ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ತಂಪೆರೆದ ಮುತ್ತಿನ ಹನಿಗಳು

By Prasad
|
Google Oneindia Kannada News

Rain disrupts normal life in Bengaluru
ಬೆಂಗಳೂರು, ಏ. 14 : 25 ವರ್ಷಗಳಲ್ಲೇ ಅತಿ ಹೆಚ್ಚು ಚುರುಕು ಮುಟ್ಟಿಸಿದ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದ ಬೆಂಗಳೂರಿನ ಜನತೆಗೆ ಬುಧವಾರ ಸುರಿದ ಧಾರಾಕಾರ ಮಳೆ ತಂಪಿನ ಸಿಂಚನ ನೀಡಿತು. ರಸ್ತೆಯಲ್ಲಿನ ನೀರಿನ ಹರಿವಿನ ಜೊತೆಗೆ ತೊಂದರೆಗಳನ್ನೂ ಬಳುವಳಿಯಾಗಿ ನೀಡಿತು.

ಕಳೆದೆರಡು ದಿನಗಳಿಂದ ನಗರದಲ್ಲಿ ಅಲ್ಲಲ್ಲಿ ಮಳೆಯಾಗಿತ್ತಾದರೂ ಇಂದು ಸುರಿದ ಅಡ್ಡ ಮಳೆ ಬೆಂಗಳೂರಿನ ಇಡೀ ಭೂಮಿ ತೊಯ್ದು ತೊಪ್ಪೆಯಾಗಿಸಿದೆ. ಸಾಯಂಕಾಲ 4 ಗಂಟೆಗೇ ಕಪ್ಪಡರಿಸಿದ ಮೋಡಗಳು ಗುಡುಗು ಸಿಡಿಲಿನೊಂದಿಗೆ ಧಾರಾಕಾರ ವರ್ಷಧಾರೆಯನ್ನು ಸುರಿಸಿವೆ.

ನಿನ್ನೆ ರಾತ್ರಿಯೇ ಥಳಿಹೊಡೆದಿದ್ದರಿಂದ ಬೆಳಗಿನ ಜಾವ ತಣ್ಣನೆ ಗಾಳಿ ಬೀಸಿತ್ತು. ಮಧ್ಯಾಹ್ನ ಎಂದಿನಂತೆ 38 ಡಿ.ಸೆ. ಇರುವ ಬಿಸಿಲಿನಲ್ಲಿ ಚರ್ಮ ಸುಟ್ಟುಹೋದೀತೆಂಬ ಭಯದಲ್ಲಿ ಮಹಿಳಾಮಣಿಗಳು ಕೊಡೆಯೇರಿಸಿದ್ದರು. 'ಸಖತ್ ಬಿಸಿಲಿದೆ, ಸಾಯಂಕಾಲ ಮಳೆಯಾಗೇ ಆಗತ್ತೆ' ಅಂತ ಬೆಂಗಳೂರಿನಲ್ಲಿ ಅನೇಕ ವಸಂತಗಳನ್ನು ಕಳೆದಿರುವ ಹಲವರು ಮಾತಾಡಿಕೊಂಡಿದ್ದರು. ಬಲ್ಲವರ ಲೆಕ್ಕಾಚಾರದಂತೆ ಸಂಜೆ ನಾಲ್ಕೂವರೆಗೆ ಪ್ರಾರಂಭವಾದ ಮಳೆ ಆರರ ಸುಮಾರಿಗೆ ಅಬ್ಬರ ಕಡಿಮೆ ಮಾಡಿತು.

ತುಂಬಿ ಬಂದಿರುವ ಚರಂಡಿಗಳು ರಸ್ತೆ ಗುಂಡಿಗಳನ್ನು ಒಂದು ಮಾಡಿವೆ. ರಸ್ತೆ ಸಂಚಾರಿಗಳು, ಬಸ್ ಸವಾರಿಗರು, ವಾಹನ ಚಾಲಕರು ರಸ್ತೆ ದುರವಸ್ಥೆಯನ್ನು ಶಪಿಸುತ್ತ ಮನೆಯೆಡೆಗೆ ಸಾಗುತ್ತಿದ್ದಾರೆ. ಬಿಬಿಎಂಪಿ ಚುನಾವಣೆ ವೇಳೆಗೆ ಕೆಲ ರಸ್ತೆಗಳು ಅಂದ ಕಂಡಿದ್ದರೂ ಪಕ್ಕದ ಚರಂಡಿಗಳು ನಿರ್ಲಕ್ಷಕ್ಕೆ ಗುರಿಯಾಗಿದ್ದವು. ಅದರ ಪರಿಣಾಮ ಜನ ಈಗ ನೋಡುತ್ತಿದ್ದಾರೆ.

