ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸ್ತುದೋಷ ನಿವಾರಣೆಗೆ ವಿದ್ಯಾರ್ಥಿ ಬರ್ಬರ ಹತ್ಯೆ?

By * ರೋಹಿಣಿ ಬಳ್ಳಾರಿ
|
Google Oneindia Kannada News

Student murdered in Bellary
ಬಳ್ಳಾರಿ, ಮಾ. 2 : ಖಾಸಗಿ ಶಾಲೆಯ ವಾಸ್ತುದೋಷ ನಿವಾರಣೆಗಾಗಿ ಅಲೆಮಾರಿ ಜನಾಂಗದ ವಿದ್ಯಾರ್ಥಿಯನ್ನು ಶಾಲೆಯ ಆಡಳಿತ ಮಂಡಲಿಯೇ ವಾಮಾಚಾರಕ್ಕೆ ಬಲಿ ನೀಡಿ ಶವವನ್ನು ಹಾಳು ಬಾವಿಗೆ ಹಾಕಿದೆ ಎಂದು ಆರೋಪಿಸಿ ಕುಡತಿನಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮೃತ ವಿದ್ಯಾರ್ಥಿ ಬಸವರಾಜ್ (9). ಕುಡತಿನಿ ಗ್ರಾಮದ ಅಲೆಮಾರಿ ಜನಾಂಗದ ಹುಸೇನಪ್ಪ ಅವರ ಪತ್ರ, ನೇತಾಜಿ ಶಾಲೆಯ 3ನೇ ತರಗತಿಯಲ್ಲಿ ಓದುತ್ತಿದ್ದ.

ಸೋಮವಾರ ಶಾಲೆಗೆ ಹೋಗಿದ್ದ ಬಸವರಾಜ್ ಕಾಣೆ ಆಗಿದ್ದ. ಸಂಜೆ ವೇಳೆಯಲ್ಲಿ ಆತನ ಶವ ಶಾಲೆಯ ಹಿಂಭಾಗದ ಹಾಳುಬಾವಿಯಲ್ಲಿ ಸಿಕ್ಕಿತ್ತು. ಶವವನ್ನು ಹೊರ ತೆಗೆದು ಮಂಗಳವಾರ ಶವ ಪರೀಕ್ಷೆಯನ್ನು ನಡೆಸಲಾಯಿತು. ಶವ ಪರೀಕ್ಷೆಯ ನಂತರ ಪೋಷಕರಿಗೆ ಶವವನ್ನು ಒಪ್ಪಿಸಿದ ನಂತರ, ಗ್ರಾಮಸ್ಥರು, ವಿವಿಧ ಸಂಘಟನೆಗಳವರು, ಹುಸೇನಪ್ಪನ ಸಂಬಂಧಿಕರು ಶವದ ಸಮೇತ ಗ್ರಾಮದಲ್ಲಿ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದರು. ಶಾಲೆಯ ವಿರುದ್ಧ ಆಕ್ರೋಶಗೊಂಡು ಶಾಲೆಯ ಪೀಠೋಪಕರಣಗಳನ್ನು, ಬಸ್ ಅನ್ನು ಜಖಂ ಮಾಡಿದ್ದಾರೆ.

ಆಗಿದ್ದೇನು? : ಕುಡತಿನಿ ಗ್ರಾಮದ ನೇತಾಜಿ ಖಾಸಗಿ ಶಾಲೆಗೆ ಹೊಸದಾಗಿ 2 ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಕೋಣೆಗಳ ಮಧ್ಯೆ ಇರುವ ಖಾಲಿ ಜಾಗದ ಕಲ್ಲಿನ ಮೇಲೆ ರಕ್ತದ ಕಲೆಗಳು ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಕಟ್ಟಡದ ವಾಸ್ತುದೋಷ ನಿವಾರಣೆಯ ವಾಮಾಚಾರಕ್ಕಾಗಿ ಈ ಕೊಲೆ ನಡೆದಿದೆ ಎಂದು ಮೃತನ ಪೋಷಕರು, ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಡ್ಗ ಜನಾಂಗದ ಮುಖಂಡ ಸಣ್ಣ ಮಾರೆಪ್ಪ ಮಾತನಾಡಿ, ವಾಮಾಚಾರಕ್ಕಾಗಿ, ಅಲ್ಪಸಂಖ್ಯಾತರಾಗಿರುವ ಅಲೆಮಾರಿ ಜನಾಂಗದ ಬಸವರಾಜ್‌ನನ್ನೇ ಶಾಲೆಯ ಆಡಳಿತ ಮಂಡಲಿ ಆಯ್ಕೆ ಮಾಡಿಕೊಂಡಿದೆ. ಘಟನೆ ಕುರಿತು ಸಿಓಡಿ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಈ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆದಿರುವ, ಶಾಲೆಯ ಕಾರ್ಯದರ್ಶಿ ಬಸವರಾಜ್, ಕಟ್ಟಡಕ್ಕೆ ಯಾವುದೇ ವಾಸ್ತುದೋಷ ಇಲ್ಲ. ವಾಮಾಚಾರದಲ್ಲಿ ನಮಗೆ ನಂಬಿಕೆ ಇಲ್ಲ. ಈ ಘಟನೆ ನಡೆದದ್ದಕ್ಕೆ ನಮಗೂ ಆಘಾತ ಆಗಿದೆ, ವಿಷಾದವೂ ಇದೆ. ಘಟನೆ ಕುರಿತು ಯಾವುದೇ ತನಿಖೆ ನಡೆದರೂ ವಿಚಾರಣೆಗೆ ಒಳಪಡಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬಿಗಿ ಭದ್ರತೆ : ಬಸವರಾಜ್‌ನ ಅಸಹಜ ಸಾವಿನ ಹಿನ್ನೆಲೆಯಲ್ಲಿ ಕುಡತಿನಿ ಗ್ರಾಮದಲ್ಲಿ ಉಂಟಾದ ಉದ್ವಿಗ್ನ ಸ್ಥಿತಿಯನ್ನು ನಿಭಾಯಿಸಲು ಡಿಎಆರ್‌ನ 2 ತುಕುಡಿಗಳನ್ನು ಪೊಲೀಸರು ನಿಯೋಜಿಸಿದ್ದಾರೆ. ಅಲ್ಲದೇ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುರೇರ ಸ್ಥಳದಲ್ಲೇ ಗ್ರಾಮದಲ್ಲಿ ಇದ್ದುಕೊಂಡು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಡಾ; ಚಂದ್ರಗುಪ್ತಾ ಅವರು, ವಿದ್ಯಾರ್ಥಿಯ ಸಾವಿನ ಕುರಿತು ಶಾಲೆಯ ಆಡಳಿತ ಮಂಡಲಿ, ಶಿಕ್ಷಕರು, ಸಹಪಾಠಿಗಳು ಮತ್ತು ಇನ್ನಿತರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಶ್ವಾನದಳ ಆರೋಪಿಗಳ ಪತ್ತೆಗಾಗಿ ಶ್ರಮಿಸುತ್ತಿದೆ ಎಂದರು. ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A 3rd standard student was brutally murdered in Kuditini village in Bellary district. Villagers and parents of the boy protested against the school where he was studying. Parents allege Basavaraj was murdered by school authorities only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X