ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟಿ ಬಸ್ಸಿನಲ್ಲಿ ಇವತ್ತು ಎಲ್ಲರಿಗೂ ಸೀಟು ಸಿಗುತ್ತಿದೆ

By Shami
|
Google Oneindia Kannada News

All eyes on Allahabad High Court
ಬೆಂಗಳೂರು, ಸೆ. 30: ಅಯೋಧ್ಯೆಯ ಬಾಬರಿ ಮಸೀದಿ ವಿವಾದ ಕುರಿತಾದ ಕಾನೂನಿನ ಕಗ್ಗಂಟುಗಳು ಅವರಿಗೆ ಗೊತ್ತಿಲ್ಲದೇ ಇರಬಹುದು. ಆದರೆ, ಕೋರ್ಟ್ ನಲ್ಲಿರುವ ಹಿಂದು ಮುಸ್ಲಿಮ್ ಜಗಳದ ಬಗ್ಗೆ ಉತ್ತರ ಭಾರತದ ಕೋರ್ಟೊಂದು ತನ್ನ ತೀರ್ಪುನ್ನು ಇಂದು ಹೊರಹಾಕುತ್ತಿದೆ ಎಂದು ಓದು ಬರಹ ತಿಳಿಯದ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಅರಿವಾಗಿದೆ.

ಸಂಜೆ 3.30 ಕ್ಕೆ ಪ್ರಕಟವಾಗುವ ತೀರ್ಪಿಗಿಂತ ಹೆಚ್ಚಾಗಿ ತೀರ್ಪು ಹೊರಬಿದ್ದ ನಂತರ ಅದಕ್ಕೆ ಸಮಾಜ ಹೇಗೆ ಪ್ರತಿಕ್ರಿಯಿತ್ತದೆ ಎನ್ನುವ ಕುತೂಹಲ, ಆತಂಕ ಜನಸಾಮಾನ್ಯರಲ್ಲಿ ಮಡುಗಟ್ಟಿದೆ.

ಕೋಮುದ್ವೇಷ ಹರಡದಂತೆ ಮತ್ತು ಅದು ಹರಡಿದರೆ ಅದನ್ನು ಮೆಟ್ಟಿನಿಲ್ಲುವುದಕ್ಕೆ ಸರಕಾರಗಳು ಒಂದೆಡೆ ಸಿದ್ಧವಾಗುತ್ತಿದ್ದರೆ ಇನ್ನೊಂದೆಡೆ ಶ್ರೀಸಾಮಾನ್ಯ ಪ್ರಜೆ ತನ್ನ ಮತ್ತು ತನ್ನ ಪರಿವಾರದ ಹಾಗೂ ತನ್ನ ಉದ್ಯೋಗಕ್ಕೆ ಯಾವುದೇ ಬಗೆಯ ಪೆಟ್ಟು ಬೀಳಬಾರದೆಂದು ಎಚ್ಚರಿಕೆ ತಾಳಿದ್ದಾನೆ. ಶಾಲೆ ಕಾಲೇಜುಗಳಿಗಂತೂ ರಜೆ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳಲ್ಲಿ ಇಂದು ಹಾಜರಾತಿ ತೀವ್ರವಾಗಿ ಕುಸಿದಿದ್ದು ಅನೇಕರು ನಿನ್ನೆಯೇ ಸಿಎಲ್ ಪಿಎಲ್ ಹಾಕಿ ಮನೆಯಲ್ಲೇ ಉಳಿಯುವ ಜಾಣತನ ಮೆರೆದಿದ್ದಾರೆ.

