ವಿಚಿತ್ರ ವಿಭಿನ್ನ ವಿಶಿಷ್ಟ ಹಕ್ಕಿಪಿಕ್ಕಿ ಜನಾಂಗ

Hakkipikki community
ಭಾರತದಲ್ಲಿ ವೈವಿಧ್ಯಮಯ ಬದುಕನ್ನು ಒಳಗೊಂಡ ಹಲವಾರು ಧರ್ಮ ಜನಾಂಗಗಳೂ ಬುಡಕಟ್ಟುಗಳು ಸಹಸ್ರಾರು ಸಂಖ್ಯೆಯಲಿ ವಾಸಿಸುತ್ತಿದ್ದಾರೆ. ಸಂಪ್ರದಾಯ, ಆಚರಣೆಗಳೂ, ವೇಷಭೂಷಣಗಳೂ, ಸಾಮಾಜಿಕ ವಿನ್ಯಾಸ ಪ್ರತಿಯೊಂದರಲ್ಲೂ ವಿಭಿನ್ನ ವಿಶಿಷ್ಟವೂ ಆದ ಸಮೂದಾಯಗಳು ನಮ್ಮ ಭೂಖಂಡದಲ್ಲಿವೆ.

ರಾಮನಗರ ಜಿಲ್ಲೆ ಭದ್ರಾಪುರ ಮತ್ತಿತರೆಡೆಗಳಲಿ ವಾಸಿಸುತ್ತಿರುವ ಅಲೆಮಾರಿ ಬುಡಕಟ್ಟುಗಳಾದ ಹಕ್ಕಿಪಿಕ್ಕಿ ಜನಾಂಗದಲ್ಲಿ ದ್ವಿಪತ್ನಿತ್ವ, ಬಾಲ್ಯವಿವಾಹ, ವಧುದಕ್ಷಿಣೆಯೊಂದಿಗೆ ಗುಂಡು ತುಂಡಿನ ನೈವೇದ್ಯ ಕೂಡ ಚಾಲ್ತಿಯಲ್ಲಿದೆ. ಜತೆಗೆ ವಿಚಿತ್ರ ನಾಮಾಂಕಿತಗಳನ್ನಿಟ್ಟುಕೊಂಡಿರುವ ಹಕ್ಕಿಪಿಕ್ಕಿಗಳು ಅನಕ್ಷರಸ್ಥರಾದರು ದೇಶ ವಿದೇಶಗಳಲ್ಲಿ ವ್ಯಾಪಾರಮಾಡಿ ಬದುಕಿನಬಂಡಿ ತಳ್ಳುತ್ತಿದ್ದಾರೆ.

ಹಿಂದಿನಿಂದಲೂ ಬೇಟೆಯಾಡುವುದನ್ನೇ ಅವಲಂಬಿಸಿದ್ದ ಬುಡಕಟ್ಟುಗಳಾದ ಹಕ್ಕಿಪಿಕ್ಕಿ ಜನಾಂಗದವರು ಈಗ ವ್ಯಾಪಾರ ಮಾಡಿಕೊಂಡು ಊರೂರು ಸುತ್ತುತ್ತಾರೆ. ಇವರ ಆಚರಣೆ ಸಂಪ್ರದಾಯಗಳು ಹಿಂದಿನಿಂದಲೂ ವಿಭಿನ್ನ ವಿಚಿತ್ರ ಎನಿಸಿದರೂ ಇಂದಿಗೂ ನಡೆದುಕೊಂಡು ಬರುತ್ತಿವೆ. ಹಕ್ಕಿಪಿಕ್ಕಿ ಜನಾಂಗದಲ್ಲಿ ಮೊದಲು 15 ವರ್ಷದ ಹುಡುಗ ಮತ್ತು 12 ವರ್ಷದ ಹುಡುಗಿಗೆ ವಿವಾಹ ಮಾಡುತ್ತಿದ್ದರು. ಕಾಲ ಮುಂದುವರೆದಂತೆ ಈಗ 18 ವರ್ಷ ಹುಡುಗನಿಗೆ 15 ವರ್ಷ ಹುಡುಗಿಗೆ ತುಂಬಿದ ತಕ್ಷಣವೇ ಮಂಗಳ ಸೂತ್ರ ಕೊರಳಿಗೆ ಬೀಳುತ್ತದೆ. ಇನ್ನೊಂದು ವಿಶೇಷವೆಂದರೆ ಸಾಮಾನ್ಯವಾಗಿ ನೂರಕ್ಕೆ ತೊಂಬತ್ತರಷ್ಟು ಮಂದಿ ಬಹುಪತ್ನಿತ್ವವನ್ನು ಹೊಂದಿರುತ್ತಾರೆ.

