ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗೀಶ್ವರ್‌ಗೆ ಬಿಜೆಪಿ ಸಾಕಾಯಿತೇ?

|
Google Oneindia Kannada News

CP Yogishwar
ಚನ್ನಪಟ್ಟಣ, ನ. 9 : ಚನ್ನಪಟ್ಟಣದ ಮಾಜಿ ಶಾಸಕ ಸಿಪಿ ಯೋಗೀಶ್ವರ್ ಮಂತ್ರಿಯಾಗುವ ಭ್ರಮೆಯಿಂದ ಆಪರೇಷನ್ ಕಮಲಕ್ಕೊಳಗಾಗಿದ್ದರು. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ದ ಹೀನಾಯವಾಗಿ ಪರಾಭವಗೊಂಡರು. ನಂತರ ಎದುರಾದ ಚನ್ನಪಟ್ಟಣ ಉಪಚುನಾವಣೆಯಲ್ಲೂ ಕ್ಷೇತ್ರದ ಮತದಾರರಿಂದ ತಿರಸ್ಕೃತಗೊಳಗಾದರು.

ಕೇಸರಿ ಪಾಳೆಯಕ್ಕೆ ಜಿಗಿಯುವ ಮೊದಲು ಮತ್ತು ನಂತರ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ್ ವಿರುದ್ದ ಬಹಿರಂಗವಾಗಿ ಬಾಯಿಗೆ ಬಂದಂತೆ ಮಾತನಾಡಿದರು. ನಂತರ ನಡೆದ ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ತಮ್ಮ ಎದುರಾಳಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ದವೂ ಅನನುಭವಿಯಂತೆ ಮಾತನಾಡಿದ್ದರು. ಇವೆಲ್ಲವನ್ನ ಗಮನಿಸಿದ್ದ ಮತದಾರ ಮಾತ್ರ ಅವಕಾಶವಾದಿ ರಾಜಕಾರಣಕ್ಕೆ ಸೊಪ್ಪು ಹಾಕದೇ ಯೋಗೀಶ್ವರ್‌ಗೆ ತಕ್ಕ ಪಾಠ ಕಲಿಸಿದರು.

ಬಿಜೆಪಿ ಸೇರಿದ ನಂತರ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನನುಭವಿಸಿದ್ದ ಯೋಗೀಶ್ವರ್‌ಗೆ ಆದಾಯ ತೆರಿಗೆ ಇಲಾಖೆ ದಾಳಿ ಮತ್ತಷ್ಟು ಜರ್ಜರಿತರನ್ನಾಗಿ ಮಾಡಿತು. ಯೋಗೀಶ್ವರ್ ಚುನಾವಣೆಯಲ್ಲಿ ಕೋಟಿಕೋಟಿಯಷ್ಟು ಹಣ ಸುರಿದರೂ ಅಧಿಕಾರವೂ ಸಿಗಲಿಲ್ಲ, ಇದರಿಂದ ಗಂಟು ಕಳೆದುಕೊಂಡು ಅಧಿಕಾರವನ್ನ ಕಳೆದುಕೊಂಡು ಯೋಗೀಶ್ವರ್ ಅತಂತ್ರರಾಗಿದ್ದಾರೆ.

ಬಿಜೆಪಿಯನ್ನ ನಂಬಿ ಬಂದ ಯೋಗೀಶ್ವರ್‌ಗೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗ ನಾಯಕನಾಗಿ ಬೆಳೆಸುತ್ತೇನೆಂದು ವಾಗ್ಧಾನ ಮಾಡಿದ್ದ ಯಡಿಯೂರಪ್ಪನವರು ಕೂಡ ತಮ್ಮ ಕುರ್ಚಿ ಉಳಿಸಿಕೊಳ್ಳುವ ಬಗ್ಗೆಯೇ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಆದರೆ ನಂಬಿ ಬಂದ ಯೋಗೀಶ್ವರ್‌ಗೆ ಕೇಸರಿ ಪಾಳೆಯದಲ್ಲಿ ಯಾವ ಗೌರವವೂ ಸಿಗುತ್ತಿಲ್ಲ ಎಂದು ಗೊತ್ತಾಗಿದೆ.

ಒಪ್ಪತ್ತಿನ ಕೂಳು(ಊಟ)ಗೆ ಹೋಗಿ ವರ್ಷದ ಕೂಳು ಹಾಳು ಮಾಡಿಕೊಂಡಂತಾಗಿದೆ ಯೋಗೀಶ್ವರ್ ಕಥೆ.. ಬಿಜೆಪಿ ಸೇರಿದ ನಂತರ "ಯೋಗ"ವನ್ನ ಕಳೆದುಕೊಂಡ ಯೋಗೀಶ್ವರ್‌ಗೆ ಮುಂದಿನ ರಾಜಕೀಯ ಭವಿಷ್ಯದ ಚಿಂತೆ ಕಾಡುತ್ತಿದೆ. ಒಕ್ಕಲಿಗ ಬಾಹುಳ್ಯವಿರುವ ಪ್ರದೇಶಗಳಲ್ಲಿ ಇನ್ನು ಬಿಜೆಪಿಗೆ ಜನ ಮನ್ನಣೆ ಹಾಕುವುದಿಲ್ಲವೆಂದು ಅರಿತಿರುವ ಯೋಗೀಶ್ವರ್ ಕೇಸರಿ ಪಾಳೆಯದ ರಾಜಕೀಯಕ್ಕೆ ಪೂರ್ಣವಿರಾಮ ಹಾಕುವರೆಂದು ಹೇಳಲಾಗುತ್ತಿದೆ.

