ಜಾಕಿ ಅಮೋಘ ಪ್ರಾರಂಭ; ಪ್ರೇಕ್ಷಕರ ನೂಕು ನುಗ್ಗಲು
ಪುನೀತ್ ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಚಿತ್ರ ಜಾಕಿ. ಈ ಚಿತ್ರ ಇಂದು (ಅ.14) ರಾಜ್ಯದಾದ್ಯಂತ ತೆರೆಗೆ ಅಪ್ಪಳಿಸಿದೆ. ಪುನೀತ್ ಅಭಿಮಾನಿಗಳ ಸಂಭ್ರಮ, ಸಡಗರ ಮುಗಿಲು ಮುಟ್ಟಿದೆ. ಜಾಕಿ ಚಿತ್ರದ ಟಿಕೆಟ್‌ಗಳು ಸದ್ಯಕ್ಕೆ ಒಂದು ವಾರ ಕಾಲ ಯಾವುದೇ ಚಿತ್ರಮಂದಿರದಲ್ಲಿ ಲಭ್ಯವಿಲ್ಲ ಎಂಬ ಸನ್ನಿವೇಶ ನಿರ್ಮಾಣವಾಗಿದೆ.
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಬ್ಲ್ಯಾಕ್ ಟಿಕೆಟ್ ಸಿಗುವುದು ಕಷ್ಟವಾಗಿದೆ. ಎಷ್ಟೇ ದುಡ್ಡು ಬಿಚ್ಚಿದರೂ ಬ್ಲ್ಯಾಕ್ ಟಿಕೆಟ್ ಸಹ ಸಿಗುತ್ತಿಲ್ಲ ಎಂದು ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಮೊದಲ ದಿನ ಮೊದಲ ಶೋ ನೋಡಿದರೇನೆ ಮನಸ್ಸಿಗೆ ಸಮಾಧಾನ ಎಂಬುದು ಬಹಳಷ್ಟು ಅಭಿಮಾನಿಗಳ ಅಭಿಮತ. ಟಿಕೆಟ್ ಸಿಗದೇ ಇರುವ ಕಾರಣ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ.
ಅಂದಹಾಗೆ ಜಾಕಿ ಚಿತ್ರದ ಹಾಡುಗಳು ದೂರದರ್ಶನದಲ್ಲಿ ಎಲ್ಲೂ ಪ್ರಸಾರವಾಗುತ್ತಿಲ್ಲ. ಈ ವಿಷಯ ನಿಮ್ಮ ಗಮನಕ್ಕೂ ಬಂದಿರಬಹುದು. ಹೌದು ಹಾಡುಗಳನ್ನು ಯಾವುದೇ ಟಿ ವಿ ವಾಹಿನಿಗಳಿಗೆ ಬಿಡುಗಡೆ ಮಾಡಿಲ್ಲ ಎಂದು ರಾಘವೇಂದ್ರ ರಾಜ್ ಕುಮಾರ್ ಫೇಸ್ ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕೇವಲ ಟ್ರೈಲರ್‌ಗಲನ್ನು ನೋಡಿ ಆನಂದಿಸಬಹುದಷ್ಟೆ.
ಚಿತ್ರದ ಬಗ್ಗೆ ಕುತೂಹಲ ಕಾಯ್ದುಕೊಳ್ಳಬೇಕು ಎಂಬುದು ರಾಘವೇಂದ್ರ ರಾಜ್ ಕುಮಾರ್ ಅವರ ಕಳಕಳಿ. ಹಾಗಾಗಿ ಜಾಕಿ ಹಾಡುಗಳು ಯಾವುದೇ ಟಿ ವಿ ವಾಹಿನಿಗಳಿಗೆ ಬಿಡುಗಡೆ ಮಾಡಿಲ್ಲ. ಹಾಗಾಗಿ 'ಜಾಕಿ' ಚಿತ್ರದ ಹಾಡುಗಳದ್ದು ಸೌಂಡ್ ಸ್ವಲ್ಪ ಜಾಸ್ತಿನೇ ಇದೆ.












Click it and Unblock the Notifications