• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೌಡಿ ಅಭ್ಯರ್ಥಿಗಳಿಗೆ ಕುಮ್ಮಿ ಸಮರ್ಥನೆ

By * ಮೃತ್ಯುಂಜಯ ಕಲ್ಮಠ
|
ಕ್ರಿಮಿನಲ್ ಗಳಿಗೆ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಿರುವುದರಲ್ಲಿ ತಪ್ಪೇನಿದೆ ಹೇಳುವ ಮೂಲಕ ಬನಶಂಕರಿ (ವಾರ್ಡ್ 180) ನಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿರುವ ದಿವಾನ್ ಅಲಿ ಅವರನ್ನು ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ, ಟಿಪ್ಪಣಿ, ಆಕ್ರೋಶ ವ್ಯಕ್ತವಾಗಿದೆ.

ಭಾರತದ ರಾಜಕೀಯ ಇತಿಹಾಸ ಅವಲೋಕಿಸಿದಾಗ ಕ್ರಿಮಿನಲ್ ಗಳು ವಿಧಾನಸಭೆ, ಲೋಕಸಭೆಯನ್ನೂ ಹೊಕ್ಕಿರುವ ಅನೇಕ ಉದಾಹರಣೆಗಳು ಕಣ್ಮುಂದಿವೆ. ಆದರೆ, ಉತ್ತರ ಭಾರತದ ( ಬಿಹಾರ) ರಾಜಕೀಯದಲ್ಲಿ ಇದು ಸಹಜ. ಅದು ಅಲ್ಲಿಯ ಜನರ ಕರ್ಮ ಕೂಡ. ಆದರೆ, ಕರ್ನಾಟಕದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಜನನಾಯಕರು ವಿರಳ. ಕನ್ನಡಿಗರು ಅಂತಹ ವ್ಯಕ್ತಿಗಳಿಗೆ ಬೆಂಬಲಿಸುವುದು ಸಹ ಕಡಿಮೆ. ಆದರೆ, ಬಿಬಿಎಂಪಿ ಚುನಾವಣೆ ಬೆಂಗಳೂರನ್ನು ಬಿಹಾರ ಮಾಡಲು ಹೊರಟಿರುವ ಬೆಳವಣಿಗೆಗಳು ನಾಗರೀಕರನ್ನು ದಂಗು ಬಡಿಸಿವೆ.

ಬಿಬಿಎಂಪಿ ಚುನಾವಣೆಯಲ್ಲಿ ಹೇಗಾದರೂ ಮಾಡಿ ಪಕ್ಷವನ್ನು ಗೆಲ್ಲಿಸಬೇಕು. ಇದಕ್ಕೆ ಕ್ರಿಮಿನಲ್ ಹಿನ್ನೆಲೆ ಉಳ್ಳವನಾದರೂ ಸರಿ, ಸರಣಿ ಹಂತಕನಾದರೂ ಸರಿ. ಅವನಿಗೆ ಜನಪ್ರಿಯತೆ ಇದೆಯೇ ? ಆತನ ಹಿಂದೆ ನಾಲ್ಕಾರು ಪುಂಡರ ಗುಂಪಿದೆಯೇ ? ಜನಸಾಮಾನ್ಯರಿಗೆ ಆತನಲ್ಲಿ ಭಯಭಕ್ತಿ ಇದೆಯೇ ? ಇದೆಲ್ಲಕ್ಕೂ ಮಿಗಿಲಾಗಿ ಅಲ್ಪಸಂಖ್ಯಾತ ಧರ್ಮಕ್ಕೆ ಸೇರಿದವನಾಗಿದ್ದರಂತೂ ಆತನಿಗೆ ರಾಜಮರ್ಯಾದೆ! ಇದರ ಪರಿಣಾಮವೇ ಬನಶಂಕರಿಯಲ್ಲಿ ತೆನೆ ಹೊತ್ತ ಗುರುತಿನ ಮೇಲೆ ಸ್ಪರ್ಧಿಸಿರುವ ಮೊಹ್ಮದ್ ಅಲಿ ಅಲಿಯಾಸ್ ದಿವಾನ್ ಅಲಿ. ಜೆಡಿಎಸ್ ಅಭ್ಯರ್ಥಿ ಅಲಿಯ ಕಥಾನಕವನ್ನು ಕೆದಗುತ್ತಾ ಹೋದರೆ, ಇಡೀ ಬೆಂಗಳೂರೇ ಬೆಚ್ಚಿ ಬೀಳುವಂತ ಪಾತಕಗಳನ್ನು ನಡೆಸಿರುವಂತಹ ನಟೋರಿಯಸ್ ರೌಡಿ ಈತ.

