• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಗ್ಗೋಡ್ಲುವಿನಲ್ಲಿ ಕೆಸರು ಗದ್ದೆ ಒಲಂಪಿಕ್ಸ್

By * ಬಿ.ಎಂ.ಲವಕುಮಾರ್
|

ಕೊಡಗಿನವರು ವೀರರು, ಶೂರರು ಮಾತ್ರವಲ್ಲ ಕ್ರೀಡಾಪ್ರೇಮಿಗಳೂ ಹೌದು ಎಂಬುವುದಕ್ಕೆ ಇಲ್ಲಿ ವರ್ಷ ಪೂರ್ತಿ ನಡೆಯುವ ಹಲವು ಕ್ರೀಡಾಕೂಟಗಳೇ ಸಾಕ್ಷಿಯಾಗಿವೆ.

ಬೇಸಿಗೆಯಲ್ಲಿ ಹಾಕಿ, ಫುಟ್ಭಾಲ್, ಕ್ರಿಕೆಟ್, ವಾಲಿಬಾಲ್ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಶೌರ್ಯ ಮೆರೆದ ಕ್ರೀಡಾಪಟುಗಳು, ಅದನ್ನು ಕಣ್ಣಾರೆ ನೋಡಿ ಆನಂದಿಸಿದ ಕ್ರೀಡಾಪ್ರೇಮಿಗಳು ಮಳೆಗಾಲ ಬಂತೆಂದರೆ ಕೈ ಕಟ್ಟಿ ಕೂರುವುದಿಲ್ಲ. ಮಳೆಗಾಲದಲ್ಲಿ ಭತ್ತದ ಗದ್ದೆಯನ್ನೇ ಮೈದಾನವನ್ನಾಗಿಸಿಕೊಂಡು ಕೆಸರುಗದ್ದೆ ಕ್ರೀಡೆಗಳನ್ನು ಆಯೋಜಿಸಿ ಆನಂದಿಸುತ್ತಾರೆ.

ಭವ್ಯ ಇತಿಹಾಸ : ಕೊಡಗಿನಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಕ್ಕೆ ತನ್ನದೇ ಆದ ಇತಿಹಾಸವಿದೆ. ಇದು ರಾಜಮಹಾರಾಜರ ಕಾಲದಲ್ಲಿಯೇ ಪ್ರಚಲಿತದಲ್ಲಿತ್ತು. ಸೈನಿಕರು ಭತ್ತದ ಗದ್ದೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರೆ, ರಾಜ ಗದ್ದೆಯ ಏರಿಯಲ್ಲಿ ನಿಂತು ವೀಕ್ಷಿಸುತ್ತಿದ್ದರಂತೆ. ಹಿಂದಿನ ಕಾಲದಲ್ಲಿ ಕೊಡಗಿನ ಮಳೆ ಎಂದರೆ ಜನ ಭಯಪಡುತ್ತಿದ್ದರು. ದೂರದ ಊರುಗಳಿಂದ ಇಲ್ಲಿಗೆ ಬರಲು ಸರ್ಕಾರಿ ನೌಕರರು ಕೂಡ ಹಿಂದೇಟು ಹಾಕುತ್ತಿದ್ದರು. ಏಕೆಂದರೆ ಆಗಿನ ಮಳೆಯೂ ಕೂಡ ಹಾಗೆಯೇ ಇತ್ತು. ಯುಗಾದಿ ಹಬ್ಬ ಕಳೆಯುತ್ತಿದ್ದಂತೆಯೇ ಪ್ರಾರಂಭವಾಗುತ್ತಿದ್ದ ಮಳೆ ದೀಪಾವಳಿ ತನಕವೂ ಸುರಿಯುತ್ತಿತ್ತು. ಆಗ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯೂ ಇರಲಿಲ್ಲ. ಭತ್ತದ ಬೆಳೆಯೇ ಜೀವನಾಧಾರವಾಗಿತ್ತು. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭತ್ತದ ಕೃಷಿಯನ್ನು ಮಾಡುತ್ತಿದ್ದರು. ಹೀಗಾಗಿ ಜೂನ್ ತಿಂಗಳ ಪ್ರಾರಂಭದಲ್ಲಿ ರೈತರು ನೇಗಿಲು ಹಿಡಿದು ಗದ್ದೆಗಿಳಿದರೆ ನಾಟಿ ಕೆಲಸ ಮುಗಿಸಿ ಈಚೆಗೆ ಬರುವ ವೇಳೆಗೆ ತಿಂಗಳುಗಳೇ ಕಳೆದು ಹೋಗುತ್ತಿತ್ತು. ಈ ಸಂದರ್ಭ ಪೇಟೆ, ಪಟ್ಟಣದ ರಂಗು ರಂಗಿನ ಬದುಕಾಗಲೀ, ಮನೋರಂಜನೆಯಾಗಲೀ ಅವರಿಗೆ ದೊರೆಯುತ್ತಿರಲಿಲ್ಲ. ಆದರೂ ಬಿಡುವಿಲ್ಲದ ಕೆಲಸದ ನಡುವೆಯೂ ಒಂದಷ್ಟು ಮನೋರಂಜನೆಗಾಗಿ ನಾಟಿ ಓಟವನ್ನು ಏರ್ಪಡಿಸುತ್ತಿದ್ದರು.

