ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯಲಿ ವರುಣನ ಅಬ್ಬರಕ್ಕೆ ಓರ್ವ ಬಲಿ

By * ರೋಹಿಣಿ, ಬಳ್ಳಾರಿ
|
Google Oneindia Kannada News

Flash floods claim a life in Bellary (Photo by G.M. Rohini)
ಬಳ್ಳಾರಿ, ಆ. 22: ಸಂಡೂರುನ ಚೋರುನಾರು ಗ್ರಾಮದ ಸುತ್ತ ಶುಕ್ರವಾರ ರಾತ್ರಿ ಭಾರೀ ಮಳೆ ಸುರಿದು ಕೆರೆಗಳು ಒಡೆದು ತಾರಾನಗರದ ನಾರಿಹಳ್ಳ ಜಲಾಶಯ ತುಂಬಿ, ಕ್ರೆಸ್ಟ್‌ಗೇಟ್‌ಗಳ ಮೂಲಕ 25 ಸಾವಿರ ಕ್ಯುಸೆಕ್ ನೀರನ್ನು ಏಕಾಏಕಿ ಹೊರಬಿಟ್ಟ ಕಾರಣ ಹೊಲಗದ್ದೆಗಳಿಗೆ ನೀರು ನುಗ್ಗಿ ಓರ್ವ ಮೃತಪಟ್ಟು, ಆರು ಜನರನ್ನು ರಕ್ಷಿಸಲಾಗಿದೆ. ಕೋಟ್ಯಾಂತರ ರುಪಾಯಿ ಬೆಳೆ ನಷ್ಟವಾಗಿದೆ.

ಮೃತನು ಅಂಕಮ್ಮನಹಾಳು ಗ್ರಾಮದ ಯುವ ರೈತ ಗೋನಾಳ್ ಬಸವರಾಜ್ (28). ಈತನು ಕೆರೆಗಳು ಒಡೆದ ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟಿದ್ದಾನೆ. ಮೃತನ ಶವವು ಗ್ರಾಮದ ಸಮೀಪದಲ್ಲೇ ಹಳ್ಳದಲ್ಲಿ ಸಿಕ್ಕಿದೆ. ಈತನು ಶುಕ್ರವಾರ ರಾತ್ರಿ ತೋಟಕ್ಕೆ ನೀರು ಬಿಡಲು ಹೋಗಿದ್ದನು ಎನ್ನಲಾಗಿದೆ.

ಇದೇ ರೀತಿಯಲ್ಲಿ ಕುರೇಕುಪ್ಪದ ತೋಟಗಳಿಗೆ ನೀರುಣಿಸಲು ಹೋಗಿ ನಾರಿಹಳ್ಳದಿಂದ ಹರಿದುಬಂದ ನೀರು ಮತ್ತು ಕುರೇಕುಪ್ಪದಲ್ಲಿ ಸುರಿದ 5.5 ಮಿಮೀ ಮಳೆಯಿಂದ ತತ್ತರಿಸಿ ಹೋಗಿದ್ದ ಕುರೇಕುಪ್ಪದ ರೈತರಾದ ಕೆಂಚಪ್ಪ (71), ಡಿ. ನಾರಾಯಣ (35), ಡಿ. ಶಿವಲಿಂಗನಗೌಡ (65) ಮತ್ತು ಪಿ. ನಾಗರಾಜ್ (28) ರನ್ನು ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ. ಇವರೆಲ್ಲರೂ ಒಂದೇ ತೋಟದ ಗುಡಿಸಲು ಮೇಲೆ ಹತ್ತಿಕೂತು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೋಟ್ ಮೂಲಕ ಶ್ರೀನಿವಾಸ ಮತ್ತು ಸಿದ್ದಪ್ಪ ಅವರನ್ನು ರಕ್ಷಿಸಲಾಯಿತು.

ಸಂಡೂರು ತಾಲೂಕಿನ ಚೋರನೂರು ಗ್ರಾಮದ ಸುತ್ತಲೂ ಶುಕ್ರವಾರ ರಾತ್ರಿ 102 ಮಿಮೀ ಪ್ರಮಾಣದ ಮಳೆ ಸುರಿದಿದೆ. ಏಕಾಏಕಿ ಸುರಿದ ಭಾರೀ ಮಳೆಯಿಂದ ಚೋರನೂರು ಗ್ರಾಮದ ಸುತ್ತಲಿನ ಸಣ್ಣ ಕೆರೆಗಳು ತುಂಬಿ ದಂಡೆ ಒಡೆದಿವೆ. ಹಳ್ಳಗಳು ಭರ್ತಿಯಾಗಿ ಹರಿದಿವೆ. ಈ ಕಾರಣಕ್ಕಾಗಿ ಅಂಕಮ್ಮನಹಾಳು ಗ್ರಾಮದ ಎರೆಡು ಕರೆಗಳು ತುಂಬಿ ತೂಬು ಒಡೆದಿವೆ.

ಈ ಸಂದರ್ಭದಲ್ಲಿ ರಭಸವಾಗಿ ನೀರು ಹರಿದ ಎಲ್ಲಾ ಹೊಲಗದ್ದೆಗಳು, ತೋಟಗಳಲ್ಲಿ ಇದ್ದಿದ್ದ ಹೂಕೋಸು, ಈರುಳ್ಳಿ, ಭತ್ತ, ಶೇಂಗಾ, ಇನ್ನಿತರೆ ಬೆಳೆಗಳು ಕೊಚ್ಚಿ ಹೋಗಿ ಕೋಟ್ಯಾಂತರ ರುಪಾಯಿ ನಷ್ಟವಾಗಿದೆ. ವಿದ್ಯುತ್ ಮೋಟಾರುಗಳು, ಕೃಷಿ ಉಪಕರಣಗಳು ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.

