ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಡದ ಸಾಲವನ್ನು ತೀರಿಸುವ ಹೊರೆ

By * ಶಾಮಿ
|
Google Oneindia Kannada News

Bengaloreans have to pay by their nose!
ಬೆಂಗಳೂರು, ಏ. 8 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಅನಿವಾರ್ಯ. ಕಟ್ಟಿಕೊಳ್ಳುವ ಹಾಗಿಲ್ಲ, ಬಿಟ್ಟುಕೊಡುವ ಹಾಗಿಲ್ಲ. ಚುನಾವಣಾ ಆಯೋಗ ಹೇಳುವುದೇ ಬೇರೆ, ರಾಜಕೀಯ ಪಕ್ಷಗಳು ಮಾಡುವುದೇ ಬೇರೆ. ಮತದಾರರ ನಿರೀಕ್ಷೆಗಳೇ ಬೇರೆ ಬೇರೆ. ಇಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲ. ಈ ಅಸಂಬದ್ಧಗಳನ್ನು ಮಡಿಲಲ್ಲಿ ಕಟ್ಟಿಕೊಂಡ ಬಿಬಿಎಂಪಿ ಚುನಾವಣೆ ಈಗ ಇತಿಹಾಸದ ಪುಟ ಸೇರಿದೆ.

ಕಳೆದ ಒಂದು ತಿಂಗಳ ಕಾಲ ಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ, ಇಂಟರ್ನೆಟ್ಟಿನಲ್ಲಿ, ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಅಬ್ಬರದ ಪ್ರಚಾರ. ಎಲ್ಲಿ ನೋಡಿದರೂ ಅದೇ ಸುದ್ದಿ, ಅದೇ ಮಾತು, ಅದೇ ಹಳಹಳಿಕೆಗಳು. ಎಲ್ಲೇ ಕಾಲಿಟ್ಟರೂ ಅಲ್ಲಿ ನಿಮ್ಮ ಕೈಗೊಂದು ಕರಪತ್ರ.

ಅಂತೂ ಇಂತೂ ಚುನಾವಣೆ ಪ್ರಕ್ರಿಯೆಗಳು ಮುಗಿದು ನಮ್ಮ ಬಿಬಿಎಂಪಿಗೆ ಹೊಸ ಸದಸ್ಯರನ್ನು ಕಳಿಸಿಕೊಟ್ಟದ್ದಾಯಿತು. ಅಬ್ಬರ, ಗಲಾಟೆಗಳೆಲ್ಲವು ಸ್ಥಬ್ಧವಾಗಿ ಬೆಂಗಳೂರು ನಿಶ್ಯಬ್ಧವಾಯಿತು. ಹಾಗೆ ನೋಡಿದರೆ ಇದು ನಿಶ್ಯಬ್ಧವೇನಲ್ಲ. ಮಾತುಗಳು ಮುಸುಕುಹೊದ್ದು ಮಲಗಿರುವ ಸಮಯ. ಚುನಾವಣೆಯಲ್ಲಿ ಹೆಂಡ, ಬೆಳ್ಳಿನಾಣ್ಯಗಳು, ನಗದು ಬಹುಮಾನ, ಕುಕ್ಕರು, ಸೀರೆ ಪಂಚೆಗಳ ಉಡುಗೊರೆಗಳು ಉರುಳಾಡಿಹೋದವು. ಬೇಕಾದಷ್ಟು ಹಣ, ಚಿನ್ನ ಖರ್ಚಾಯಿತು. ಇದಕ್ಕೆಲ್ಲ ಯಾರು ದುಡ್ಡು ಕೊಡುತ್ತಾರೆ, ಹಣ ಎಲ್ಲಿಂದ ಬರುತ್ತದೆ, ಈ ಖರ್ಚುವೆಚ್ಚಗಳನ್ನು ತೂಗಿಸಲು ಅಭ್ಯರ್ಥಿಗಳು ಪಡುವ ಬವಣೆಗಳೆಷ್ಟು? ಅವರು ಈ ಹಣವನ್ನು ಮರಳಿ ಪಡೆಯುವ ಬಗೆ ಹೇಗೆ? ಈ ಪ್ರಶ್ನೆಗಳು ಯೋಚನಾರ್ಹವಾದರೆ ಉತ್ತರಗಳು ಚಿಂತಾಕ್ರಾಂತವಾಗಿವೆ.

ಒಂದು ಅಂದಾಜಿನ ಪ್ರಕಾರ ಕಳೆದ ಒಂದು ತಿಂಗಳ ಅವಧಿಯಲ್ಲಿ ಗೆದ್ದೇಗೆಲ್ಲಬೇಕೆಂದು ಪಣತೊಟ್ಟು ಜನಪ್ರಿಯ ಚುನಾವಣಾ ಚಿನ್ಹೆಗಳನ್ನು ಪಡೆದ ಪ್ರಮುಖ ಅಭ್ಯರ್ಥಿಗಳು ತಲಾ 1.8 ಕೋಟಿ ರೂ.ಗಳಂತೆ ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ. ಒಂದು ವಾರ್ಡಿನಲ್ಲಿ ಮೂರು ಅಭ್ಯರ್ಥಿಗಳ ಸರಾಸರಿ ತಲಾ 1.8 ಕೋಟಿ ರೂ. ವೆಚ್ಚವನ್ನು ಗುಣಿಸಿದರೆ ಒಟ್ಟು ಖರ್ಚು ವಾರ್ಡಿಗೆ 5.4 ಕೋಟಿ ರೂ.ಗಳಾಗುತ್ತವೆ. ಇದನ್ನು ಒಟ್ಟು ವಾರ್ಡ್ 198ರಿಂದ ಗುಣಿಸಿದರೆ 1069.2 ಕೋಟಿ ರೂ.ಗಳಿಗೆ ಬಂದು ನಿಲ್ಲುತ್ತದೆ. ಈ ಲೆಕ್ಕದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದವರ ವೆಚ್ಚಗಳನ್ನು ಸೇರಿಸುವುದು ಬೇಡ.