ಬಹುತೇಕ ಖಾಸಗಿ ಸಂಸ್ಥೆಗಳು ಕೂಡ ರಜೆ ಘೋಷಿಸಿರುವುದರಿಂದ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಮತ್ತು ಜನಸಂಚಾರ ಬೆಳಗ್ಗೆಯಿಂದಲೇ ಕಡಿಮೆ. ಅಲ್ಲಲ್ಲಿ ಹೋಟೆಲುಗಳು ತೆರೆದಿರುವುದನ್ನು ಹೊರತುಪಡಿಸಿದರೆ ಅಂಗಡಿ ಮುಂಗಟ್ಟುಗಳು ಇಂದು ರಜೆ ಮಾಡಿವೆ, ಕೆಲವರು ಮಧ್ಯಾನ್ಹದ ನಂತರ ರಜೆ ಮಾಡುವ ಯೋಚನೆಲ್ಲಿದ್ದಾರೆ. ಬೆಂಗಳೂರಿನಲ್ಲಿ ಬಿಟಿಎಸ್ ಬಸ್ಸುಗಳು ಎಂದಿನಂತೆ ಚಲಿಸುತ್ತಿವೆ. ನೀವು ಯಾವುದೇ ಬಸ್ಸು ಹತ್ತಿದರೂ ಕುಳಿತುಕೊಳ್ಳಲು ಸೀಟು ಸಿಗುವುದು ಖಂಡಿತವಾಗಿದೆ. ಸಂಜೆನಂತರ ಕೆಲವು ಪ್ರದೇಶಗಳಲ್ಲಿ ಒಂದು ನರಪಿಳ್ಳೆಯೂ ಕಾಣದಿದ್ದರೆ ಆಶ್ಚರ್ಯವಿಲ್ಲ.

ಸಾಫ್ಟ್ ವೇರ್ ಕಂಪನಿಗಳು ಮುಂಜಾಗ್ರತೆ ಕ್ರಮವಾಗಿ ತಮ್ಮ ಕೆಲಸದ ದಿನಗಳನ್ನು ಅದಲಿ ಬದಲಿ ಮಾಡಿಕೊಂಡು ರಜೆ ಪ್ರಕಟಿಸಿವೆ. ಇನ್ ಫೋಸಿಸ್ ಗುರುವಾರ ರಜೆ ಪ್ರಕಟಿಸಿದ್ದರೆ, ವಿಪ್ರೊ ಅರ್ಧ ದಿನ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಕಾಗ್ ನಿಜೆಂಟ್ ಕಂಪನಿ ತನ್ನ ಉದ್ಯೋಗಿಗಳಿಗೆ ಬೆಳಗ್ಗೆ ಬೇಗ ಬಂದು ಕೆಲಸ ಪೂರೈಸಿ ಮಧ್ಯಾನ್ಹದ ನಂತರ ರಜೆ ಪಡೆಯಬಹುದೆಂದು ಹೇಳಿದೆ.

ಮಂಗಳೂರಿನಲ್ಲಿ ಮೇಲುನೋಟಕ್ಕೆ ಜನಜೀವನ ಎಂದಿನಂತೆ ಸಾಗಿದೆ ಎಂದು ಕಂಡುಬಂದರೂ ಎರಡು ಬಣಗಳ ನಡುವೆ ಮುಗುಮ್ಮಾಗಿರುವ ಮನಸ್ತಾಪಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಸಿಟಿ ಬಸ್ ಸಂಚಾರ ಯಥಾಪ್ರಕಾರ ಇದ್ದರೂ ಮಂಗಳೂರಿಗೆ ಬಂದು ಹೋಗಿ ಮಾಡುವ ಇತರ ಊರಿನ ಬಸ್ಸುಗಳ ಭರಾಟೆ ಕಮ್ಮಿ ಎಂದು ಸುರತ್ಕಲ್ಲಿನ ಆರ್ ಕೆ ಪ್ರಸನ್ನ ತಿಳಿಸಿದ್ದಾರೆ. ಶಿವಮೊಗ್ಗ, ಹುಬ್ಬಳ್ಳಿ ಮತ್ತು ಮೈಸೂರಿನ ನಮ್ಮ ಪ್ರತಿನಿಧಿಗಳು ಹೇಳುವ ಪ್ರಕಾರ ಬಾಬರಿ ತೀರ್ಪಿನ ತಿರುಳಿಗಿಂತ ಹೆಚ್ಚಾಗಿ ತಮ್ಮ ಊರಿನಲ್ಲಿ ಶಾಂತಿ ಕದಡಬಾರದು ಎಂಬುದೇ ನಿವಾಸಿಗಳ ಅಪೇಕ್ಷೆಯಾಗಿದೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X