ಜಿಂದಾಲ್‌ನ ವಿಪತ್ತು ನಿರ್ವಹಣಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರ ನಸುಕಿನಲ್ಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿತ್ತು. ಆದರೆ, ಇವರು ತಂದಿದ್ದ ಬೋಟ್ ಬೆಳೆಗಳ ಮಧ್ಯೆ, ಗಿಡಗಳ ಮಧ್ಯೆ, ತೋಟಗಳ ಫೆನ್ಸಿಂಗ್ ಮಧ್ಯೆ ಸಿಲುಕಿ ಸಾಕಷ್ಟು ತೊಂದರೆಗೆ ಈಡಾಗಿತ್ತು. ಕಾರಣ ನಾಲ್ವರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರುವ ಪ್ರಯತ್ನ ವಿಫಲವಾಗಿತ್ತು. ಕಾರಣ ಜಿಲ್ಲಾಡಳಿತ ಭಾರತೀಯ ವಾಯುಸೇನೆಯನ್ನು ಸಂಪರ್ಕಿಸಿತ್ತು ಎನ್ನಲಾಗಿದೆ.

ಭಾರತೀಯ ವಾಯು ಸೇನಾಪಡೆ ಸಿಬ್ಬಂದಿಯ ಹೆಲಿಕಾಪ್ಟರ್ ಆಗಮಿಸಿದ ನಂತರ ಕುರೇಕುಪ್ಪದ ತೋಟದ ಗುಡಿಸಲ ಮೇಲೆ ಕೂತಿದ್ದ ನಾಲ್ವರನ್ನು ರಕ್ಷಿಸುವ ಕಾರ್ಯ ಸುಗಮವಾಗಿ ನಡೆಯಿತು. ಮಧ್ಯಾಹ್ನ ೩ ಗಂಟೆಯ ವೇಳೆಗೆ ನಾಲ್ವರನ್ನು ರಕ್ಷಿಸಿ ಅವರ ಆರೋಗ್ಯ ತಪಾಸಣೆ ನಡೆಸಿ ಅವರನ್ನು ಮನೆಗೆ ಕಳುಹಿಸಲಾಯಿತು.

ಪ್ರಸ್ತುತ ಮಳೆ ಸುರಿಯುತ್ತಿಲ್ಲ. ಸಂಡೂರು ತಾಲೂಕಿನ ಎಲ್ಲಾ ಹಳ್ಳಕೊಳ್ಳಗಳ ನೀರಿನ ಹರಿವು ಕುಗ್ಗಿದೆ. ನಾರಿಹಳ್ಳ ಜಲಾಶಯದ ಒಳ ಹರಿವು ಕುಗ್ಗಿದೆ. ತೆರೆದ ಕ್ರೆಸ್ಟ್‌ಗೇಟ್‌ಗಳನ್ನು ಪುನಃ ಮುಚ್ಚಲಾಗಿದೆ. ಪರಿಸ್ಥಿತಿ ತಿಳಿಗೊಂಡಿದೆ. ಮೋಡ ಕವಿದಿದ್ದು ರಾತ್ರಿಯೂ ಕೂಡ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಅನೇಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನರೆಡ್ಡಿ, ಸಚಿವರಾದ ಜಿ. ಕರುಣಾಕರರೆಡ್ಡಿ, ಬಿ. ಶ್ರೀರಾಮುಲು, ಸಂಸದೆ ಜೆ. ಶಾಂತಾ, ಜಿಲ್ಲಾಧಿಕಾರಿ ಬಿ. ಶಿವಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಅವರು ಭೇಟಿ ನೀಡಿ ಪರಿಹಾರ ಕಾರ್ಯಗಳು ಚುರುಕಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಂಡರು.

ಪರಿಹಾರ: ಅಂಕಮ್ಮನಹಾಳು ಗ್ರಾಮದ ಮೃತ ಯುವ ರೈತ ಗೋನಾಳ್ ಬಸವರಾಜ್ (28) ಅವರಿಗೆ ಭಾನುವಾರ ಅಥವಾ ಸೋಮವಾರ ಬೆಳಗ್ಗೆ ೧ ಲಕ್ಷ ರುಪಾಯಿಯನ್ನು ಪರಿಹಾರವಾಗಿ ನೀಡಲಾಗುತ್ತದೆ ಎಂದು ಸಂಡೂರು ತಹಸೀಲ್ದಾರ್ ಶಿವಪ್ಪ ಲಮಾಣಿ ಅವರು ತಿಳಿಸಿದ್ದಾರೆ.

ಬೆಳೆನಷ್ಟ ಪರಿಹಾರ: ನಾರಿಹಳ್ಳ ಜಲಾಶಯದಿಂದ ಹೊರಬಿಟ್ಟ ನೀರಿನಿಂದ ಮತ್ತು ಭಾರೀ ಮಳೆಯಿಂದ ಉಂಟಾದ ಮಳೆಯಿಂದ ನೂರಾರು ಎಕರೆ ಭೂಮಿಯಲ್ಲಿ ಬಿತ್ತನೆ ಆಗಿದ್ದ ಬೆಳೆ ನಷ್ಟದ ಪ್ರಮಾಣವನ್ನು ಅಂದಾಜಿಸಲು ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಅವರು ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿದ್ದಾರೆ. ಅಲ್ಲದೇ, ಪರಿಹಾರದ ಮೊತ್ತವನ್ನು ಕೂಡ ಶೀಘ್ರದಲ್ಲೇ ವಿತರಿಸಲು ಸೂಚಿಸುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X