198 ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಒಟ್ಟು 594 ಪ್ರಮುಖ ಅಭ್ಯರ್ಥಿಗಳಲ್ಲಿ 396 ಮಂದಿ ಸೋತಿದ್ದಾರೆ. ಅಂದರೆ, ಸೋತವರೆಲ್ಲರು ಸೇರಿ ವೆಚ್ಚ ಮಾಡಿದ ಒಟ್ಟು ಹಣ 712.8 ಕೋಟಿ ರೂಪಾಯಿ. ಇದು ನೀರಿನಲ್ಲಿ ಮಾಡಿದ ಹೋಮವಾಗಿದೆ. ಆದರೆ, ಗೆಲವು ಸಾಧಿಸಿದ 198 ಅಭ್ಯರ್ಥಿಗಳು ಎಲ್ಲಾ ಸೇರಿ ಮಾಡಿದ ಒಟ್ಟು ಖರ್ಚು 356.4 ಕೋಟಿ ರೂಪಾಯಿಗಳು. ಈ ಮೊತ್ತವನ್ನು ಬಂಡವಾಳವಾಗಿ ಹೂಡಿ 198 ಅದೃಷ್ಟವಂತರು ಜನರಿಂದ, ಜನರಿಗಾಗಿ ಆರಿಸಿ ಬಂದಿದ್ದಾರೆ. ಮುಂದೇನು?

ಈ ಹಣವನ್ನು ಕಾರ್ಪೋರೇಟರುಗಳಿಗೆ ಹಿಂತಿರುಗಿಸುವ ಜವಾಬ್ದಾರಿ ಈಗ ನಮ್ಮ ತಲೆಮೇಲಿದೆ. ಬೆಂಗಳೂರು ನಾಗರಿಕರ ಬೆನ್ನು ಹತ್ತಿದೆ. ಗೆದ್ದು ಬಿಬಿಎಂಪಿ ಗದ್ದುಗೆಗೆ ಬಂದ ನಗರಸಭಾ ಸದಸ್ಯರು ನಾಗರೀಕರಿಂದ ಪೈಸಾ ವಸೂಲ್ ಮಾಡಲು ಸಹಜವಾಗಿಯೇ ಸಿದ್ಧರಾಗಿದ್ದಾರೆ. ಈ ವಸೂಲಿ ಚಳವಳಿ ಸದಸ್ಯರು ಅಧಿಕಾರ ವಹಿಸಿಕೊಂಡ ಕ್ಷಣದಿಂದ ಆರಂಭವಾಗುತ್ತದೆ.

ಆರ್ಥಿಕ ಬಿಕ್ಕಟ್ಟು, ನಿರುದ್ಯೋಗದಿಂದ ನರಳುತ್ತಿರುವ ಬೆಂಗಳೂರಿಗರಿಗೆ ಇದು ಇನ್ನಷ್ಟು ಹೊರೆಯಾಗಲಿದೆ. ಬಿಬಿಎಂಪಿಯಲ್ಲಿ ಅರ್ಜಿಗಳು, ಕಡತಗಳು ಮೂವ್ ಆಗಬೇಕಾದರೆ ನಾವೆಲ್ಲ ನಾಗರಿಕರು ಒಗ್ಗಟ್ಟಿನಿಂದ 356.4 ಕೋಟಿ ರೂ.ಗಳನ್ನು ಕಕ್ಕಲೇಬೇಕು. ಇಷ್ಟು ಕೊಟ್ಟ ಮಾತ್ರಕ್ಕೆ ಕಾರ್ಪೋರೇಟರುಗಳಿಗೆ ನಾವೇನು ಉಪಕಾರ ಮಾಡಿದಂತೆ ಆಗುವುದಿಲ್ಲ. ಏಕೆಂದರೆ, ಈ ಬಾಬತ್ತುಗಳ ಲೆಕ್ಕಾಚಾರದಲ್ಲಿ ಕೇವಲ ಅಸಲಿನ ಬಗ್ಗೆ ಕುರಿತು ಲೆಕ್ಕಹಾಕಲಾಗಿದೆಯೇ ಹೊರತು ಬಂಡವಾಳಕ್ಕೆ ಬಡ್ಡಿ ಮತ್ತು ಅದರಿಂದ ಬರಬೇಕಾದ ಲಾಭಾಂಶಗಳನ್ನು ಪರಿಗಣಿಸಲಾಗಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X