ಒಬ್ಬರು ಮನೆಗೆಲಸಕ್ಕಾದರೆ ಮತ್ತೊಬ್ಬರು ವ್ಯಾಪಾರ ಮಾಡಲಿಕ್ಕೆ ತೆರಳುತ್ತಾರೆ. ಆದ್ದರಿಂದ ಇಬ್ಬರು ಹೆಂಡಿರ ಮುದ್ದಿನ ಗಂಡಂದಿರೇ ಈ ಹಕ್ಕಿಪಿಕ್ಕಿಗಳಲ್ಲಿ ಹೆಚ್ಚು. ಇವರಲ್ಲಿ ವರದಕ್ಷಿಣೆಯ ಬದಲಾಗಿ ವಧುದಕ್ಷಿಣೆ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಿಂದೆಲ್ಲಾ 2 ನರಿ, 2 ಕೀರ, 4 ರಣಹದ್ದುಗಳನ್ನ ವಧುದಕ್ಷಿಣೆಯಾಗಿ ನೀಡಿ ತೆರೆಕೊಡುತ್ತಿದ್ದರು. ಕಾಲಬದಲಾದಂತೆ ಈಗ 20 ಸಾವಿರ ವಧುದಕ್ಷಿಣೆ 3 ಕ್ವಿಂಟಾಲ್ ಅಕ್ಕಿ, ಸೇರುಗಟ್ಟಲೇ ತುಪ್ಪ, ಪಿಂಡಿಗಟ್ಟಲೇ ಬೆಲ್ಲ, ಕೋಳಿ, ಕುರಿ, ಮೇಕೆ ಮತ್ತು ಹೆಣ್ಣಿನ ಸಂಬಂಧಿಕರಿಗೆಲ್ಲ ಅರಿಶಿಣ ಕುಂಕುಮ ರವಿಕೆ ಸೀರೆ ಬೆಡ್‌ಶೀಟ್‌ಗಳನ್ನ ನೀಡುತ್ತಾರೆ. ಹಕ್ಕಿಪಿಕ್ಕಿಯವರ ಮದುವೆಗಳಲ್ಲಿ ಗುಂಡಿನ ಸೇವನೆಯೆ ಪ್ರಮುಖವಾಗಿರುತ್ತದೆ. ಆದ್ದರಿಂದ ತರಾವರಿಯ ಮದ್ಯಗಳನ್ನು ಮದುವೆಗೆ ಆಗಮಿಸುವ ಬಂಧುಗಳಿಗೆ ನೀಡಿ ಅವರ ಮತ್ತೇರಿಸುವುದು ಇವರಲ್ಲಿ ಹಿಂದಿನಿಂದಲೂ ನಡೆದುಕೊಂಡುಬಂದಿದೆ ಎಂದು ಸ್ಥಳೀಯ ಗ್ರಾ.ಪಂ.ಸದಸ್ಯೆ ಜಲ್ಲಿಯಮ್ಮ ಜಪಾನ್ ಹೇಳುತ್ತಾರೆ.

ಡಾಕ್ಟರ್, ಕೋರ್ಟ್, ಅಪರೂಪ್, ಬಿಟಿಎಸ್, ಹೋಟೆಲ್, ಕಾಫಿ, ಸೈಕಲ್, ಜಪಾನ್, ಬ್ರಿಟೀಷ್, ಮೈಸೂರ್ ಪಾಕ್, ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, ರಾಜೇಶ್‌ಖನ್ನಾ, ಹೇಮಾಮಾಲಿನಿ, ಇವೆಲ್ಲವೂ ಇವರುಗಳ ವಿಚಿತ್ರ ನಾಮಾಂಕಿತಗಳು. ಕೇಳುವುದಕ್ಕೆ ಹೇಳುವುದಕ್ಕೆ ಇವರು ಹೆಸರುಗಳು ವಿಚಿತ್ರವಾಗಿದ್ದರೂ ಪಡಿತರಚೀಟಿ, ಮತದಾರರಪಟ್ಟಿ, ಹಕ್ಕುಪತ್ರಗಳೆಲ್ಲ ಈ ಹೆಸರುಗಳೇ ರಾರಾಜಿಸುತ್ತಿವೆ.

