ಬ್ರೆಜಿಲ್ ಗೆ ಸಡ್ಡು ಹೊಡೆಯಲು ಹಾಲೆಂಡ್ ಸಜ್ಜು

ಈವರೆಗೂ ಹಾಲೆಂಡ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಬ್ರೆಜಿಲ್ ಮೂರು ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಬ್ರೆಜಿಲ್ ಒಟ್ಟು 8ಗೋಲುಗಳಿಸಿದೆ. ಐವರಿ ಕೋಸ್ಟ್, ಕೊರಿಯಾ ಮಾತ್ರ ತಲಾ ಒಂದು ಗೋಲು ಗಳಿಸಲು ಶಕ್ಯವಾಗಿದೆ. ಹಾಲೆಂಡ್ 7 ಗೋಲುಗಳಿಸಿದ್ದು, ಹಾಲೆಂಡ್ ವಿರುದ್ಧ ಕೆಮರೂನ್ ಹಾಗೂ ಸ್ಲೊವೆಕಿಯಾ ಮಾತ್ರ ಒಂದೊಂದು ಗೋಲು ಗೋಲಿಸಿದ್ದವು.
ಎರಡೂ ತಂಡಗಳ ಮುಂಪಡೆ ಆಟಗಾರರಂತೆ, ರಕ್ಷಣಾ ವ್ಯೂಹವೂ ಗಟ್ಟಿಯಾಗಿರುವುದರಿಂದ ಎದುರಾಳಿಗಳು ಗೋಲುಗಳಿಸಲು ಸಾಕಷ್ಟು ಹೆಣಗಾಡಿದ್ದಾರೆ. ಬ್ರೆಜಿಲ್ ವಿಶ್ವಕಪ್ ಆರಂಭದಿಂದಲೇ ಫೇವರಿಟ್ ತಂಡ ಎಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿದಿದೆ. ಆದರೆ, ಹಾಲೆಂಡ್, ಎಲ್ಲರ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿತ್ತಾ ಬಂದಿದೆ.
ಬಲಾಬಲ:ಈಗಾಗಲೇ ಏಷ್ಯಾ, ಉತ್ತರ ಅಮೆರಿಕ, ಯುರೋಪ್ ಹಾಗೂ ಸ್ವಂತ ನೆಲದಲ್ಲಿ ವಿಶ್ವಕಪ್ ಗೆದ್ದಿರುವ ಬ್ರೆಜಿಲ್ ಈಗ ಪ್ರಪ್ರಥಮ ಬಾರಿಗೆ ಅಫ್ರಿಕಾದ ನೆಲದಲ್ಲಿ ಕಪ್ ಎತ್ತಿ ಕುಣಿದಾಡಲು ಸಿದ್ಧವಾಗಿದೆ. ಹಾಲೆಂಡ್ ಜರ್ಮನಿ (1974)ಹಾಗೂ ಅರ್ಜೆಂಟೀನಾ (1978)ಯಲ್ಲಿ ಫೈನಲ್ ತಲುಪಿದ್ದೆ ಈವರೆಗಿನ ಉತ್ತಮ ಸಾಧನೆ. ಒಟ್ಟು 9 ಬಾರಿ ಪರಸ್ಪರ ಎದುರಾಗಿದ್ದು, ಹಾಲೆಂಡ್ 2 ಬಾರಿ, ಬ್ರೆಜಿಲ್ 3 ಬಾರಿ ಗೆದ್ದಿದೆ. 4 ಡ್ರಾ ಪಂದ್ಯಗಳಿವೆ.
ನ್ಯೂನತೆಗಳಿಲ್ಲದ ಬ್ರೆಜಿಲ್ : ಹಿಂಬದಿಯಲ್ಲಿ ಲೂಸಿಯೊ, ಮೈಕಾನ್ ಇದ್ದರೆ ಮುಂಪಡೆಯಲ್ಲಿ ಕಾಕಾ, ಫ್ಯಾಬಿಯಾನೊ, ರಾಬಿನ್ಹೊ ಸಮರ್ಥವಾಗಿ ಆಡುತ್ತಿದ್ದಾರೆ.ಎಲಾನೊ ಗಾಯಗೊಂಡಿರುವುದು ಹಿನ್ನೆಡೆಯಾಗಲಿದೆ. ಗೋಲಿ ಸೀಸರ್ ಉತ್ತಮವಾದ ಚಾಕಚಕ್ಯತೆ ಮೆರೆದು ಎದುರಾಳಿಗಳಿಗೆ ಬೇಧಿಸಲಾಗದ ಗೋಡೆಯಂತಾಗಿದ್ದಾರೆ.
