• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾಮಿಗಳಿಗೆ ಬ್ರಹ್ಮಚರ್ಯ ಕಡ್ಡಾಯವೇನಲ್ಲ

By ಸಂದರ್ಶನ : ವಿಶ್ವಾರಾಧ್ಯ ಸತ್ಯಂಪೇಟೆ
|

ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಕೋ.ಚೆನ್ನಬಸವಪ್ಪನವರು ನಿಷ್ಠುರವಾದಿಗಳು. ಇದ್ದದ್ದನ್ನು ಇದ್ದಂತೆ ಹೇಳುವುದಕ್ಕೆ ಅವರು ಯಾವತ್ತೂ ಹಿಂದೆ ಮುಂದೆ ನೋಡುವವರಲ್ಲ. ತಾವು ಕಂಡುಂಡ ಸತ್ಯದ ಪರವಾಗಿ ಯಾವತ್ತೂ ಅವರ ವಕಾಲತ್ತು ಇದ್ದೇ ಇರುತ್ತದೆ. ವಚನಸಾಹಿತ್ಯವನ್ನು ಸರಿಯಾಗಿ ಓದಿಕೊಂಡು ಶರಣರ ನಿಜವಾದ ಸತ್ವ ಮತ್ತು ವ್ಯಕ್ತಿತ್ವಗಳನ್ನು ಅರ್ಥಮಾಡಿಕೊಂಡವರು ಅವರು. ಕರ್ನಾಟದಲ್ಲಿನ ಮಠಮಾನ್ಯಗಳು, ಸ್ವಾಮಿಗಳು, ಬ್ರಹ್ಮಚರ್ಯೆ, ಶರಣರ ಪದಗಳು ಮತ್ತು ಓಟುಗಳ ರಾಜಕೀಯಕ್ಕಾಗಿ ನಡೆಯುವ ಧಾರ್ಮಿಕ ಸಮ್ಮೇಳನಗಳ ಬಗ್ಗೆ ಅವರು ಇಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಪ್ರಶ್ನೆ :ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಕುರಿತು ತಮ್ಮ ಅಭಿಪ್ರಾಯ ?

ಕೋ.ಚೆ : ಮೂಲತಃ ಶಿವಯೋಗ ಮಂದಿರದ ಕಲ್ಪನೆಯೆ ಸರಿಯಲ್ಲ. ಏಕೆಂದರೆ ಗುರುವನ್ನು ಯಾವುದೋ ಮಠದಲ್ಲಿ ತಯಾರು ಮಾಡಲು ಸಾಧ್ಯವಿಲ್ಲ. ವಟುಗಳನ್ನು ಸಿದ್ಧ ಮಾಡುವುದೆಂದರೇನು ? ಅದೇನು ಕಲ್ಲೆ ? ಮಣ್ಣೆ ? ಅದನ್ನು ತಯಾರಿಸಲು ಹೇಗೆ ಬರುತ್ತದೆ ? ಸ್ವಾಮಿಯನ್ನು ಮಾಡುವುದಲ್ಲ, ಸ್ವಾಮಿ ತಾನೆ ಆಗಬೇಕು. ಇದು ಲಿಂಗಾಯತ ಧರ್ಮಕ್ಕೆ ತದ್ವಿರುದ್ಧವಾದ ಕ್ರಿಯೆ.

ಪ್ರಶ್ನೆ : ಹಾಗಾದರೆ ಶಿವಯೋಗ ಮಂದಿರದ ಅವಶ್ಯಕತೆ?

ಕೋ.ಚೆ : ಇದರ ಅವಶ್ಯಕತೆ ಅಥವಾ ಅನಿವಾರ್ಯತೆಯೆ ಸಮಾಜಕ್ಕೆ ಇಲ್ಲ. ಇಲ್ಲಿ ವೇದ ಆಗಮಗಳನ್ನು ಕಲಿಸುತ್ತಾರೆ. ಸಂಸ್ಕೃತ ಭಾಷೆಗೆ ಬಹು ಪ್ರಾಮುಖ್ಯತೆ ಕೊಡುತ್ತಾರೆ. ಜಂಗಮನಾಗುವುದಕ್ಕೆ ಸಂಸ್ಕೃತ ಭಾಷೆ ಅನಿವಾರ್ಯ ಎಂಬಂತೆ ಮಾಡಿದ್ದಾರೆ. ಸಂಸ್ಕೃತ ಭಾಷೆಯನ್ನು ಪಾಂಡಿತ್ಯಕ್ಕಾಗಿ ಕಲಿಯಬೇಕೇ ಹೊರತು. ಅದು ಅನಿವಾರ್ಯ ಭಾಷೆಯಲ್ಲ.

