• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳೂರು ಕರಾವಳಿಯಲ್ಲಿ ಗೌಜಿ ‘ಕಡಲಪರ್ಬ’

By Staff
|
Dr Veerendra Heggade inaugurates Kadalaparba
ಸಮುದ್ರ ಕೃಷಿಯ ಕಲಾವಂತಿಕೆ ಮರೆಯಾಗುತ್ತಿದೆ. ಯಾಂತ್ರೀಕೃತ ಮೀನುಗಾರಿಕೆಯ ದಾಳಿಗೆ ಕರಾವಳಿಯ ಮೂಲ ಸಂಸ್ಕೃತಿ ಕೂಡಾ ಬಲಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಮೂಲಸಂಸ್ಕೃತಿಯನ್ನು ಉದ್ದೀಪನಗೊಳಿಸುವ ಆಶಯದ 'ಕಡಲಪರ್ಬ" ಜರಗಿತು. ವಿಶ್ವತುಳು ಸಮ್ಮೇಳನಕ್ಕೆ ಪೂರಕವಾಗಿತ್ತು ಪರ್ಬ.

* ಚಿದಂಬರ ಬೈಕಂಪಾಡಿ, ಮಂಗಳೂರು

ವಿಶ್ವತುಳು ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮಂಗಳೂರು ಸಮೀಪದ ಚಿತ್ರಾಪುರ ಕಡಲಕಿನಾರೆಯಲ್ಲಿ 'ಕಡಲಪರ್ಬ" ಅತ್ಯಂತ ವೈಭವೋಪೇತವಾಗಿ ಭಾನುವಾರ ಸಂಪನ್ನಗೊಂಡಿತು. ಸಹಸ್ರಾರು ಮಂದಿ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ತುಳು ಸಂಸ್ಕೃತಿಯಲ್ಲಿ ಪ್ರಮುಖವಾಗಿ ಕಾಣಬಹುದಾದ ಮೀನುಗಾರಿಕೆಯನ್ನೇ ಅವಲಂಬಿಸಿರುವ ಕಡಲಮಕ್ಕಳ ಶ್ರಮವನ್ನು ಅನಾವರಣಮಾಡುವ ನಿಟ್ಟಿನಲ್ಲಿ ಕಡಲಪರ್ಬ ಯಶಸ್ಸುಕಂಡಿತು, ಆದ್ದರಿಂದ ಇದನ್ನು ಸಂಘಟಿಸಿದ 24 ಮೊಗವೀರ ಸಂಘಟನೆಗಳನ್ನು ನಿಜಕ್ಕೂ ಅಭಿನಂದಿಸಲೇಬೇಕು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಅದ್ದೂರಿ ಮೆರವಣಿಯಲ್ಲಿ ಸಮುದ್ರಕಿನಾರೆಗೆ ಕರೆದುತಂದ ಬಗೆಯಂತೂ ಅವಿಸ್ಮರಣೀಯ. ಕರಾವಳಿಯ ಮೊಗವೀರ ಜನರು ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಒಗ್ಗಟ್ಟನ್ನು ತೋರಿಸಿದ್ದು ಇದೇಮೊದಲು ಎನ್ನುವಂತಿತ್ತು ಅವರೆಲ್ಲರ ಮುಖಭಾವಗಳು. ಡಾ.ಹೆಗ್ಗಡೆಯವರು ಸಮುದ್ರಕ್ಕೆ ಹಾಲೆರೆಯುವ ಮೂಲಕ ಕಡಲಪರ್ಬಕ್ಕೆ ಚಾಲನೆಕೊಟ್ಟರು. ದಿನಪೂರ್ತಿ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಡಾ.ಹೆಗ್ಗಡೆಯವರನ್ನು ಮೊಗವೀರ ಸಂಘಟನೆಗಳ ಪರವಾಗಿ ಬೆಳ್ಳಿಯ ದೋಣಿ ನೀಡಿ ಗೌರವಿಸಲಾಯಿತು.

ಸಮುದ್ರದಲ್ಲಿ ದೋಣಿ ಓಡಿಸುವ ಸ್ಪರ್ಧೆ, ಮೀನುಬಲೆಕಟ್ಟುವ ಸ್ಪರ್ಧೆ, ಮಹಿಳೆಯರು ಮೀನಿನಬುಟ್ಟಿಗಳನ್ನು ತಲೆಮೇಲಿಟ್ಟುಕೊಂಡು ಓಡುವ ಸ್ಪರ್ಧೆ, ಹಗ್ಗಜಗ್ಗಾಟ, ಬಲೆಬೀಸುವ ಸ್ಪರ್ಧೆ ಜೊತೆಗೆ ರಂಪೊಣಿ ಮೀನು ಹಿಡಿಯುವ ಪ್ರಾತ್ಯಕ್ಷಿಕೆ ಪ್ರಮುಖ ಆಕರ್ಷಣೆಯಾಗಿತ್ತು. ತೋರಿಕೆಗೆ ಇವೆಲ್ಲವೂ ಸ್ಪರ್ಧೆಯಂತಿದ್ದರೂ ಆಧುನಿಕತೆಯ ಗಾಳಿ ಮೀನುಗಾರಿಕೆ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಈ ಎಲ್ಲಾ ಸ್ಪರ್ಧೆಗಳನ್ನು ಕಣ್ಣುಪಿಳಿಪಿಳಿಬಿಟ್ಟು ನೋಡುತ್ತಿದ್ದ ಮುಖಗಳಿಂದ ಸ್ಪಷ್ಟವಾಗುತ್ತಿತ್ತು.