ಹಿಂದಿನಿಂದಲೂ ಅಷ್ಟೇನು ನಾಗರೀಕತೆ ಹೊಂದಿರದ ಈ ಸಮುದಾಯದವರು ಮಕ್ಕಳು ಎಲ್ಲಿ ಜನಿಸುತ್ತವೋ ಆ ಸ್ಥಳದ ಹೆಸರು ಮತ್ತು ಊರು, ವಸ್ತು, ದಿನಬಳಕೆ ವಸ್ತುಗಳ ಹೆಸರುಗಳನ್ನೇ ಇವರ ನಾಮಾಂಕಿತವಾಗಿಸಿಕೊಂಡಿದ್ದಾರೆ. ಅಲೆಮಾರಿಗಳಾಗಿರುವ ಇವರು ಮಕ್ಕಳು ಹುಟ್ಟಿದಾಕ್ಷಣ ಮನಸ್ಸಿಗೆ ತೋಚಿದ ಹೆಸರುಗಳನ್ನೇ ನಾಮಕರಣ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಗರ ಪ್ರದೇಶಗಳಿಗೆ ವ್ಯಾಪಾರಕ್ಕೆ ಹೋದಾಗಿನಿಂದ ಈ ಸಮುದಾಯ ಚಲನಚಿತ್ರಗಳಲ್ಲಿ ಬರುವ ನಾಯಕ, ನಾಯಕಿಯರ ಹೆಸರುಗಳನ್ನು ನಾಮಕರಣ ಮಾಡುವುದನ್ನು ಇತ್ತೀಚಿಗೆ ರೂಡಿಸಿಕೊಂಡಿದ್ದಾರೆ.

ಪೂರ್ವಿಕರ ಕಾಲದಿಂದಲೂ ಕಾಡಿನಲ್ಲೇ ಆಶ್ರಯ ಪಡೆದುಕೊಂಡಿದ್ದ ಈ ಜನಾಂಗ ಹಕ್ಕಿ ಪಕ್ಷಿಗಳನ್ನು ಬೇಡೆಯಾಡಿ ಗೆಡ್ಡೆಗೆಣಸು ತಿಂದು ಜೀವನ ಮಾಡುತ್ತಿದ್ದರಿಂದ ಹಕ್ಕಿಪಿಕ್ಕಿ ಜನಾಂಗವೆಂದೇ ಕರೆಯುತ್ತಾರೆ. ಈ ಸಮುದಾಯ ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತಾ ವ್ಯಾಪಾರ ಮಾಡುತ್ತಾ ಅಲೆಮಾರಿಗಳಾಗೇ ಬದುಕು ಸಾಗಿಸುತ್ತಿದ್ದಾರೆ. ಈ ಸಮುದಾಯದಲ್ಲಿ ಸಾಮಾನ್ಯವಾಗಿ ಶೇಕಡಾ 90ರಷ್ಟು ಮಂದಿ ಅನಕ್ಷರಸ್ಥರಾಗಿದ್ದಾರೆ. ಆದರೆ ಅಲೆಮಾರಿಗಳಾಗಿರುವುದರಿಂದ ಎಲ್ಲಾ ಭಾಷೆಗಳನ್ನ ಸುಲಲಿತವಾಗಿ ಮಾತನಾಡುತ್ತಾರೆ. ಅನಕ್ಷರಸ್ಥರಾಗಿದ್ದರೂ ಇವರು ಹೊರರಾಜ್ಯ ಮತ್ತು ಹೊರದೇಶಗಳಿಲ್ಲಿ ವ್ಯಾಪಾರ ವ್ಯವಹಾರ ಮಾಡಿದ ಅನುಭವವನ್ನು ಹೊಂದಿದ್ದಾರೆ.

12 ಭಾಷೆಗಳ ಮಿಶ್ರಣವೇ ಇವರ ಹಕ್ಕಿ ಪಿಕ್ಕಿ ಜನಾಂಗದ ಭಾಷೆಯಾಗಿದೆ. ಆದ್ದರಿಂದ ಈ ಸಮುದಾಯದವರನ್ನ ಹೊರತು ಪಡಿಸಿ ಬೇರೆಯವರಿಗೆ ಇವರ ಭಾಷೆ ಅರ್ಥವಾಗುವುದಿಲ್ಲ ಮತ್ತು ಇವರ ಭಾಷೆಗೆ ಲಿಪಿಯೂ ಇಲ್ಲ. ಯಾವುದೇ ಹಬ್ಬ ಹರಿದಿನ ಶುಭಕಾರ್ಯಗಳಲ್ಲಿ ಹೆಣ್ಣುಗಂಡು ಬೇಧವಿಲ್ಲದೇ ಹಾಡುತ್ತಾ ಕುಣಿಯುತ್ತಾ ಸಂಭ್ರಮಿಸುತ್ತಾರೆ. ಇವರ ವಿಚಿತ್ರ ನಾಮಾಂಕಿತಗಳನ್ನ ನೋಡಿ ಕೆಲವೊಮ್ಮೆ ಸರ್ಕಾರಿ ಅಧಿಕಾರಿಗಳೇ ತಬ್ಬಿಬ್ಬಾಗಿದ್ದಾರೆ. ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿದ್ದರೂ ವಿಚಿತ್ರ ಆಚರಣೆಗಳನ್ನ ಮುಂದುವರೆಸಿಕೊಂಡು ಬಂದಿರುವ ಈ ಅಲೆಮಾರಿ ಸಮುದಾಯ ನಾಗರೀಕ ಸಮಾಜಕ್ಕೆ ಹತ್ತಿರವಾಗಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+