ನಾನೂ ಬಿಜಾಪುರಲ್ಲಿದ್ದಾಗ ಒಂದು ಸಲ ಶಿವಯೋಗ ಮಂದಿರಕ್ಕೆ ಹೋಗಿದ್ದೇನೆ. ನೋಡಿದ್ದೇನೆ. ಅಲ್ಲಿ ಏನೂ ಅರಿಯದ ಹುಡುಗರಿರುತ್ತಾರೆ. ಅವರಿಗೆ ಏನೂ ಗೊತ್ತಿರುವುದಿಲ್ಲ. ಅವರಿಗೆಲ್ಲ ಕಾವಿ ತೊಡಿಸಿ ಸ್ವಾಮಿಗಳನ್ನಾಗಿ ಮಾಡುತ್ತಾರೆ. ಜೊತೆಗೆ ಅವರೆಲ್ಲ ಮುಂದೆ ಕಡ್ಡಾಯವಾಗಿ ಬ್ರಹ್ಮಚರ್ಯ ಪಾಲನೆ ಮಾಡಬೇಕೆಂದು ಬೇರೆ ಹೇಳುತ್ತಾರೆ !? ಇಂಥವರನ್ನೆ ತಂದು ಮುಂದೆ ಮಠಾಧಿಪತಿಯನ್ನಾಗಿ ಮಾಡುತ್ತಾರೆ.

ಪ್ರಶ್ನೆ : ಮಠಾಧಿಪತಿ ಬ್ರಹ್ಮಚರ್ಯೆ ಪಾಲನೆ ಮಾಡಲೇಬೇಕಾ ?

ಕೋ.ಚೆ : ಇಲ್ಲ. ಬಸವಾದಿ ಶರಣರು ಎಂದಿಗೂ ವಾಸ್ತವವಾದಿಗಳು. ಅವರು ಆಲೋಚಿಸಿದ ಎಲ್ಲವೂ ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿದ್ದಾಗಿದೆ. 'ಇಂದ್ರಿಯ ನಿಗ್ರಹವ ಮಾಡಿದರೆ ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು' ಎಂದು ಹೇಳಿದ್ದು ಇದೆ ಅರ್ಥದಲ್ಲಿ. ಅಂದಿನ ಶರಣರಾರೂ ಬ್ರಹ್ಮಚರ್ಯದ ಜೀವನ ಶ್ರೇಷ್ಠ ಎಂದು ಹೇಳಲಿಲ್ಲ. ಹನ್ನೆರಡನೆಯ ಶತಮಾನದ ಬಹುತೇಕ ಶರಣರು ಮದುವೆಯಾಗಿ ಸಂಸಾರವನ್ನು ನಡೆಸಿದವರೆ ಆಗಿದ್ದಾರೆ. 'ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎಂದೆ ಹೇಳಿದ್ದಾರೆ.

ರಾಮಕೃಷ್ಣ ಪರಮಹಂಸರು ಸಂಸಾರಿಯಾಗಿಯೂ ಸನ್ಯಾಸಿಯಾಗಿದ್ದರು. ಅವರ ಶಿಷ್ಯರಾದ ವಿವೇಕಾನಂದರಿಗೂ ಕೂಡ ಅವರ ತಂದೆ ತಾಯಿಗಳು ಮಗನಿಗೆ ಮದುವೆಮಾಡಬೇಕೆಂದು ದುಂಬಾಲು ಬೀಳುತ್ತಾರೆ. ಆಗ ವಿವೇಕಾನಂದರು ಅದು ಹೇಗೋ ತಪ್ಪಿಸಿಕೊಂಡು ತಮ್ಮ ಗುರುವಾದ ರಾಮಕೃಷ್ಣ ಪರಮಹಂಸರಲ್ಲಿ ಹೋಗಿ ನನಗೆ ಮದುವೆ ಮಾಡಲು ತಂದೆ ತಾಯಿಗಳು ದುಂಬಾಲು ಬಿದ್ದಿದ್ದಾರೆ ? ನನಗೆ ಮದುವೆಯಾಗಬೇಕೆಂಬ ಆಸೆಯಿಲ್ಲ ಎಂದು ಹೇಳುತ್ತಾರೆ. ಆಗ ರಾಮಕೃಷ್ಣ ಪರಮಹಂಸರು ವಿವೇಕಾನಂದರನ್ನು ವಾರೆನೋಟದಿಂದ ನೋಡಿ 'ಮದುವೆಯಾಗು ಅದು ಒಳ್ಳೆಯದಾಗುತ್ತದೆ' ಎಂದೆ ಹೇಳುತ್ತಾರೆ. ನಾನೂ ಮದುವೆಯಾಗಿಲ್ಲವೆ ! ಒಳ್ಳೆಯ ಜೀವನಕ್ಕೆ ಮದುವೆ ಅಡ್ಡಿಯಾಗದು ಎಂದೆ ಹೇಳುತ್ತಾರೆ.

