• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊಲಿ... ಪೊಲಿ... ದೇವಾ... ಕೊಡಗಿನ ಹುತ್ತರಿ

By Mahesh
|

Huttari Festival
ಕೊಡಗಿನಲ್ಲಿ "ಹುತ್ತರಿ" ಹಬ್ಬ ಬಂತೆಂದರೆ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಸಂಭ್ರಮ ಮನೆ ಮಾಡಿಬಿಡುತ್ತದೆ. ಏಕೆಂದರೆ ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಹುತ್ತರಿ ಹಬ್ಬಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಈ ಹಬ್ಬ ಇಲ್ಲಿನವರ ಪಾಲಿಗೆ ಸುಗ್ಗಿ ಹಬ್ಬವೂ ಹೌದು. ಹಬ್ಬ ಬರುತ್ತಿದೆ ಎನ್ನುವಾಗಲೇ ಕೊಡಗಿನಲ್ಲಿ ಸಣ್ಣಗೆ ನಡುಕ ಹುಟ್ಟಿಸುವ ಚಳಿ ಪ್ರಾರಂಭವಾಗುತ್ತದೆ. ಇದನ್ನು ಇಲ್ಲಿನವರು ಹುತ್ತರಿ ಚಳಿ ಎಂದೇ ಹೇಳುತ್ತಾರೆ. ಜೊತೆಗೆ ಹಚ್ಚ ಹಸಿರಾಗಿದ್ದ ಗದ್ದೆಯ ಬಯಲುಗಳು ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತವೆ.

ಕೃಷಿಯೇ ಜೀವಾಳ: ಹಾಗೆನೋಡಿದರೆ ಕೊಡಗಿನಲ್ಲಿ ಆಚರಿಸಲ್ಪಡುವ ಹಬ್ಬಗಳಿಗೆ ತನ್ನದೇ ಆದ ವೈಶಿಷ್ಟ್ಯತೆ ಇರುವುದನ್ನು ನಾವು ಕಾಣಬಹುದು. ಅಷ್ಟೇ ಅಲ್ಲ ಹಿರಿಯರು ಎಲ್ಲಾ ಹಬ್ಬಗಳನ್ನೂ ಭತ್ತದ ಕೃಷಿಯನ್ನೇ ಮೂಲ ಆಧಾರವಾಗಿಟ್ಟುಕೊಂಡು ಆಚರಣೆಗೆ ತಂದಿರುವುದನ್ನು ನಾವು ಕಾಣಬಹುದು. ಹಿಂದಿನ ಕಾಲದಲ್ಲಿ ಇಲ್ಲಿನವರಿಗೆ ಭತ್ತದ ಕೃಷಿಯೇ ಜೀವಾಳವಾಗಿತ್ತು. ಹಾಗಾಗಿ ಮಳೆಗಾಲದಲ್ಲಿ ಭತ್ತದ ಕೃಷಿ ಪ್ರಾರಂಭಿಸಿ ನಾಟಿ ಮುಗಿಸಿದ ಸಂತೋಷದಲ್ಲಿ ಕೈಲ್‌ಮೂಹೂರ್ತವನ್ನು ಆಚರಿಸಿದರೆ, ಬೆಳೆ ಬೆಳೆದು ತೆನೆಯೊಡೆಯುತ್ತಿದ್ದಂತೆಯೇ ತುಲಾ ಸಂಕ್ರಮಣ, ಬೆಳೆ ಕಟಾವು ಮಾಡಿ ಮನೆಗೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಹುತ್ತರಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತದೆ.