ದಿವಾನ್ ಅಲಿ ಮೇಲೆ ಕೊಲೆ, ಅರ್ಧ ಕೊಲೆ, ಕೊಲೆಗೆ ಯತ್ನ, ಮಾರಕಾಸ್ತ್ರಗಳಿಂದ ಹಲ್ಲೆ, ಹಪ್ತಾ ವಶೀಲಿ, ಅಪಹರಣ ಪ್ರಕರಣಗಳು ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಯಲ್ಲಿ ಈತನ ವಿರುದ್ಧ 15 ಪ್ರಕರಣ ದಾಖಲಾಗಿವೆ. ಅದರಲ್ಲಿ 11 ಕೇಸ್ ಗಳಲ್ಲಿ ಖುಲಾಸೆಗೊಂಡಿದ್ದು, 4 ಪ್ರಕರಣಗಳಲ್ಲಿ ದಿವಾನ್ ಅಲಿ ಪೊಲೀಸರಿಗೆ ಬೇಕಿರುವ ಅಸಾಮಿ. ಪೆರೋಲ್ ಮೂಲಕ ಜೈಲಿನಿಂದ ಹೊರಬಂದ ಈ ವ್ಯಕ್ತಿ, ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿ, ಬನಶಂಕರಿಯಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದಾನೆ. ಆದರೆ, ಗಟ್ಟಿ ಮನಸ್ಸು ಮಾಡಿದ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ, ನೀನು ರೌಡಿ ಶೀಟರ್ ನಿನಗೆ ಟಿಕೆಟ್ ಕೊಟ್ಟರೆ ಪಕ್ಷದ ಬಗ್ಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಮುಖಕ್ಕೆ ಹೊಡೆದಂತೆ ಮಾತಾಡಿ ಹೊರಹಾಕಿದ್ದಾರೆ.

ನಂತರ ಅಲಿ ಮೆಟ್ಟಿಲು ತುಳಿದಿದ್ದು ಜೆಡಿಎಸ್ ಕಚೇರಿಗೆ, ದಿವಾನ್ ಅಲಿ ಎಂಬ ಹೆಸರೇ ಸಾಕಿತ್ತು ಜೆಡಿಎಸ್ ನಾಯಕರಿಗೆ, ಹಿಂದೆ ಮುಂದೆ ನೋಡದೆ, ಟಿಕೆಟ್ ನೀಡಿ ಬನಶಂಕರಿಯಿಂದ ಗೆದ್ದು ಬಂದು ಜೆಡಿಎಸ್ ಮಾನ ಕಾಪಾಡು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹರಸಿ ಹಾರೈಸಿದ್ದಾರೆ. ಹಲವಾರು ವರ್ಷಗಳ ಕಾಲ ಜನರನ್ನು ಕಾಡಿದ ರೌಡಿಯೊಬ್ಬನಿಗೆ ಮತಹಾಕಬೇಕೇ ಎನ್ನುವುದು ಅಲ್ಲಿನ ಬನಶಂಕರಿ ವಾರ್ಡ್ ನ ಮತದಾರರ ಪ್ರಶ್ನೆ ?

ಆದರೆ, ಈ ಕುರಿತು ಪ್ರಶ್ನಿಸಿದರೆ ಮಾಜಿ ಸಿಎಂ ಹೇಳಿಕೆ ದಂಗುಬಡಿಸುವಂತಿದೆ. 'ಕ್ರಿಮಿನಲ್ ಹಿನ್ನೆಲೆಯುಳ್ಳವರು ಚುನಾವಣೆಗೆ ಸ್ಪರ್ಧಿಸಿಬಾರದು ಎನ್ನುವುದು ಎಲ್ಲಿದೆ. ದಿವಾನ್ ಅಲಿ ಆರೋಪಿ ಅಷ್ಟೆ, ಅಪರಾಧಿ ಅಲ್ಲ. ಯಾವುದೂ ಕಾರಣಕ್ಕೆ ಆತನ ಮೇಲೆ ಕೇಸ್ ಗಳು ದಾಖಲಾಗಿವೆ. ರೌಡಿಗಳು ಸ್ಪರ್ಧಿಸಬಾರದು ಎನ್ನುವುದು ಸೂಕ್ತ ಎಂಬ ಪರ್ಮಾನು ಹೊರಡಿಸಿದ್ದಾರೆ ? ಅಲ್ಲದೇ ನಾವು ತರಕಾರಿ ಮಾರುವ ವ್ಯಕ್ತಿಗೂ ಟಿಕೆಟ್ ನೀಡಿದ್ದೇವೆ. ಅದನ್ನೆಲ್ಲಾ ಏಕೆ ಹೈಲೈಟ್ ಮಾಡುತ್ತಿಲ್ಲ. ದಿವಾನ್ ಅಲಿಯ ಬಗ್ಗೆ ಏಕೆ ಮಾತನಾಡುತ್ತೀರಿ ?' ಸಮಾಜದ ಬಗ್ಗೆ ಕಳಕಳಿ ಇರುವ ಯಾವ ಮುಖಂಡನೊಬ್ಬ ಮಾತಿದು.

