ಕಾರಂಜಿಕೆರೆ ಪ್ರವೇಶ ಶುಲ್ಕ ಹೆಚ್ಚಳ: ಪ್ರೇಮಿಗಳಿಗೆ ಬರೆ

ಮೊದಲೆಲ್ಲಾ ತಲಾ 10 ರೂಪಾಯಿಯ ಟಿಕೆಟ್ ಪಡೆದು ಒಳ ಹೋದರೆ ಬಳಿಕ ತಿಳಿನೀರ ಕೆರೆಗೆ ಕಲ್ಲೆಸೆಯುತ್ತಾ... ಪೊದೆಗಳಾಚೆಗೆ ಲಲ್ಲೆಗೆರೆಯುತ್ತಾ... ಜೋಡಿ ಹಕ್ಕಿಗಳಂತೆ ಹಾರಾಡುತ್ತಾ... ತಮ್ಮದೇ ಆದ ಪ್ರೇಮಲೋಕದಲ್ಲಿ ವಿಹರಿಸಬಹುದಿತ್ತು. ಆದರೆ ಕಾರಂಜಿಕೆರೆಯು ಮೃಗಾಲಯ ಪ್ರಾಧಿಕಾರಕ್ಕೆ ಒಳಪಡುವುದರಿಂದ ಮೃಗಾಲಯದ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಕಾರಂಜಿಕೆರೆಯ ಪ್ರವೇಶ ಶುಲ್ಕವನ್ನು ಕೂಡ ಹೆಚ್ಚಿಸಲಾಗಿದ್ದು, ಮಾರ್ಚ್ 1ರಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲಾಗಿದೆ.
ಈ ಹಿಂದೆಯಿದ್ದಂತಹ 10 ರೂಪಾಯಿಯ ಪ್ರವೇಶ ಶುಲ್ಕದ ಬದಲಿಗೆ 20 ರೂಪಾಯಿಗೆ ಹೆಚ್ಚಿಸಲಾಗಿದೆ. ಮಕ್ಕಳಿಗೆ 5 ರಿಂದ 10 ರೂಪಾಯಿ, ವಿದೇಶಿಯರಿಗಿದ್ದ 10 ರೂಪಾಯಿ ಶುಲ್ಕವನ್ನು 50ಕ್ಕೆ, ಮಕ್ಕಳಿಗೆ 5 ರಿಂದ 25 ರೂಪಾಯಿಗೆ ಹೆಚ್ಚಿಸಲಾಗಿದೆ. ವಿಡಿಯೋ ಕ್ಯಾಮರಾಕ್ಕೆ 25 ರಿಂದ 150ರೂ., ಸ್ಟಿಲ್ ಕ್ಯಾಮರಾ 10 ರಿಂದ 90 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಕಾರಂಜಿಕೆರೆಯು ಪ್ರೇಮಿಗಳಿಗೆ ಎಲ್ಲಾ ರೀತಿಯಿಂದಲೂ ಸುರಕ್ಷತೆಯ ತಾಣವಾಗಿದ್ದು, ಪುಂಡಪೋಕರಿಗಳ ಭಯವಿಲ್ಲ, ಯಾರಾದರು ನೋಡಿಯಾರೆಂಬ ಮುಜುಗರವಿಲ್ಲ, ಪೋಷಕರಿಗೆ ಸಿಕ್ಕಿಬೀಳುವ ಭಯವಿಲ್ಲ ಹಾಗಾಗಿ ಪ್ರವೇಶ ಶುಲ್ಕ ತೆತ್ತು ಇದರೊಳಗೆ ಸೇರಿಕೊಳ್ಳುವ ಪ್ರೇಮಿಗಳು ಪ್ರೇಮಚೇಷ್ಟೆಯ ಮೂಲಕ ತಮ್ಮದೇ ಲೋಕದಲ್ಲಿ ಮೈಮರೆಯುತ್ತಾರೆ.
ಕೆಲವೊಮ್ಮೆ ಇಲ್ಲಿ ಅತಿರೇಕದ ವರ್ತನೆಗಳು ಕೂಡ ದೂರದಿಂದ ವೀಕ್ಷಿಸಲು ಬಂದಂತಹ ಸಂಪ್ರದಾಯಸ್ಥ ಪ್ರವಾಸಿಗರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಅದು ಏನೇ ಇರಲಿ ಕಾರಂಜಿಕೆರೆಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಿದ ತಕ್ಷಣ ಭೇಟಿ ನೀಡುವ ಪ್ರೇಮಿಗಳ ಸಂಖ್ಯೆಯೇನು ಕಡಿಮೆಯಾಗಲ್ಲ ಎನ್ನುವುದಂತು ಸತ್ಯ.











Click it and Unblock the Notifications