ಚಾಮುಂಡಿ ಎಕ್ಸ್ ಪ್ರೆಸ್ಸಿನಲ್ಲಿ ದೃಶ್ಯ ಶ್ರವ್ಯ ಮನರಂಜನಿ

ಭಾರತೀಯ ರೈಲ್ವೆ ಇಲಾಖೆ ಈಗಾಗಲೇ ಇಂತಹ ಪ್ರಯೋಗವನ್ನು ಮುಂಬೈ-ಅಹಮದಾಬಾದ್ ಶತಾಬ್ಧಿ ರೈಲಿಗೆ ಅಳವಡಿಸಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಪ್ರಯಾಣದುದ್ದಕ್ಕೂ ಮನರಂಜನೆ ಜೊತೆಗೆ ರೈಲುಗಳ ಬಗ್ಗೆ ಮಾಹಿತಿ, ಪ್ರಚಲಿತ ಸುದ್ದಿಗಳ ಜೊತೆಗೆ ಸುರಕ್ಷಿತ ಪ್ರಯಾಣಕ್ಕೆ ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಸೇರಿದಂತೆ ಅನೇಕ ಸಲಹೆ ಸೂಚನೆಗಳನ್ನು ಕೂಡಾ ಆಡಿಯೋ-ವಿಡಿಯೋದಲ್ಲಿ ಅಳವಡಿಸಲಾಗಿದೆ.
ರೈಲ್ವೆ ಇಲಾಖೆಯ ಈ ವಿನೂತನ ಸೇವೆಗೆ ಸಾರ್ವಜನಿಕರಿಂದ ಬಾರಿ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಚಾಮುಂಡಿ ಎಕ್ಸ್ ಪ್ರೆಸ್ ರೈಲಿಗೆ ಈ ಸೇವೆ ಕಲ್ಪಿಸಲು ನಿರ್ಧರಿಸಲಾಗಿದ್ದು, ನಾಳೆಯಿಂದ(ಗುರುವಾರ) ಸಾರ್ವಜನಿಕರಿಗೆ ಈ ಸೇವೆ ದೊರೆಯಲಿದೆ ಎಂದು ನೈಋತ್ಯ ರೈಲ್ವೆ ವಲಯದ ಮೈಸೂರಿನ ವಿಭಾಗೀಯ ವ್ಯವಸ್ಥಾಪಕ ಆರ್ ಆರ್ ವರ್ಮಾ ಹೇಳಿದ್ದಾರೆ.
ಶತಾಬ್ಧಿ ರೈಲಿನ ನಂತರ ಆಡಿಯೋ ವಿಡಿಯೋ ಹೊಂದಿದ ರೈಲು ಎಂಬ ಕೀರ್ತಿಗೆ ಚಾಮುಂಡಿ ಎಕ್ಸ್ ಪ್ರೆಸ್ ಪಾತ್ರವಾಗಿದೆ. ಪ್ರತಿ ಬೋಗಿಯಲ್ಲೂ ನಾಲ್ಕು ಡಿಜಿಟಲ್ ಸ್ಕ್ರೀನ್ ಗಳನ್ನು ಕೂರಿಸಲಾಗುವುದು. ಮನರಂಜನೆ ಜೊತೆಗೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಮಾಹಿತಿ, ಪ್ರಚಲಿತ ಸುದ್ದಿಗಳ ಸಂಕ್ಷಿಪ್ತ ಮಾಹಿತಿಗಳನ್ನು ಒದಗಿಸಲು ಇಲಾಖೆ ತೀರ್ಮಾನಿಸಿದೆ. ಸದ್ಯ ಪ್ರಾಯೋಗಿಕವಾಗಿ ಚಾಮುಂಡಿ ರೈಲಿಗೆ ಮಾತ್ರ ಈ ಸೇವೆ ನೀಡಲಾಗಿದ್ದು, ಸಾರ್ವಜನಿಕರಿಂದ ಪ್ರತಿಕ್ರಿಯೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್ ಪ್ರೆಸ್, ಬೆಂಗಳೂರು-ಹುಬ್ಬಳ್ಳಿ ಇಂಟರ್ ಸಿಟಿ ಎಕ್ಸ್ ಪ್ರೆಸ್, ಶಿವಮೊಗ್ಗ-ಬೆಂಗಳೂರು ಇಂಟರ್ ಸಿಟಿ ರೈಲಿಗೆ ಆಡಿಯೋ-ವಿಡಿಯೋ ಕಲ್ಪಿಸುವ ಚಿಂತನೆ ನಡೆಸಲಾಗಿದೆ ಎಂದು ವರ್ಮಾ ವಿವರಿಸಿದರು.












Click it and Unblock the Notifications