ಕುಮಾರಸ್ವಾಮಿ ಸಾಮಾನ್ಯ ಮನುಷ್ಯರಲ್ಲ. ಒಂದು ಕಾಲದಲ್ಲಿ ರಾಜ್ಯವನ್ನು ಮುನ್ನಡೆಸಿದ ನಾಯಕ. ಅವರ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ ಹೆಗ್ಗಳಿಕೆ ಪಾತ್ರನಾಗಿರುವ ವ್ಯಕ್ತಿಯೊಬ್ಬ ಹೀಗೆ ಮಾತನಾಡುವುದು ಸರಿಯೇ ? ಗೆಲುವು ಸಾಧಿಸಲು ಏನನ್ನಾದರೂ ಮಾಡಲು ರಾಜಕೀಯ ನಾಯಕರು ಹೇಸುವುದಿಲ್ಲ ಎನ್ನುವುದಕ್ಕೆ ಕುಮಾರಸ್ವಾಮಿ ಹೇಳಿಕೆ ಸ್ಪಷ್ಟ ನಿದರ್ಶನ. ಜೆಡಿಎಸ್ ಗೆಲ್ಲಿಸಲು ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಅಷ್ಟೂ ರೌಡಿಗಳಿಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಹಿಂದೆ ಮುಂದೆ ನೋಡುವುದಿಲ್ಲ ಎಂದು ಪ್ರತಿಪಕ್ಷಗಳ ನಾಯಕರುಗಳ ಕುಹಕವಾಗಿದೆ.

ಕುಡಿಯುವ ನೀರಿನ ಬವಣೆ ತೀರಿಸಲು ಸರಕಾರ ಮಳೆ ನೀರು ಕೊಯ್ಲು ಯೋಜನೆಯನ್ನು ಕಡ್ಡಾಯಗೊಳಿಸಿದೆ. ನೂತನವಾಗಿ ನಿರ್ಮಿಸಲಾಗುವ ಕಟ್ಟಡಕ್ಕೆ ಮಾತ್ರ ಮಳೆ ನೀರು ಕೊಯ್ಲು ಯೋಜನೆ ಕಡ್ಡಾಯಗೊಳಿಸುವುದಾಗಿ ಜೆಡಿಎಸ್ ಘೋಷಿಸಿರುವುದು ಹಸಿರು ಕ್ರಾಂತಿಗೆ ಹಿನ್ನೆಡೆ ಉಂಟಾಗಿದೆ. ಇದು ಕೂಡ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನಗರ ಪ್ರದೇಶಗಳ ಅಭಿವೃದ್ಧಿ ವಿರೋಧಿ ಎಂಬ ಹಣೆಪಟ್ಟಿ ಹೊತ್ತಿರುವ ಜೆಡಿಎಸ್, ಪರಿಸರಕ್ಕೆ ಸಂಚಕಾರ ತಂದಿದೆ ಎಂಬ ಆರೋಪವೂ ಈ ಪಕ್ಷದ ಮೇಲಿದೆ.

ಕ್ರಿಮಿನಲ್ ಗಳಿಗೆ ಟಿಕೆಟ್ ನೀಡಿರುವುದನ್ನು ಲೋಕಾಯುಕ್ತ ಸಂತೋಷ ಹೆಗ್ಡೆ ತೀವ್ರವಾಗಿ ಖಂಡಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಕಾಪಾಡುವವರು ಯಾರು ? ರೌಡಿಗಳು ಕಾರ್ಪೋರೇಟರ್ ಗಳಾದರೆ ಜನರಿಗೆ ರಕ್ಷಣೆ ನೀಡುವವರು ಯಾರು ? ಇಂತಹ ಬೆಳವಣಿಗೆಯನ್ನು ಎಲ್ಲರೂ ಖಂಡಿಸಬೇಕಾಗಿದೆ. ಪಕ್ಷ ಯಾವುದಾದರೂ ಸರಿ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡುವುದು ಜನತೆಗೆ ಮಾಡಿದ ಮೋಸ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more