ಹಬ್ಬಕ್ಕೆ ತಿಂಗಳು ಇರುವಾಗಲೇ ಹಿರಿಯರು ಮನೆಗೆ ಸುಣ್ಣ-ಬಣ್ಣ ಬಳಿದು ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಂಭ್ರಮದಲ್ಲಿರುತ್ತಾರೆ. ಮಕ್ಕಳಿಗೆ ಪಟಾಕಿ ಸಿಡಿಸಿ ಸಂತಸ ಪಡುವ ಕಾತರ. ಹುತ್ತರಿ ಹಬ್ಬವು ಪ್ರತಿ ವರ್ಷವೂ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬರುತ್ತದೆ. (ಪ್ರಸಕ್ತ ವರ್ಷ ನ.22ರಂದು ನಡೆಯಲಿದೆ.) ಇದು ಒಂದು ದಿನ ನಡೆಯುವುದಾದರೂ ಕೆಲವು ದಿನಗಳವರೆಗೆ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಇದರೊಂದಿಗೆ ಹಬ್ಬದ ಸಂದರ್ಭ ಸಾಂಪ್ರದಾಯಿಕ ಕೋಲಾಟ, ಪರೆಯಕಳಿಯಂತಹ ನೃತ್ಯಗಳು ಮೇಳೈಸಿ ಹಬ್ಬಕ್ಕೆ ಮೆರಗು ನೀಡುತ್ತವೆ.

ಹುತ್ತರಿ ಹಬ್ಬವನ್ನು ಕೇವಲ ಸುಗ್ಗಿ ಹಬ್ಬ ಮಾತ್ರವಲ್ಲ, ಕೊಡಗಿನ ಸಂಸ್ಕೃತಿ, ಸಂಪ್ರದಾಯದ ಲೇಪನ, ಜಾನಪದದ ಹಿನ್ನಲೆ ಇದಕ್ಕಿದೆ. ಈ ಹಬ್ಬದಲ್ಲಿ ಗದ್ದೆಯಿಂದ ತೆನೆಯೊಡೆದ ಧಾನ್ಯ(ಭತ್ತ)ವನ್ನು ತಂದು ಅದನ್ನು ಪೂಜಿಸಿ, ಹೊಸ ಅಕ್ಕಿಯ ಪಾಯಸ ಮಾಡಿ ಮನೆಮಂದಿಯೆಲ್ಲಾ ಸೇವಿಸುವುದು ಪ್ರಮುಖ ಆಚರಣೆಯಾಗಿದೆ. ಕೊಡಗಿನ ಮಳೆ ದೇವ ಎಂದೇ ಕರೆಯುವ ಪಾಡಿ ಇಗ್ಗುತ್ತಪ್ಪ ದೇಗುಲದಲ್ಲಿ ಜ್ಯೋತಿಷ್ಯರು, ತಕ್ಕ ಮುಖ್ಯಸ್ಥರು, ಊರಿನ ಹಿರಿಯರು ಸೇರಿ ಹುತ್ತರಿ ಹಬ್ಬವನ್ನು ನಿರ್ಧರಿಸತ್ತಾರೆ.

ಹುತ್ತರಿ ಆಚರಣೆ: ಅದರಂತೆ ವೃಶ್ಚಿಕ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ರೋಹಿಣಿ ನಕ್ಷತ್ರದಲ್ಲಿ ಗದ್ದೆಯಿಂದ ಕದಿರು ತೆಗೆಯುವ ಮೂಲಕ ಹುತ್ತರಿಯ ಆಚರಣೆ ನಡೆಯುತ್ತದೆ. ದೇವಸ್ಥಾನದ ಪದ್ಧತಿಯಂತೆ ಒಂದು ದಿನದ ಮೊದಲು "ದೇವಪೊಳ್ದ್" ಮಾರನೆಯ ದಿನ ನಾಡಿನಲ್ಲಿ "ನಾಡುಪೊಳ್ದ್" ಎಂದು ಆಚರಿಸಲಾಗುತ್ತದೆ. ಹುತ್ತರಿ ಹಬ್ಬದ ದಿನದಂದು ಕುಟುಂಬದ ಸದಸ್ಯರೆಲ್ಲರೂ "ಐನ್‌ಮನೆ"ಯಲ್ಲಿ ಸೇರಿ ಮನೆಯ "ನೆಲ್ಲಕ್ಕಿ" ನಡುಬಾಡೆಯಲ್ಲಿ ತೂಗು ದೀಪದ ಕೆಳಗೆ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಹಲಸಿನ ಎಲೆ, ಕುಂಬಳಿ ಎಲೆ, ಕಾಡು ಗೇರು ಎಲೆ ಹೀಗೆ ಐದು ತರಹದ ಎಲೆಯನ್ನು ಹಾಗೂ ಕಾಡಿನಲ್ಲಿ ಸಿಗುವ ಅಚ್ಚುನಾರನ್ನು ಇರಿಸಲಾಗುತ್ತದೆ.

