ಅರ್ಜೆಂಟಿನಾ ಗೆದ್ದರೆ ಮರಡೋನ ಬೆತ್ತಲೆ ಓಟ

ಅರ್ಜೆಂಟಿನಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಮರಡೋನಾಗೆ ತಮ್ಮ ತಂಡದ ಫುಟ್ಬಾಲ್ ಕೌಶಲ್ಯ ಮತ್ತು ದೇಶದ ಮೇಲೆ ಅಪಾರ ಹೆಮ್ಮೆ ಮತ್ತು ಪ್ರೀತಿ. ಈ ಬಾರಿ ಗೆಲ್ಲಲೇಬೇಂಬ ಛಲ ಅವರದ್ದು. 'ತಮ್ಮ ಪ್ರತಿಸ್ಪರ್ಧಿ ಗೆದ್ದದ್ದೇ ಆದ ಪಕ್ಷದಲ್ಲಿ ತಾವು ಮೀಸೆ ಬೋಳಿಸಿಕೊಳ್ಳುವುದಾಗಿ' ಕರ್ನಾಟಕದಲ್ಲಿ ರಾಜಕಾರಣಿಗಳು ಪತ್ರಿಕೆಯವರ ಮುಂದೆ ವಾಗ್ದಾನ ಮಾಡುವುದು ವಾಡಿಕೆಯ ಮಾತು. ಅವರು ಆ ಮಾತನ್ನು ಎಂದು ಉಳಿಸಿಕೊಳ್ಳುವುದಿಲ್ಲ ಎನ್ನುವುದು ಬೇರೆಯದೇ ಆದ ಮಾತು. ಅದೇ ರೀತಿ ಮರಡೋನ ಕೂಡ ಮಾಡಿರಬಹುದಾ?
ನಮ್ಮ ನೆಲದಲ್ಲಿ ಇದುವರೆಗೂ ಅನೇಕರು ಎಂತೆಂಥದೋ ವಾಗ್ದಾನಗಳನ್ನು ಮಾಡಿ ಸೋತಿದ್ದರೂ ಆಡಿದ ಮಾತು ಉಳಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಆದರೆ, ಮರಡೋನ ಏನು ಮಾಡುತ್ತಾರೋ ನಮಗೆ ಗೊತ್ತಿಲ್ಲ. ನಗ್ನರಾಗಿ ಓಟ ಕೀಳುವ ವಾಗ್ದಾನ ಮಾಡುವುದರ ಮೂಲಕ ಪರೋಕ್ಷವಾಗಿ ತಮ್ಮ ತಂಡದ ಹೋರಾಟದ ಕಿಚ್ಚಿಗೆ ಗೆಲುವಿನ ದೀಪ ಹಚ್ಚಲು ಈ ಮೂಲಕ ಅವರು ಪ್ರಯತ್ನ ಮಾಡುತ್ತಿರುವುದಂತೂ ಗ್ಯಾರಂಟಿ.
ಬುಧವಾರ ನಡೆದ ಒಂದು ತಾಲೀಮು ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಕೆನಡಾ ತಂಡವನ್ನು 5-0 ಅಂತರದಿಂದ ಬಗ್ಗು ಬಡಿದ ನಂತರ ಖುಷಿಖುಷಿಯಾಗಿದ್ದ ಮರಡೋನ ಒಂದು ಆಕಾಶವಾಣಿ ಹರಟೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗೆಲುವಿಗಾಗಿ ನಗ್ನ ಓಟ ಪ್ರಾಜೆಕ್ಟ್ ಪ್ರಕಟಿಸಿದರು.
ಅರ್ಜೆಂಟಿನಾ ಗೆಲ್ಲಲಿ ಎಂದು ನಾವೂ ಹಾರೈಸಬೇಕೆಂದಿದ್ದೆವು. ಆದರೆ ಈಗ ಹಿಂದೂಮುಂದೂ ನೋಡುವಂಥ ಪರಿಸ್ಥಿತಿ ಉಂಟಾಗಿದೆ. ಮರಡೋನ ಹೇಳಿಕೆಯಿಂದ ವಿಚಿತ್ರ ಫಜೀತಿಯಾಗಿದೆ. ಯಾಕೆಂದರೆ, ಅರ್ಜೆಂಟಿನಾ ಗೆದ್ದಿತು ಎಂದಿಟ್ಟುಕೊಳ್ಳಿ, ಆಮೇಲೆ ಮರಡೋನ ಬೆತ್ತಲೆ ಓಡಿದರು ಎಂದಿಟ್ಟುಕೊಳ್ಳಿ, ಅದನ್ನು ಕತಾರ್ ನಲ್ಲಿ ಕುಳಿತು ಹುಸೇನ್ ಸಾಹೇಬರು ಟಿವಿಯಲ್ಲಿ ನೋಡಿ ತಕ್ಷಣ ಅಲ್ಲೇ ಒಂದು ಬ್ರಷ್ ತೆಗೆದುಕೊಂಡು ನಗ್ನ ಚಿತ್ರ ಬಿಡಿಸಿದರು ಎಂದಿಟ್ಟುಕೊಳ್ಳಿ. ಮುಂದೇನಾಗುತ್ತದೆ?
ಗೆಸ್ ಮಾಡಿ. ಆ ವಿಷಯವನ್ನು ನಾವು ಚಿತ್ರ ಸಮೇತ ನಮ್ಮ ವೆಬ್ ಸೈಟಿನಲ್ಲಿ ಹಾಕ್ತೀವಿ. ಅದನ್ನು ನೋಡಿದ ಓದುಗರ ತಂಡಗಳು ತಕ್ಷಣ ಕಾಮೆಂಟ್ ವಿಭಾಗದಲ್ಲಿ ಫುಟ್ಬಾಲ್ ಆಡಲು ಶುರುವಿಟ್ಟುಕೊಳುತ್ತಾರೆ. ಇಂಥ ಸುದ್ದಿನೆಲ್ಲ ಯಾಕೆ ಹಾಕ್ತೀರಿ ದಟ್ಸ್ ಕನ್ನಡದವರೇ.. ಅಂತ ಮುಗ್ಧರು ಪ್ರಶ್ನೆ ಕೇಳ್ತಾರೆ. ಇದೆಲ್ಲ ಬೇಡವೇ ಬೇಡ. ಮನಸ್ಸಿಲ್ಲದ ಮನಸ್ಸಿನಿಂದ ಅರ್ಜೆಂಟಿನಾ ಫೈನಲ್ ತನಕ ಬಂದು ಅಲ್ಲಿ ಸೋಲೊಪ್ಪಿಕೊಳ್ಳಲಿ ಕಾಳಹಸ್ತಿ ಈಶ್ವರನೇ ಎಂದು ಬೇಡಿಕೊಳ್ಳಲೇ ಬೇಕಾಗಿದೆ.
ಅರ್ಜೆಂಟಿನಾ ತಂಡ ಫೀಫಾ ಕಪ್ ಗೆದ್ದರೆ ಮರಡೋನಾ ಬೆತ್ತಲೆ ಓದುವುದಾಗಿ ಹೇಳಿದ್ದಾರೆ. ಆದರೆ, ಗೆಲ್ಲದಿದ್ದರೆ? ಗೆಲ್ಲದಿದ್ದರೆ ಏನು ಮಾಡುತ್ತಾರೆಂದು ಅವರು ಹೇಳುವುದಿಲ್ಲ, ಫುಟ್ಬಾಲ್ ಅಭಿಮಾನಿಗಳು ಹೇಳುತ್ತಾರೆ!












Click it and Unblock the Notifications