ನಾಟಿ ಓಟವನ್ನು ಊರಿನ ಕೆಲವೇ ಕುಟುಂಬಗಳು ಮಾತ್ರ ನಡೆಸುತ್ತಿದ್ದರು. ತಿಂಗಳುಗಟ್ಟಲೆ ಭತ್ತದ ನಾಟಿ ಕೆಲಸದಲ್ಲಿ ನಿರತರಾದ ಮಂದಿ ನಾಟಿ ಕೆಲಸವನ್ನು ಮುಗಿಸಿ ಕೊನೆಗೆ ದೊಡ್ಡ ಗದ್ದೆಯೊಂದನ್ನು ಉಳಿಸಿಕೊಳ್ಳುತ್ತಿದ್ದರು. ಈ ಗದ್ದೆಯಲ್ಲಿ ನಾಟಿ ನೆಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಇದನ್ನು ದೊಡ್ಡ ನಾಟಿ ಎಂದು ಕರೆಯಲಾಗುತ್ತಿತ್ತು. ಈ ನಾಟಿಗೆ ಮಾಂಸದ ಊಟ ತಯಾರಿಸಿ ಬಡಿಸಲಾಗುತ್ತಿತ್ತು. ಬಳಿಕ ನಾಟಿ ಮುಗಿದ ಮೇಲೆ ಸಂಜೆ ನಾಟಿ ನೆಟ್ಟ ಗದ್ದೆಯಲ್ಲಿ ನಾಟಿ ಓಟ ಏರ್ಪಡಿಸಲಾಗುತ್ತಿತ್ತು. ನಾಟಿ ಓಟದಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ನಗದು, ಬಾಳೆಗೊನೆ, ತೆಂಗಿನಕಾಯಿ, ವೀಳ್ಯದೆಲೆ ನೀಡಲಾಗುತ್ತಿತ್ತು. ನಾಟಿ ಓಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಲ್ಲಿ ಯಾವುದೇ ರೀತಿಯ ಪೈಪೋಟಿಯಿಲ್ಲದೆ, ಮನೋರಂಜನೆಯಷ್ಟೆ ಮುಖ್ಯವಾಗಿತ್ತು.