ಅಂಬೇಡ್ಕರ್ ಜಯಂತಿ ರದ್ದು : ಇಂದು ಸಂವಿಧಾನ ನಿರ್ಮಾತೃ ಡಾ. ಬಿಆರ್ ಅಂಬೇಡ್ಕರ್ ಜಯಂತಿಯಾದ್ದರಿಂದ ವಿಧಾನಸೌಧದ ಜಗಲಿಯ ಮೇಲೆ ಸೇರಿದ್ದ ಜನರೆಲ್ಲ ಸಮಾರಂಭ ರದ್ದುಗೊಳಿಸಿ, ಪೆಂಡಾಲು, ಕೆಂಪು ನೆಲಹಾಸು, ಬಣ್ಣದ ಕುರ್ಚಿಗಳನ್ನು ಇದ್ದಲ್ಲಿಯೇ ಬಿಟ್ಟು ಮನೆ ದಾರಿ ಹಿಡಿದಿದ್ದಾರೆ. ಮೆಟ್ರೋ ನಿರ್ಮಾಣಕ್ಕಾಗಿ ವಿಧಾನಸೌಧದ ಮುಂದೆ ವಿರಾಜಮಾನರಾಗಿರುವ ಅಂಬೇಡ್ಕರ್ ಮೂರ್ತಿಯನ್ನು ಸ್ಥಳಾಂತರಿಸಲೇಬೇಕಾಗುತ್ತದೆಂದು ಯಡಿಯೂರಪ್ಪನವರು ನೀಡಿದ್ದ ಹೇಳಿಕೆಯಿಂದ ಕೆಂಡಕಾರುತ್ತಿದ್ದ ಜನರೆಲ್ಲ ಮಳೆಸುರಿಯುತ್ತಿದ್ದಂತೆ ತಣ್ಣಗಾಗಿದ್ದಾರೆ. ನಾಳೆ ಮತ್ತೆ ಎಂದಿನಂತೆ ವಿವಾದದ ಕಾವು ಏರಿದರೂ ಆಶ್ಚರ್ಯವಿಲ್ಲ.

ಸಂಜಯ ನಗರ, ಭೂಪಸಂದ್ರದಲ್ಲಿ ಮಳೆಯಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಯಶವಂತಪುರದಲ್ಲಿ ಆಲಿಕಲ್ಲುಗಳು ಉದುರಿ ಜನರಲ್ಲಿ ಸಂತಸ ತಂದಿವೆ. ಎರಡು ಮರಗಳೂ ಧರಾಶಾಯಿಯಾಗಿವೆ. ಯಶವಂತಪುರದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಶಿವಾಜಿನಗರ, ಪುಟ್ಟೇನಹಳ್ಳಿ ಸೇರಿದಂತೆ ಅನೇಕ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ್ದರಿಂದ ವಾಸಿಗಳು ಪರದಾಡುವಂತಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದಿರುವ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಇಂತಹ ಅವಘಡ ಸಂಭವಿಸದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದೆ.

ನೆತ್ತಿ ಸುಡುತ್ತಿದ್ದಾಗ 38 ಡಿಗ್ರಿ ಇದ್ದ ಗರಿಷ್ಠ ತಾಪಮಾನ ಸಾಯಂಕಾಲವಾಗುತ್ತಿದ್ದಂತೆ 34 ಡಿಗ್ರಿಗೆ ಇಳಿದಿದೆ. ರಾತ್ರಿ ಹವಾಮಾನ ಇನ್ನಷ್ಟು ತಂಪಾಗಲಿದ್ದು ಕನಿಷ್ಠ ತಾಪಮಾನ 24 ಡಿ.ಸೆ. ಇಳಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಒಟ್ಟಿನಲ್ಲಿ ಸುರಕ್ಷಿತವಾಗಿ ಮನೆ ಸೇರಿಕೊಂಡ ಮೇಲೆ ಬಟ್ಟೆ ಬದಲಾಯಿಸಿ ಮದುವೆಯಾಗಿದ್ದರೆ ಹೆಂಡತಿ ಮಾಡಿಕೊಟ್ಟ ಗರಿಗರಿ ಪಕೋಡ, ಕಾಫಿ ಸವಿಯಲು ಸಕಾಲ.

ರಾಜ್ಯದ ಇತರೆಡೆಯಲ್ಲಿಯೂ ಮಳೆ : ಮೈಸೂರು, ಮಂಡ್ಯ, ಹಾಸನದಲ್ಲಿಯೂ ಇಂದು ಸಂಜೆ ಧಾರಾಕಾರ ಮಳೆ ಸುರಿದಿದೆ. ಹವಾಮಾನ ತಜ್ಞರು ಹೇಳುವ ಪ್ರಕಾರ, ಅಕಾಲಿಕ ಮಳೆಯ ಆರ್ಭಟ ಇನ್ನೆರಡು ದಿನ ಮುಂದುವರಿಯಲಿದೆ. ಬೆಂಗಳೂರಿನ ಯಲಹಂಕದಲ್ಲಿ ಮೂರು ಸೆಂ.ಮೀ.ಮಳೆಯಾದರೆ, ನಗರದಲ್ಲಿ 1 ಸೆಂ.ಮೀ. ಮಳೆ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X