ತಿ ಮೂಡಿತು ಎನ್ನುತ್ತಾರೆ ಪ್ರೇಮಲತಾ. ತವರು ರಾಜ್ಯ ಜಾರ್ಖಂಡ್‌ನಿಂದ ಎವರೆಸ್ಟ್ ಪರ್ವತಾರೋಹಣಕ್ಕೆ ಯತ್ನಿಸಿದ ಮೊದಲ ವ್ಯಕ್ತಿಯೆಂಬ ಹೆಮ್ಮೆ ತನಗಿದೆಯೆಂದು ಪ್ರೇಮಲತಾ ಹೇಳುತ್ತಾರೆ.











Click it and Unblock the Notifications