ಒಲವೇ ಜೀವನ ಸಾಕ್ಷಾತ್ಕಾರ: ಫ್ರಮ್ ಯುವರ್ ವ್ಯಾಲೆಂಟೇನ್

ಫೆಬ್ರವರಿ 14 ಸಮೀಪಿಸುತ್ತಿದ್ದಂತೆ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಕ್ಯಾಂಡಿ, ಹೂವು ಮುಂತಾದ ಶುಭಾಶಯಗಳು ಅಮರ ಪ್ರೇಮಿಗಳ ಕೈಬದಲಾಯಿಸುತ್ತವೆ - ಇದೆಲ್ಲ ಸಂತ ವ್ಯಾಲೆಂಟೇನ್ ಹೆಸರಿನಲ್ಲಿ ನಡೆಯುತ್ತದೆ.
ಕುತೂಹಲದ ಸಂಗತಿ ಎಂದರೆ ಶೇ. 90ರಷ್ಟು ವ್ಯಾಲೆಂಟೇನ್ ಕಾರ್ಡುಗಳನ್ನು ಕಳಿಸುವುದು ಮಹಿಳೆಯರೇ. ಬ್ರಿಟನ್ ಮ್ಯೂಸಿಯಂಲ್ಲಿ ಅತ್ಯಂತ ಹಳೆಯ ವ್ಯಾಲೆಂಟೇನ್ ಕಾರ್ಡ್ ಇಂದಿಗೂ ಇದೆ. ಇನ್ನು, ಅಮೆರಿಕದಲ್ಲಿ ವಾಣಿಜ್ಯಿಕವಾಗಿ ಬಳಸಲ್ಪಟ್ಟ ಮೊದಲ ವ್ಯಾಲೆಂಟೇನ್ ಕಾರ್ಡ್‌ಅನ್ನು ತಯಾರಿಸಿದ್ದು 1840ರಲ್ಲಿ ಎಸ್ತರ್ ಎ. ಹೊಲ್ಯಾಂಡ್.
ಯಾರು ಈ ಸಂತ? ಸಂಪ್ರದಾಯದ ಹಿಂದಿನ ಕೌತುಕವೇನು?
ಪುರಾತನ ರೋಮನ್ನರ ಕಾಲದಿಂದಲೂ ವ್ಯಾಲೆಂಟೇನ್ ದಿನ ಅರ್ಥಾತ್ ಪ್ರೇಮಿಗಳ ದಿನ ಆಚರಣೆಯಲ್ಲಿದೆ. ಅಸಲಿಗೆ ಈ ಫ್ರೆಬ್ರವರಿ ತಿಂಗಳು ಎಂದರೇನೇ ಪ್ರೇಮ-ಪ್ರಣಯದ ಋತುಮಾನ. ಕ್ಯಾಥೊಲಿಕ್ ಚರ್ಚ್‌ಗಳು ಏನಿಲ್ಲವೆಂದರೂ ಮೂವರು ವ್ಯಾಲೆಂಟೇನ್‌ರನ್ನು ಗುರುತಿಸುತ್ತದೆ. ಈ ಮೂವರೂ ವೀರ ಮರಣವನ್ನಪ್ಪಿದ ಅಮರ ಪ್ರೇಮಿಗಳು ಎನ್ನುತ್ತವೆ ಚರ್ಚ್ ದಂತಕತೆಗಳು.
ರೋಮ್‌ನ ಮೂರನೇ ಶತಮಾನದಲ್ಲಿದ್ದ ಸಾಮಾನ್ಯ ಸಂತ. ಚಕ್ರವರ್ತಿ ಎರಡನೆಯ ಕ್ಲಾಡಿಯಸ್ ಯುದ್ಧಗಳನ್ನು ಜಯಿಸಬೇಕೆಂದರೆ ಬ್ರಹ್ಮಚಾರಿಗಳಿಂದ ಮಾತ್ರ ಸಾಧ್ಯ. ಅವರೇ ಬಲಿಷ್ಠರು ಎಂದು ಲೆಕ್ಕ ಹಾಕಿ, ಯುವಕರ ಮದುವೆಗಳನ್ನು ನಿಷೇಧಿಸುತ್ತಾನೆ. ಹಾಗೆ ಮದುವೆಯಾಗದವರನ್ನು ಮಾತ್ರ ಸೇನೆ ಭರ್ತಿ ಮಾಡಿಕೊಳ್ಳುತ್ತಾನೆ. ಆದರೆ ಇದರ ಮರ್ಮವನ್ನು ಅರಿತ ಸಂತ ವ್ಯಾಲೆಂಟೇನ್ ರಹಸ್ಯವಾಗಿ ಯುವಕರಿಗೆ ಸಾಮೂಹಿಕ ವಿವಾಹಗಳನ್ನು ಮಾಡತೊಡಗುತ್ತಾನೆ. ಇದು ಕ್ಲಾಡಿಯಸ್ ಕಿವಿಗೆ ಬೀಳುತ್ತಿದ್ದಂತೆ ವ್ಯಾಲೆಂಟೇನ್‌ಗೆ ಮರಣಶಿಕ್ಷೆ ವಿಧಿಸುತ್ತಾನೆ.