ಮತ್ತೊಂದು ಕುಕ್ಕೆಯ ತುಂಬ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರಿನಲ್ಲಿ ಅಕ್ಕಿ ತುಂಬಿಡಲಾಗುತ್ತದೆ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡಲಾಗುತ್ತದೆ. ಇದರ ಪಕ್ಕದಲ್ಲಿ ಕುಡುಗೋಲು, ಮುಕ್ಕಾಲಿಯ ಮೇಲೆ "ತಳಿಯಕ್ಕಿ ಬೊಳ್ಚ", ಮೂರು ವೀಳ್ಯದೆಲೆ ಹಾಗೂ ಮೂರು ಅಡಿಕೆಯನ್ನು ಇಡಲಾಗುತ್ತದೆ.

ಮುತೈದೆಯರು ಅಕ್ಕಿ ಹಿಟ್ಟಿನಿಂದ ಹಬ್ಬಾಚರಣೆಗೆ ಇರಿಸಲಾದ ವಸ್ತುಗಳ ಮುಂದೆ ರಂಗೋಲಿ ಇಡುತ್ತಾರೆ. ಬಳಿಕ ದೇವರನ್ನು ಪ್ರಾರ್ಥಿಸುತ್ತಾ ಎಲೆಗಳನ್ನು ಸಂಪ್ರದಾಯದಂತೆ ಒಂದರ ಮೇಲೊಂದು ಇಟ್ಟು ನಾರಿನಿಂದ ಕಟ್ಟಲಾಗುತ್ತದೆ. ಇದನ್ನು ನೆರೆ ಕಟ್ಟುವುದು ಎಂದು ಕರೆಯುತ್ತಾರೆ. ಬಳಿಕ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಾರೆ. ಜೊತೆಗೆ ಇತರೆ ತಿಂಡಿ ತೀರ್ಥಗಳೂ ಇರುತ್ತವೆ. ಇದನ್ನು ಫಲಹಾರ ಎನ್ನುತ್ತಾರೆ.

ಫಲಹಾರದ ಬಳಿಕ ಸಿದ್ದಪಡಿಸಲಾದ "ಕುತ್ತಿ"ಯನ್ನು ಕುಟುಂಬದ ಹಿರಿಯರೊಬ್ಬರು ಹೊತ್ತು ಊರಿನಲ್ಲಿರುವ ಅಂಬಲ(ಮೈದಾನ)ಕ್ಕೆ ತೆರಳುತ್ತಾರೆ. ಅಲ್ಲಿಗೆ ಸುತ್ತಮುತ್ತಲಿನ ಕುಟುಂಬದವರು, ಸಂಬಂಧಿಕರು ಬರುತ್ತಾರೆ. ಅಲ್ಲಿಂದ ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯಲು ಕುಡುಗೋಲನ್ನು ಕದಿರು ತೆಗೆಯುವವನ ಕೈಗೆ ನೀಡುತ್ತಾರೆ. ಈ ಸಂದರ್ಭ ಮುತೈದೆಯೊಬ್ಬರು "ತಳಿಯಕ್ಕಿ ಬೊಳ್ಚ"ವನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಮನೆಯವರೆಲ್ಲರೂ ಒಡ್ಡೋಲಗದೊಂದಿಗೆ ಕದಿರು ಕೊಯ್ಯುವ ಗದ್ದೆಯತ್ತ ತೆರಳುತ್ತಾರೆ.