ಈಗಿನ ಪೀಳಿಗೆಗೆ ದೋಣಿ ನಡೆಸುವುದು ಹೇಗೆಂಬುದು ಗೊತ್ತಿಲ್ಲ, ಕೆಲವೇ ಕೆಲವು ಮಂದಿ ಮಾತ್ರ ಪರಿಣತಿ ಸಾಧಿಸಿದ್ದಾರೆ. ಯಾಕೆಂದರೆ ಹೆಚ್ಚಿನವರು ಈಗ ಯಾಂತ್ರೀಕೃತ ದೋಣಿಗಳನ್ನು ಮೀನುಗಾರಿಕೆಗೆ ಬಳಸುತ್ತಿದ್ದಾರೆ. ಗುಂಡಿ ಅದುಮಿದರೆ ಸಾಕು ದೋಣಿ ಚಲಿಸುತ್ತದೆ. ಹಿಂದಿನಂತೆ ಹುಟ್ಟು ಹಾಕಿ ಕೈರಟ್ಟೆಗಳು ನೋಯುತ್ತವೆ ಅನ್ನುವಂತಿಲ್ಲ. ಆದ್ದರಿಂದಲೇ ಬೀಸುಬಲೆ ಕಸಬು ಗೊತ್ತಿಲ್ಲ, ಬಲೆಹರಿದುಹೋದರೆ ಕಟ್ಟುವ ಕಲೆಯೂ ಎಲ್ಲರಿಗೂ ಗೊತ್ತಿಲ್ಲ. ಅಂದರೆ ಕಳೆದುಹೋಗಿರುವುದು ದಿನಗಳು ಮಾತ್ರವಲ್ಲ, ಕಲೆಯನ್ನು ಕಲಿಯುವ ಕಾಲವೂ ಮಿಂಚಿಹೋಗಿದೆ ಎನ್ನುವ ಸಂದೇಶವನ್ನು ಯುವಜನಾಂಗ ಮನವರಿಕೆ ಮಾಡಿಕೊಳ್ಳಬೇಕು.

ಕರಾವಳಿಯಲ್ಲಿ ಮೊಗವೀರರು ಒಗ್ಗಟ್ಟಿಗೆ ಹೆಸರಾದವರು. ಇದಕ್ಕೆಲ್ಲಾ ಕಾರಣ ಹಿಂದಿನ ಗ್ರಾಮಗಳ ಆಡಳಿತ ವ್ಯವಸ್ಥೆ, ಗುರಿಕಾರನ ಮಾತೇ ಅಂತಿಮ, ಮಹಾಸಭೆಕೊಡುವ ತೀರ್ಮಾನವೇ ಕಡೆಯದು, ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರಲಿಲ್ಲ. ಆಗ ಕೂಡುಕಟ್ಟು ಬಲವಾಗಿತ್ತು. ಮಾತಿಗೂ ಬೆಲೆಯಿತ್ತು. ಈಗ ಪ್ರಶ್ನೆಮಾಡುವುದೇ ಮೊದಲ ಕರ್ತವ್ಯವಾಗಿದೆ. ಅಂದರೆ ಪ್ರಶ್ನಿಸುವುದೇ ಕಾಯಕ. ಆದ್ದರಿಂದ ಒಗ್ಗಟ್ಟು ಸಡಿಲಗೊಂಡಿದೆ. ಬಹುಮುಖ್ಯವಾಗಿ ಕರಾವಳಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಶಿಸಿಹೋಗಿ ಯಾಂತ್ರೀಕೃತ ಮೀನುಗಾರಿಕೆ ಪ್ರಾಬಲ್ಯಗೊಂಡಮೇಲೆಯೇ ಮೊಗವೀರರಲ್ಲಿ ಒಗ್ಗಟ್ಟು ವೇಗವಾಗಿ ಸಡಿಲಗೊಂಡಿತು ಎನ್ನುವುದನ್ನು ಗಮನಿಸಬಹುದು.

ಈ ಎಲ್ಲಾ ಮಾತುಗಳನ್ನು ಆಡಿದ ಉದ್ದೇಶ ತುಳು ಸಂಸ್ಕೃತಿ ಕರಾವಳಿಯ ಮೀನುಗಾರ ಸಮುದಾಯದಿಂದಲೂ ನಿಧಾನವಾಗಿ ಕಣ್ಮರೆಯಾಗುತ್ತಿದೆ ಎನ್ನುವುದನ್ನು ನೆನಪಿಸಲು. ಯುವಪೀಳಿಗೆಗೆ ಅರಿವಿಲ್ಲದ ಮೂಲಸಂಸ್ಕೃತಿಯನ್ನು ಕೇವಲ ಮೊಗವೀರ ಸಮುದಾಯಕ್ಕೆ ಮಾತ್ರ ನೆನಪಿಸುವ ಕೆಲಸ ಆಗಬೇಕೆಂಬುದು ಇದರರ್ಥವಲ್ಲ. ಶ್ರಮಿಕವರ್ಗದ ಎಲ್ಲ ಸಮುದಾಯದಲ್ಲೂ ಮೂಲಸಂಸ್ಕೃತಿ ಕಣ್ಮರೆಯಾಗುತ್ತಿದೆ. ಇದನ್ನು ಉದ್ದೀಪನಗೊಳಿಸುವುದು ಹೇಗೆ? ಎನ್ನುವ ಚಿಂತನೆ ಉಜಿರೆಯಲ್ಲಿ ಜರುಗಲಿರುವ ವಿಶ್ವತುಳು ಸಮ್ಮೇಳನದಲ್ಲಿ ಆಗಲಿ ಎನ್ನುವುದು ಆಶಯ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more