ಕೋಚ್ ಡುಂಗ ಕ್ವಾಟರ್ ಫೈನಲ್ ಪಂದ್ಯದಲ್ಲಿ ರಕ್ಷಣಾ ತಂತ್ರದ ಮೇಲೆ ಹೆಚ್ಚು ಒತ್ತು ಕೊಡುವ ಸಾಧ್ಯತೆಯಿದೆ. ಬ್ರೆಜಿಲ್ ಶೈಲಿಯ ಆಟವನ್ನು ಪ್ರಸ್ತುತ ತಂಡ ಪ್ರದರ್ಶಿಸುತ್ತಿಲ್ಲ ಎಂಬ ಕೂಗು ಎದ್ದಿದೆಯಾದರೂ ಪಂದ್ಯದಿಂದ ಪಂದ್ಯಕ್ಕೆ ತಂಡ ಉತ್ತಮ ಫಲಿತಾಂಶದೊಂದಿಗೆ ಮುನ್ನುಗ್ಗುತ್ತಿದೆ.
ಹಾಲೆಂಡ್ ಶಕ್ತಿಯುತ ಫಾರ್ವಡ್: ಮಿಡ್ ಫೀಲ್ಡ್ ನಲ್ಲಿ ಸ್ನೈಡರ್ , ವಾನ್ ಡರ್ ವಾರ್ಟ್ ,ಸ್ಕಾರ್ ಇದ್ದರೂ ಸ್ನೇಜರ್ ಮಾತ್ರ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ರೊಬೆನ್, ವಾನ್ ಪರ್ಸಿ ಯಾವುದೇ ರಕ್ಷಣೆ ಛಿದ್ರಗೊಳಿಸುವ ಸಾಮರ್ಥ್ಯವುಳ್ಳವರು.ಆದರೆ, ವೆಲ್, ಓಜರ್, ಬ್ರಾಫೈಡ್, ಹೈಟಿಗಾ ವುಳ್ಳ ಡಿಫೆಂಡರ್ ಪಡೆ ಇನ್ನಷ್ಟು ಚುರುಕಾಗಿ ಓಡಾಡಬೇಕಿದ್ದು, ಬ್ರೆಜಿಲ್ ಮುಂಪಡೆ ಆಟಗಾರರನ್ನು ಕಟ್ಟಿಹಾಕಲು ವಿಫಲರಾದರೆ ಭಾರಿ ಅಂತರದ ಸೋಲು ಕಟ್ಟಿಟ್ಟ ಬುತ್ತಿ.
ಫಲಿತಾಂಶ ನಿರೀಕ್ಷೆ: ಬ್ರೆಜಿಲ್ ಗೆ ಈ ಪಂದ್ಯ ನಿಜವಾದ ಸತ್ವಪರೀಕ್ಷೆ. ಈ ಪಂದ್ಯ ಗೆದ್ದರೆ ವಿಶ್ವಕಪ್ ಗೆಲುವು ಸುಲಭ. ಬುಕ್ಕಿಗಳು ಬ್ರೆಜಿಲ್ ಪರವಾಗಿ ನಿಂತು 2-1 ಅಂತರದ ಜಯ ಘೋಷಿಸಿದ್ದಾರೆ. ಕಾಕಾ ಗೋಲು ಗಳಿಸ್ವ ನಿರೀಕ್ಷೆ ವ್ಯಕ್ತಪಡಿಸಿದ್ದು, ಒಂದು ವೇಳೆ ಹಾಲೆಂಡ್ ಗೆದ್ದರೆ ವಿಶ್ವಕಪ್ ಗೆ ಆರೆಂಜ್ ಬಣ್ಣ ಬಳಿಯುವುದಂತೂ ಖಂಡಿತ ಎಂದಿದ್ದಾರೆ.












Click it and Unblock the Notifications