ಗದ್ದೆ ತಲುಪಿದ ಬಳಿಕ ಹಾಲುಜೇನು ಮೊದಲಾದುವನ್ನು ಕದಿರಿನ ಬುಡಕ್ಕೆ ಸುರಿಯಲಾಗುತ್ತದೆ. ಹುತ್ತರಿ ಕುಕ್ಕೆಯಲ್ಲಿ ಕೊಂಡೊಯ್ದ ಅಚ್ಚುನಾರಿನಿಂದ ಕಟ್ಟಿದ ಎಲೆಗಳನ್ನೊಳಗೊಂಡ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಲಾಗುತ್ತದೆ. ಆ ನಂತರ ಹುತ್ತರಿ ಮೂಹೂರ್ತಕ್ಕೆ ಸುಸೂತ್ರವೆನಿಸುವಂತೆ ಗುಂಡೊಂದನ್ನು ಹಾರಿಸಲಾಗುತ್ತದೆ. ಕುತ್ತಿ ಹೊತ್ತ ಕುಟುಂಬದ ಹಿರಿಯವ್ಯಕ್ತಿ ದೇವರನ್ನು ಪ್ರಾರ್ಥಿಸಿ, ಕದಿರನ್ನು ಬೆಸ ಸಂಖ್ಯೆಯಲ್ಲಿ ಕೊಯ್ದು ಹುತ್ತರಿ ಕುಕ್ಕೆಯಲ್ಲಿ ಇಡಲಾಗುತ್ತದೆ. ಈ ಸಂದರ್ಭ ನೆರೆದವರು "ಪೊಲಿ ಪೊಲಿ ದೇವಾ" ಎಂದು ಘೋಷಣೆ ಕೂಗುತ್ತಾರೆ. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.

ಕದಿರು ತುಂಬಿದ ಕುಕ್ಕೆಯನ್ನು ತಲೆಯಲ್ಲಿ ಹೊತ್ತು "ಪೊಲಿ ಪೊಲಿ ದೇವಾ" ಎಂದು ಘೋಷಣೆ ಕೂಗುತ್ತಾ ಬರಲಾಗುತ್ತದೆ. ಅಲ್ಲದೆ ಕದಿರನ್ನು ಕೆಲವು ಕುಟುಂಬದವರು ದೇವಸ್ಥಾನಕ್ಕೆ ಅರ್ಪಿಸಿ ಬಳಿಕ ಮನೆಗೆ ತೆರಳಿದರೆ ಇನ್ನು ಕೆಲವರು ನೇರವಾಗಿ ಒಕ್ಕಲು ಕಣಕ್ಕೆ ತೆರಳಿ ಮನೆಗೆ ತೆರಳುತ್ತಾರೆ. ಮನೆಯಲ್ಲಿದ್ದ ಮುತೈದೆ ಕದಿರು ಕೊಯ್ದವನ ಕಾಲು ತೊಳೆದು ಹಾಲು ನೀಡಿ ಧಾನ್ಯ ಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳಲಾಗುತ್ತದೆ. ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಂಡ ನಂತರ ಕದಿರನ್ನು ಆಯುಧ, ವಾಹನ ಮುಂತಾದವುಗಳಿಗೆ ಕಟ್ಟಲಾಗುತ್ತದೆ. ಬಳಿಕ ಮನೆಯಲ್ಲಿ ಹೊಸ ಅಕ್ಕಿ ಪಾಯಸ ಮಾಡಿ ಸದಸ್ಯರೆಲ್ಲಾ ಒಂದೆಡೆ ಕುಳಿತು ಊಟ ಮಾಡುತ್ತಾರೆ.

