ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮುಲು ರಾಜೀನಾಮೆ? ಸಿಎಂ ಗಡಗಡ

By Mrutyunjaya Kalmat
|
Google Oneindia Kannada News

Yeddyurappa-Sriramulu
ಬೆಂಗಳೂರು, ನ. 15 : ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡುವ ಮೂಲಕ ಸಚಿವರ ಕೋಪಕ್ಕೆ ತುತ್ತಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತೊಂದು ಗಂಡಾಂತರ ಎದುರಾಗಿದೆ. ನಾಳೆಯೊಳಗೆ ಗದಗ ಜಿಲ್ಲೆಯ ಉಸ್ತುವಾರಿಯನ್ನು ನೀಡದೆ ಹೋದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶ್ರೀರಾಮುಲು ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಉಸ್ತುವಾರಿಗೆ ಸಂಬಂಧಿಸಿದಂತೆ ತೀವ್ರ ಆಕ್ರೋಶಗೊಂಡಿರುವ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮ ಅತೃಪ್ತಿ, ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳು ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಯಡಿಯೂರಪ್ಪ ಖಡಾಖಂಡಿತವಾಗಿ ಹೇಳಿದ್ದಾರೆ.

ನಮ್ಮನ್ನು ಸೌಜನ್ಯಕ್ಕಾದರೂ ಹೇಳಬೇಕಿತ್ತು. ಹೀಗೆ ಹೇಳದೆ ಕೇಳದೆ ಬದಲಾವಣೆ ಮಾಡಿದ್ದಾರೆ. ಇದರಿಂದ ನಮಗೆ ಅವಮಾನವಾಗಿದೆ. ನಾಳೆಯೊಳಗಾಗಿ ಇದನ್ನು ಸರಿಪಡಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಜನಾರ್ದನರೆಡ್ಡಿ ಅವರ ಆಸೆಗೆ ತಣ್ಣೀರೆರಚಿದ್ದಕ್ಕೆ ಒಳಗೊಳಗೆ ಕುದಿಯುತ್ತಿದ್ದ ರೆಡ್ಡಿಗಳಿಗೆ ಶ್ರೀರಾಮುಲ ಅವರನ್ನು ಏಕಾಏಕಿ ಉಸ್ತುವಾರಿಯಿಂದ ಎತ್ತಂಗಡಿ ಮಾಡಿದ್ದಕ್ಕೆ ಕೆಂಡಾಮಂಡಲರಾಗಿದ್ದಾರೆ.

ಬಿಜೆಪಿ-ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಶ್ರೀರಾಮುಲು ಅವರನ್ನು ಗದಗ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು. ನಂತರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರವೂ ಶ್ರೀರಾಮುಲು ಅವರನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಸಲಾಯಿತು. ಕಡಿಮೆ ಅವಧಿಯಲ್ಲಿ ಶ್ರೀರಾಮುಲು ಜಿಲ್ಲೆಯಾದ್ಯಂತ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದರು. ಜೊತೆಗೆ ಗದಗ ಜಿಲ್ಲೆಯಾದ್ಯಂತ ಬಿಜೆಪಿ ಜಯ ಗಳಿಸಲು ರಾಮುಲು ಕಾರಣ ಎನ್ನುವುದು ಜನಜನಿತ. ಇದೀಗ ನರಗುಂದ ಶಾಸಕ ಸಿಸಿ ಪಾಟೀಲ್ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವರಾಗಿದ್ದರಿಂದ ಅವರಿಗೆ ಗದಗ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿದೆ.

ಸಿಎಂ ಸುದ್ದಿಗೋಷ್ಠಿ : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಕ್ಕಳ ರಾಘವೇಂದ್ರ ಮತ್ತು ವಿಜಯೇಂದ್ರ ಆರು ಎಕರೆ ಸರಕಾರಿ ಭೂಮಿಯ ಡಿನೋಟಿಫಿಕೇಷನ್ ಪ್ರಕರಣ, ನಾಗಶೆಟ್ಟಿಹಳ್ಳಿ ಬಿಡಿಎ ಜಾಗದ ಡಿನೋಟಿಫೈ ಪ್ರಕರಣದ ಆರೋಪಕ್ಕೆ ಸಂಬಂಧಿಸಿ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮಗೋಷ್ಠಿ ನಡೆಸಿದರು.

ಜಿಗಣಿ ಬಳಿ ಆರು ಎಕರೆ ಜಾಗವನ್ನು ಕಾನೂನು ರೀತಿಯಲ್ಲಿ ಭೂಮಿಯನ್ನು ತಮ್ಮ ಮಕ್ಕಳಾದ ರಾಘವೇಂದ್ರ ಮತ್ತು ವಿಜಯೇಂದ್ರ ಒಡೆತನ ಪ್ಲೂಯಿಡ್ ಟೆಕ್ನಾಲಜೀಸ್ ಗೆ ನೀಡಲಾಗಿದೆ. ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಅಲ್ಲದೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿಕಟವರ್ತಿ ಮಲ್ಲಿಕಾರ್ಜುನಸ್ವಾಮಿ ಎಂಬುವವರಿಗೆ ಆರು ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿಕೊಡಲಾಗಿದೆ. ಇದಕ್ಕೆ ಸಿದ್ಧರಾಮಯ್ಯ ಇವರೇ ನನಗೆ ದೂರವಾಣಿ ಮೂಲಕ ಸಂಪರ್ಕಿಸಿ ಡಿನೋಟಿಫೈ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನ ಆಡಳಿತ ಅವಧಿಯಲ್ಲಿ ಒಟ್ಟು 219 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ. ಹಿಂದಿನ ಸರಕಾರವೂ ಮಾಡಿದ್ದವು. ಧರಂಸಿಂಗ್, ಎಸ್ ಎಂ ಕೃಷ್ಣ, ಕುಮಾರಸ್ವಾಮಿ ಮತ್ತು ರಾಜ್ಯಪಾಲರ ಆಡಳಿತದಲ್ಲಿ ನೂರಾರು ಎಕರೆ ಪ್ರದೇಶ ಡಿನೋಟಿಫೈ ಮಾಡಿಲಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X