ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಉದ್ಯಮಿಗಳ ಹಬ್ಬಕ್ಕೆ ವಿಧ್ಯುಕ್ತ ಚಾಲನೆ

By Mahesh
|
Google Oneindia Kannada News

GIM 2010, Bangalore
ಬೆಂಗಳೂರು, ಜೂ.3: ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನ(GIM 2010)ಕ್ಕೆ ಬಿಜೆಪಿ ನಾಯಕ ಅರುಣ್ ಜೇಟ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಜಿಲ್ಲಾ, ವಲಯವಾರು ಕೈಗಾರಿಕಾ ಬಂಡವಾಳ ಹೂಡಿಕೆಗೆ ಅನುಕೂಲವಾಗುವಂತೆ ಕಿರುಹೊತ್ತಿಗೆಗಳನ್ನು ಅರುಣ್ ಜೇಟ್ಲಿ ಈ ಸಂದರ್ಭದಲ್ಲಿ ಅನಾವರಣ ಮಾಡಿದರು. ಈ ಸಮ್ಮೇಳನದಲ್ಲಿ ಸುಮಾರು 12 ಕ್ಷೇತ್ರಗಳಲ್ಲಿ 4 ಲಕ್ಷ ಕೋಟಿ ರುಗಳಿಗೂ ಅಧಿಕ ಬಂಡವಾಳ ಹೂಡಿಕೆ ಆಗುವ ಸಾಧ್ಯತೆಯಿದೆ.

ಈ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೋಯ್ಲಿ,ಕೇಂದ್ರ ಆಹಾರ ಸಂಸ್ಕರಣಾ ಸಚಿವ ಸುಬೋಧ್ ಕಾಂತ್ , ಉದ್ಯಮಿಗಳಾದ ಲಕ್ಷ್ಮಿ ಮಿತ್ತಲ್, ವಿಜಯ್ ಮಲ್ಯ, ಇಸ್ರೋ ಮಾಜಿ ಮುಖ್ಯಸ್ಥ ಕಸ್ತೂರಿ ರಂಗನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಜಾಗತಿಕ ದಿಗ್ಗಜರ ದಂಡು : ಜಗತ್ತಿನ ಪ್ರಮುಖ ಉದ್ಯಮಿದಾರರ ದಂಡೇ ಅರಮನೆ ಮೈದಾನದಲ್ಲಿ ನೆರೆದಿದೆ. ಜಗತ್ತಿನ ಉಕ್ಕು ಉತ್ಪಾದನಾ ಕ್ಷೇತ್ರದ ದಿಗ್ಗಜ ಲಕ್ಷ್ಮೀ ನಿವಾಸ್ ಮಿತ್ತಲ್, ಬಿರ್ಲಾ ಗ್ರೂಪ್‌ನ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ, ವಿಪ್ರೋ ಲಿಮಿಟೆಡ್‌ನ ಮುಖ್ಯಸ್ಥ ಅಜೀಂ ಪ್ರೇಮ್‌ಜೀ, ಯುಬಿ ಗ್ರೂಪ್‌ನ ಮುಖ್ಯಸ್ಥ ವಿಜಯ ಮಲ್ಯ, ಜೆಎಸ್‌ಡ್ಬ್ಲ್ಯೂ ಸ್ಟೀಲ್ಸ್‌ನ ಸಜ್ಜನ್ ಜಿಂದಾಲ್, ಎಸ್ಸಾರ್ ಗ್ರೂಪ್‌ನ ಮುಖ್ಯಸ್ಥ ಶಶಿ ರಾಜಾ, ಇನ್ಫೋಸಿಸ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿ ಪ್ರಸಾದ್ ಶೆಟ್ಟಿ ಸೇರಿದಂತೆ ಉದ್ಯಮಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಎರಡು ದಿನ ನಡೆಯಲಿರುವ ಸಮಾವೇಶದಲ್ಲಿ ವಿವಿಧ ಉದ್ದಿಮೆಗಳ 3 ಸಾವಿರಕ್ಕೂ ಅಧಿಕಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಆರಂಭಿಕ ದಿನವಾದ ಗುರುವಾರ ನಾಲ್ಕು ಗೋಷ್ಠಿ ಜರುಗಲಿದೆ. ಬಳಿಕ ಏರೋಸ್ಪೇಸ್, ಖನಿಜ, ಪ್ರವಾಸೋದ್ಯಮ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಗೋಷ್ಠಿಗಳು ನಡೆಯಲಿವೆ.

ಬಯೋ ಮೇಳಕ್ಕೆ ಕೊಂಡಿ: ಆಯಾ ಗೋಷ್ಠಿಯಲ್ಲಿ ಸಂಬಂಧಿಸಿದ ಇಲಾಖೆ ಸಚಿವರು, ಆಯುಕ್ತರು, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ಇದರೊಂದಿಗೆ ಲಲಿತ್ ಅಶೋಕ್ ಹೊಟೇಲ್ ನಲ್ಲಿ ಬುಧವಾರ ಆರಂಭಗೊಂಡ ಬೆಂಗಳೂರು ಇಂಡಿಯಾ ಬಯೋ- 2010 ಪೂರಕವಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಗೋಷ್ಠಿಯನ್ನು ಆಯೋಜಿಸಲಾಗಿದೆ.

ಎರಡನೇ ದಿನದಂದು ಆಟೋಮೊಬೈಲ್, ಐಟಿ, ಮೂಲಸೌಕರ್ಯ, ವಿದ್ಯುಚ್ಛಕ್ತಿವಲಯಗಳಿಗೆ ಸಂಬಂಧಿಸಿದ ಗೋಷ್ಠಿಗಳು ಬೆಳಗ್ಗೆ 10ಗಂಟೆಗೆ ಆರಂಭಗೊಳ್ಳಲಿದೆ. ಮಧ್ಯಾಹ್ನ 2 ಕ್ಕೆ ಆಹಾರ ಸಂಸ್ಕರಣೆ, ಜವಳಿ, ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಗೋಷ್ಠಿಗಳು ನಡೆಯಲಿವೆ. ಪ್ರತಿ ದಿನ ಸಂಜೆ 6.30 ರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಶುಕ್ರವಾರ ಸಂಜೆ ಮುಕ್ತಾಯ ಸಮಾರಂಭವಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X