ರುಚಿಕರ ಭೋಜನ: ಹಬ್ಬದಲ್ಲಿ ವಿಶೇಷ ತಿನಿಸುಗಳಾದ ತಂಬುಟ್, ಅಡಿಕೆಹಿಟ್ಟು, ಕಜ್ಜಾಯ, ವಿವಿಧ ಬಗೆಯ ತರಕಾರಿ ಸಾರು, ಪಲ್ಯಗಳಿರುತ್ತದೆ. ಹುತ್ತರಿ ಹಬ್ಬದ ಮಾರನೆಯ ದಿನ ಹುತ್ತರಿ ಹಾಡನ್ನು ಮನೆಮನೆಗಳಲ್ಲಿ ಹಾಡುವ ಪದ್ಧತಿಯೂ ಇದೆ. ಅಲ್ಲದೆ, ನಾಡ್‌ಮಂದ್‌ನಲ್ಲಿ (ಊರಿನ ದೊಡ್ಡ ಮೈದಾನದಲ್ಲಿ) ಊರಿನವರೆಲ್ಲಾ ಸೇರಿ ಹುತ್ತರಿ ಕೋಲಾಟ ನಡೆಸುತ್ತಾರೆ. ಆ ನಂತರ ಹಬ್ಬದ ಕಡೆಯ ದಿನವಾಗಿ "ಊರೋರ್ಮೆ" ನಡೆಯುತ್ತದೆ. ಈ ಊರವರೆಲ್ಲಾ ಗ್ರಾಮದ ಅಂಬಲ(ಮೈದಾನ)ದಲ್ಲಿ ನೆರೆಯುತ್ತಾರೆ. ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿ ಹೀಗೆ ವಿವಿಧ ಪದಾರ್ಥಗಳನ್ನು ಮನೆಯಿಂದ ತಂದು ಅಲ್ಲಿ ಸೇವಿಸುತ್ತಾರೆ. ಅಲ್ಲಿಗೆ ಹುತ್ತರಿ ಹಬ್ಬದ ಸಂಭ್ರಮ ಮುಗಿಯುತ್ತದೆ.

ಆದರೆ ಬಳಿಕವೂ ಸಂಘ ಸಂಸ್ಥೆಗಳು ತಮಗೆ ಅನುಕೂಲವಾದ ದಿನಗಳಲ್ಲಿ ಹುತ್ತರಿ ಸಂತೋಷಕೂಟಗಳನ್ನು ನಡೆಸುವ ಮೂಲಕ ಎಲ್ಲರೂ ಒಂದೆಡೆ ಸೇರಿ ಹುತ್ತರಿ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕೊಡಗಿನ ಪ್ರಮುಖ ಹಬ್ಬವಾದ ಹುತ್ತರಿಗೆ ಕೊಡವರು ಜಿಲ್ಲೆಯ ಹೊರಗೆ ತಾವು ಎಲ್ಲಿಯೇ ಇರಲಿ ಸಾಮಾನ್ಯವಾಗಿ ಬಂದೇ ಬರುತ್ತಾರೆ. ಹಬ್ಬದ ದಿನದಂದು ಕುಟುಂಬದವರೊಡನೆ ಕಲೆತು ಸಂಭ್ರಮಿಸುತ್ತಾರೆ. ಕೊಡಗಿನಲ್ಲಿ ಮಾತ್ರವೇ ಕಾಣಬಹುದಾದ ಹುತ್ತರಿ ಹಬ್ಬವು ಇಲ್ಲಿನ ಸಂಪ್ರದಾಯ, ಕೃಷಿ ಮೇಲಿನ ಭಕ್ತಿಯ ಪ್ರತಿರೂಪವಾಗಿದೆಯಲ್ಲದೆ, ಹಿಗ್ಗಿನ ಸುಗ್ಗಿಯ ಹಬ್ಬವಾಗಿಯೂ ಗಮನಸೆಳೆಯುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"Huttari", the harvest festival that embodies the rich tradition of Kodagu, will be celebrated throughout the Kodagu district, Karnataka on November.22.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more