ಆ ದಿನಗಳಲ್ಲಿ ಇಂತಹ ನಾಟಿ ಓಟಗಳು ಕೊಡಗಿನಲ್ಲಿ ಅಲ್ಲಲ್ಲಿ ನಡೆಯುತ್ತಿತ್ತಾದರೂ, ಮಡಿಕೇರಿ ಸಮೀಪದ ಕಗ್ಗೋಡ್ಲುವಿನ ಸಿ.ಬಿ.ಬೋಪಯ್ಯರವರ ಗದ್ದೆಯಲ್ಲಿ ನಡೆಯುತ್ತಿದ್ದ ನಾಟಿ ಓಟ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದು ಜನರ ಗಮನಸೆಳೆದಿತ್ತು. ಇಲ್ಲಿ ನಡೆಯುವ ನಾಟಿ ಓಟವನ್ನು ವೀಕ್ಷಿಸಲು ದೂರದ ಊರುಗಳಿಂದ ಕ್ರೀಡಾಸ್ಪರ್ಧಿಗಳು ಹಾಗೂ ಕ್ರೀಡಾಪ್ರೇಮಿಗಳು ಬರುತ್ತಿದ್ದರು. ತದನಂತರ ಇಲ್ಲಿ ನಡೆಯುವ ನಾಟಿ ಓಟದ ಪ್ರಾಯೋಜಕತ್ವವನ್ನು ಲಯನ್ಸ್ ಕ್ಲಬ್, ಕೊಡಗು ಪೊಲೀಸ್ ಇಲಾಖೆ ನಡೆಸುವ ಮೂಲಕ ಇನ್ನಷ್ಟು ಮೆರಗು ನೀಡಿತು. ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವದ ಹಿಂದಿನ ಶನಿವಾರ ಮಧ್ಯಾಹ್ನ ನಾಟಿ ಓಟ ನಡೆಸಲಾಗುತ್ತಿತ್ತಲ್ಲದೆ, ವಿಜೇತರಿಗೆ ಸ್ವಾತಂತ್ರ್ಯೋತ್ಸವದ ದಿನದಂದು ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತಿತ್ತು. ಇದು ಕೆಲವು ವರ್ಷಗಳ ಕಾಲ ಹೀಗೆಯೇ ನಡೆಯುತ್ತಾ ಬಂತಾದರೂ ಇದಕ್ಕೆ ಹೊಸರೂಪ ನೀಡಿದ್ದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಯೂತ್ ಹಾಸ್ಟೆಲ್ ಮಡಿಕೇರಿ ಘಟಕ.

ವೈವಿಧ್ಯಮಯ ಕ್ರೀಡೆ : ಯೂತ್ ಹಾಸ್ಟೆಲ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾಂಪ್ರದಾಯಿಕ ನಾಟಿ ಓಟದೊಂದಿಗೆ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡೆಗಳಾದ ವಾಲಿಬಾಲ್, ಕೆಸರುಗದ್ದೆ ಓಟ, ರಿಲೇ, ನಿಂಬೆಹಣ್ಣು ಚಮಚ ಓಟ, ಹಗ್ಗಜಗ್ಗಾಟ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸುವುದರೊಂದಿಗೆ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನಾಗಿ ಮಾರ್ಪಡಿಸುವುದರೊಂದಿಗೆ ರಾಜ್ಯಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದರು.

ಇದೀಗ ಪ್ರತಿ ವರ್ಷವೂ ಆಗಸ್ಟ್ 15ನೇ ತಾರೀಕಿನ ಹಿಂದಿನ ಶನಿವಾರ (ಪ್ರಸಕ್ತ ವರ್ಷ ಆ.8) ಕಗ್ಗೋಡ್ಲಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಏರ್ಪಡಿಸಲಾಗುತ್ತದೆ. ಈ ಸಂದರ್ಭ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಮಕ್ಕಳು, ಮಹಿಳೆಯರು, ಪುರುಷರ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಬೃಹತ್ ಕೆಸರು ಗದ್ದೆಗಳಲ್ಲಿ ಕೆಸರು ಸಿಂಚನದೊಂದಿಗೆ ಪ್ರಶಸ್ತಿಗಾಗಿ ಸೆಣಸಾಡುವ ದೃಶ್ಯ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತದೆ.

