ಸರಕಾರಿ ಅನುದಾನಿತ ಶಾಲೆಯಲ್ಲಿ 'ಸೀಟು ಲಭ್ಯವಿಲ್ಲ'!

ಮುಂದಿನ ಶೈಕ್ಷಣಿಕ ವರ್ಷದಿಂದ ಯಾವ ಶಾಲೆಗೆ ಮಗುವನ್ನು ಸೇರಿಸಬೇಕು ಎಂದು ತಲೆಕೆಡಿಸಿಕೊಳ್ಳುತ್ತಿದ್ದ ಪಾಲಕರು ಈಗ ಅಕ್ಟೋಬರ್, ನವೆಂಬರ್ ತಿಂಗಳಲ್ಲಿಯೇ ಅನುದಾನಿತ ಶಾಲೆಗಳ 'ವ್ಯವಹಾರ' ನೋಡಿ ಬೇಸ್ತುಬಿದ್ದಿದ್ದಾರೆ. ಏಕೆಂದರೆ, ಅನೇಕ ಶಾಲೆಗಳು ತಮ್ಮ ಶಾಲಾ ಗೇಟಿಗೆ 'ಸೀಟು ಲಭ್ಯವಿಲ್ಲ' ಎಂಬ ಬೋರ್ಡನ್ನು ಲಗ್ಗತ್ತುಹಾಕಿವೆ.
ಕೆಲ ಶಾಲೆಗಳು ಸಂದರ್ಶನ ಮತ್ತು ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವ ಕಾರ್ಯವನ್ನು ಸಂಪನ್ನಗೊಳಿಸಿದ್ದು, ಸೀಟು ಬೇಕಾದರೆ ಮಾರ್ಚಿಗೆ ಬನ್ನಿ ಎಂದು ಪಾಲಕರನ್ನು ಸಾಗಹಾಕುತ್ತಿವೆ. ಇದರಿಂದ ಅನೇಕ ಪಾಲಕರು ರೊಚ್ಚಿಗೆದ್ದಿದ್ದಾರೆ. ಮಾರ್ಚಿಗೆ ಹೋದರೆ, ಅಷ್ಟು ಕೊಡಿ, ಇಷ್ಟು ಕೊಡಿ ಎಂದು ಕೇಳುತ್ತವೆ, ಹೀಗಾದರೆ ನಾವು ಯಾವ ಶಾಲೆಗೆ ಮಕ್ಕಳನ್ನು ಸೇರಿಸಿಕೊಳ್ಳೋಣ ಅಂತಾರೆ ಕೆಂಗೇರಿಯ ಪ್ರಸನ್ನ ಅವರು.
ನಿಯಮಗಳ ಪ್ರಕಾರ, ಅನುದಾನಿತ ಶಾಲೆಗಳು ಶೈಕ್ಷಣಿಕ ಕ್ಯಾಲೆಂಡರನ್ನು ಬಿಡುಗಡೆ ಮಾಡುವ ಮುನ್ನ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಂತಿಲ್ಲ. ಹೀಗೆ ಮಾಡಿದರೆ ಅನುದಾನ ರದ್ದು ಮಾಡುವ ಹಕ್ಕು ಸರಕಾರಕ್ಕಿದೆ. ಆದರೂ, ಕೆಲ ಶಾಲೆಗಳು ಪ್ರವೇಶ ಪ್ರಕ್ರಿಯೆಯನ್ನು ಮುಂದುವರಿಸಿವೆ.












Click it and Unblock the Notifications