ಪ್ರಶ್ನೆ : ಹಾಗಾದರೆ ಜಂಗಮ ಅಂದರೆ?

ಕೋ.ಚೆ : ಜಂಗಮ ಅಂದರೆ ಚಲಿಸುವುದು. ಚಲಿಸುವುದು ಅಂದರೆ ನಡೆದಾಡುವ ವ್ಯಕ್ತಿಯೂ ಅಲ್ಲ. ಶರಣರ ಹಲವಾರು ವಚನಗಳಲ್ಲಿ ಬಳಕೆಯಾಗಿರುವ ಜಂಗಮ ನಂಪುಸಕಾರ್ಥದಲ್ಲಿ ಪ್ರಯೋಗವಾಗಿರುವುದೆ ಈ ಮಾತಿಗೆ ಸಾಕ್ಷಿ. ಸಮಾಜವನ್ನು ಅವರು ಜಂಗಮವೆಂದು ಕರೆದಿರುವರೆ ಹೊರತು, ಒಂದು ಜಾತಿಯನ್ನು ಜಂಗಮವೆಂದು ಕರೆದಿಲ್ಲ. ಯಾವ ಆದರ್ಶಗಳನ್ನು ಹೇಳುತ್ತಾನೋ ಅದರಂತೆ ನಡೆಯುವವನೆ ಜಂಗಮ. ಬಸವಾದಿ ಶರಣರ ಕಲ್ಪನೆಯ ಜಂಗಮವನ್ನು ಯಾವುದೋ ಕಟ್ಟಡದಲ್ಲಿ ತಯಾರು ಮಾಡುವುದಲ್ಲ. ನಿತ್ಯ ಜೀವನದ ಅನುಭವ ಪಡೆದು ಅನುಭಾವಿಯಾಗಿ ಆರೋಗ್ಯಕರ ಜೀವನ ನಡೆಸುವುದೆ ಆಗಿದೆ. ಬೀದರ ಜಿಲ್ಲೆಯ ಕೌಂಠಾ(ಬಿ) ಎಂಬಲ್ಲಿ ಈಗ ಶ್ರೀ ಸಿದ್ಧರಾಮ ಶರಣರು ಇದ್ದಾರೆ. ಅವರು ನಿಜವಾದ ಜಂಗಮರು. ಇವರನ್ನು ಯಾವುದೆ ಶಿವಯೋಗ ಮಂದಿರದಲ್ಲಿ ತಯಾರಿಸಲ್ಪಟಿಲ್ಲ. ಕರ್ನಾಟಕದ ಬಹುತೇಕ ಮಠಗಳಲ್ಲಿ ತುಂಬಿಕೊಂಡಿರುವ ಕಾವಿ ದಾರಿ ಜಂಗಮರೆಲ್ಲ ನಿತ್ಯಾನಂದ ಸ್ವಾಮಿಯ ಪಳಿಯುಳಿಕೆಗಳು ಮಾತ್ರ.

ಪ್ರಶ್ನೆ : ಶಿವಯೋಗ ಮಂದಿರಕ್ಕೆ 100 ತುಂಬಿದಾಗ ನಡೆಸಿರುವ ಸಮಾವೇಶ?

ಕೋ.ಚೆ : ಸಮಾಜದ ಜನಗಳಿಂದ ಎಪ್ಪತ್ತೈದು ಲಕ್ಷ ರೂಪಾಯಿಗಳನ್ನು ಸಂಗ್ರಹಸಿ, ಎಪ್ಪತ್ತೈದು ಜನರನ್ನೂ ಆಕರ್ಷಿಸಲಾಗದ ಸಮಾರಂಭವೆ ಜನರಿಂದ ತಿರಸ್ಕರಿಸ್ಪಟ್ಟ ಸಮಾವೇಶ ಎಂದು ಹೇಳುತ್ತದೆ. ಇದು ಬರೀ ಓಟ್ ಪಾಲಿಟಿಕ್ಸ್‌ಗಾಗಿ ಮಾಡಿದ ಚುನಾವಣೆ ಸಮಾವೇಶವೆ ಹೊರತು, ಮತ್ತೇನು ಅಲ್ಲ. ಶಿವಯೋಗ ಮಂದಿರ ಲಿಂಗಾಯತ ಸಮುದಾಯಕ್ಕೊಂದು ಕಳಂಕವೆ ಹೊರತು ಭೂಷಣವಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more