ಪ್ರಕೃತಿ ರಮಣೀಯ ತಾಣವಾಗಿರುವ ಕಗ್ಗೋಡ್ಲು ಕೆಸರು ಗದ್ದೆ ಕ್ರೀಡಾಕೂಟದಿಂದಾಗಿ ಇಂದು ದೇಶವಿದೇಶಗಳಲ್ಲಿ ಗಮನಸೆಳೆಯುತ್ತಿದೆ. ಇಲ್ಲಿನ ವಿಶಾಲಗದ್ದೆ ಬಯಲು, ಸುತ್ತಲೂ ಆವರಿಸಿಕೊಂಡಿರುವ ಕಾಫಿ, ಅಡಿಕೆ ತೋಟಗಳು, ದೂರದ ಬೆಟ್ಟಗುಡ್ಡಗಳು ಪ್ರಕೃತಿ ಪ್ರಿಯರಿಗೆ ಮುದ ನೀಡುತ್ತದೆ. ಸುರಿಯುವ ಮಳೆಯಲ್ಲಿಯೇ ಇಲ್ಲಿ ಕ್ರೀಡಾಕೂಟ ನಡೆಯುತ್ತದೆ. ಈ ಕ್ರೀಡಾಕೂಟವನ್ನು ವೀಕ್ಷಿಸಲು ಯಾವುದೇ ಗ್ಯಾಲರಿಗಳಿಲ್ಲ. ಗದ್ದೆ ಏರಿ, ರಸ್ತೆ ಬದಿಯಲ್ಲಿ ನಿಂತುಕೊಂಡೇ ವೀಕ್ಷಿಸಬೇಕು. ಇಲ್ಲಿ ಗ್ಯಾಲರಿ ನಿರ್ಮಿಸುವ ಭರವಸೆಗಳು ಪ್ರತಿ ವರ್ಷ ಕೇಳಿಬರುತ್ತಿವೆಯಾದರೂ ಗ್ಯಾಲರಿ ನಿರ್ಮಾಣದ ಕನಸು ಮಾತ್ರ ಸಕಾರಗೊಂಡಿಲ್ಲ.

ಇತ್ತೀಚಿಗಿನ ವರ್ಷಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟ ಜನಪ್ರಿಯವಾಗುತ್ತಿದ್ದು, ಜಿಲ್ಲೆಯ ಕೆಲವೆಡೆ ಯುವಕ ಸಂಘಗಳು, ಸಂಘ ಸಂಸ್ಥೆಗಳು ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದನ್ನು ನಾವು ಕಾಣಬಹುದು. ಆದರೆ ಕಗ್ಗೋಡ್ಲುವಿನಲ್ಲಿ ನಡೆಯುವ ಕ್ರೀಡಾಕೂಟ ಮಾತ್ರ ಎಲ್ಲಕ್ಕಿಂತ ಭಿನ್ನ ಹಾಗಾಗಿ ಜನಪ್ರಿಯವಾಗಿದೆ.

ತಪ್ಪದೆ ಬನ್ನಿ : ದಿನನಿತ್ಯದ ಜಂಜಾಟ, ಸದಾ ಗಿಜಿಗಿಡುವ ಪೇಟೆಯ ಬದುಕಿಂದ ಹೊರಗಿದ್ದು ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಸಮಯವನ್ನು ನೆಮ್ಮದಿಯಾಗಿ ಕಳೆಯುವುದರೊಂದಿಗೆ ಮನರಂಜನೆ ಪಡೆಯಬೇಕೆಂಬ ಬಯಕೆ ನಿಮ್ಮದಾದರೆ ಖಂಡಿತಾ ಈ ಬಾರಿ ನಡೆಯುವ ಕಗೋಡ್ಲುವಿನಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಕ್ಕೆ ತಪ್ಪದೆ ಬನ್ನಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more