ಚಕ್ರವರ್ತಿಗಳಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ರೋಮನ್ನರಿಗೆ ಅದರಿಂದ ಪರಾರಿಯಾಗಲು ನೆರವು ನೀಡಿದ ಆರೋಪದ ಮೇಲೆ ಮತ್ತೊಬ್ಬ ವ್ಯಾಲೆಂಟೇನ್‌ನನ್ನು ಸಾಯಿಸಲಾಯಿತು ಎನ್ನುತ್ತದೆ ಮಗದೊಂದು ಕಥೆ.
ಸಿನಿಮಾಶೈಲಿಯ ಮತ್ತೊಂದು ಕಥೆಯಲ್ಲಿ ವ್ಯಾಲೆಂಟೇನ್ ಸ್ವತಃ ವಿಶ್ವದ ಮೊದಲ ವ್ಯಾಲೆಂಟೇನ್ ಶುಭಾಷಯ ಕಳಿಸುತ್ತಾನೆ. ಏನಾಯಿತೆಂದರೆ ವ್ಯಾಲೆಂಟೇನ್ ಜೈಲುವಾಸದಲ್ಲಿರುತ್ತಾನೆ. ಒಮ್ಮೆ ಜೈಲರ್‌ನ ಮಗಳು ಜೈಲು ವೀಕ್ಷಣೆಗೆ ಬಂದಿರುತ್ತಾಳೆ. ಮುಂದೆ, ವ್ಯಾಲೆಂಟೇನ್ ಅವಳ ಆರಾಧಕನಾಗುತ್ತನೆ. ಕೊನೆಗೆ ಸಾಯುವ ಮುನ್ನ 'ಫ್ರಮ್ ಯುವರ್ ವ್ಯಾಲೆಂಟೇನ್' ಎಂದು ಶುಭಾಷಯ ಪತ್ರ ಬರೆದಿಟ್ಟು ಸಾಯುತ್ತಾನೆ. ಪ್ರೇಮಿಗಳು ಇಂದಿಗೂ ಈ ಪದಪುಂಜವನ್ನೇ ಬಳಸುತ್ತಾರೆ! ಈ ಕಥೆಗಳು ಕಲ್ಪಿತವಾಗಿದ್ದರೂ ಪ್ರೇಮಿಗಳಿಗೆ ಸ್ಪಷ್ಟ ಸಂದೇಶ ಸಾರುತ್ತವೆ. ಅನುಭೂತಿ, ಸಾಹಸದ ಜತೆಗೆ ಎಲ್ಲಕ್ಕಿಂತ ಹೆಚ್ಚಾಗಿ ಪೇಮದ ಸಾರವಿದೆ. ಅಂದಹಾಗೆ ಇದು ನಡೆದದ್ದು ಕ್ರಿಸ್ತ ನಂತರ 270ರಲ್ಲಿ.
ಫೆಬ್ರವರಿ 15 ಎನ್ನುವುದು ರೋಮನ್ನರಿಗೆ ರಮ್ಯ ಚೈತ್ರ ಕಾಲದ ಆರಂಭ. ರೋಮನ್ನರ ಕೃಷಿ ದೈವ ಫಾನುಸ್‌ಗೆ ಈ ದಿನ ಅರ್ಪಿಸಲಾಗಿದೆ. ಅಂದರೆ ವರ್ಷದಲ್ಲಿ ಫಲವತ್ತತೆಯ ಕಾಲ ಇಲ್ಲಿಂದ ಆರಂಭವಾಗುತ್ತದೆ ಎಂದು. ರೋಮ್ ಸಂಸ್ಥಾಪಕರಾದ ರೊಮುಲಸ್ ಮತ್ತು ರೆಮುಸ್ ಬಾಲಕರ ಹೆಸರಿನಲ್ಲೂ ಈ ದಿನವನ್ನು ಆಚರಿಸಲಾಗುತ್ತದೆ.











Click it and Unblock the Notifications