ಒಂದು ವೇಳೆ ಯೋಗೀಶ್ವರ್ ಬಿಜೆಪಿಗೆ ಗುಡ್‌ಬೈ ಹೇಳುವ ತೀರ್ಮಾನ ಮಾಡಿದರೆ ಮುಂದೆ ಕಾಂಗ್ರೆಸ್ ಸೇರುವರೊ, ಜೆಡಿಎಸ್ ಸೇರುವರೋ ಎಂಬ ಚರ್ಚೆಗಳು ಈಗಾಗಲೇ ಚನ್ನಪಟ್ಟಣದಲ್ಲಿ ಆರಂಭವಾಗಿವೆ. ಜೆಡಿಎಸ್‌ಗೆ ಸೇರಿಸಿಕೊಳ್ಳಲು ಹೆಚ್.ಡಿ.ಕುಮಾರಸ್ವಾಮಿಯವರು ಅಷ್ಟೇನು ಆಸಕ್ತಿ ತೋರದ ಕಾರಣ ಕಾಂಗ್ರೆಸ್‌ಗೆ ಮತ್ತೆ ಸೇರುವರೆಂಬ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ.

ಕಾಂಗ್ರೆಸ್‌ಗೆ ಮತ್ತೆ ಸೇರಲು ಯೋಗೀಶ್ವರ್ ಹಲವು ಮೂಲಗಳಿಂದ ಪ್ರಯತ್ನಿಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೂ ಸದ್ಯಕ್ಕೆ ಬಿಜೆಪಿಯಲ್ಲೇ ಇರುವ ಯೋಗೀಶ್ವರ್ ಬೇರೆ ಪಕ್ಷಕ್ಕೆ ಸೇರುವ ಬಗ್ಗೆಯಾಗಲೀ ಬಿಜೆಪಿ ತ್ಯಜಿಸುವ ಬಗ್ಗೆಯಾಗಲೀ ಯಾವುದೇ ಸುಳಿವು ಬಿಟ್ಟುಕೊಡುತ್ತಿಲ್ಲ.

ಬ್ಯಾಕ್ ಟು ಪೆವಿಲಿಯನ್ ಆಗುವರೆ : ಕಾಂಗ್ರೆಸ್ ಪಾಳೆಯದಲ್ಲಿನ ವಾತಾವರಣದಲ್ಲೇ ರಾಜಕೀಯವಾಗಿ ಗಟ್ಟಿಯಾದ ಯೋಗೀಶ್ವರ್ ಮತ್ತೆ ಬಂದ ದಾರಿಗೆ ಸುಂಕವಿಲ್ಲದಂತೆ ಬ್ಯಾಕ್‌ಟುಪೆವಿಲಿಯನ್ ಆಗುತ್ತಾರೆಂಬ ಮಾತುಗಳು ಚಾಲ್ತಿಯಲ್ಲಿದೆ. ನ.೦೮ರಂದು ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬರುತ್ತಿದ್ದ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪರ ಕಾರಿನಲ್ಲೇ ಪ್ರಯಾಣ ಬೆಳೆಸಿದ ಯೋಗೀಶ್ವರ್ ಮತ್ತೆ ಕಾಂಗ್ರೆಸ್‌ಗೆ ಸೇರುವ ಪ್ರಸ್ತಾಪ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಈ ಘಟನೆಯ ನಂತರ ಕಾರ್ಯಕ್ರಮವೊಂದರಲ್ಲೂ ಕೂಡ ಯೋಗೀಶ್ವರ್‌ರ ಮುನಿಯಪ್ಪನವರು ತಾಲ್ಲೂಕಿನ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿದ್ದಾರೆಂದು ಬಹುಪರಾಕ್ ಹೇಳಿದರು. ಇವೆಲ್ಲ ಬೆಳವಣಿಗೆಗಳನ್ನ ಗಮನಿಸಿದಾಗ ಕೇಸರಿ ಪಾಳೆಯಕ್ಕೆ ಹೋಗಿ ಅಧಿಕಾರ ಕಳೆದುಕೊಂಡ ಯೋಗೀಶ್ವರ್ ಮತ್ತೆ ಕಾಂಗ್ರೆಸ್ ಪಾಳೆಯದಲ್ಲಿ ತಳವೂರಲು ಪ್ರಯತ್ನ ಪಡುತ್ತಿದ್ದಾರೆಂದು ಹೇಳಲಾಗುತ್ತಿದೆ. ದೆಹಲಿ ಹೈಕಮಾಂಡ್‌ನೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡಿರುವ ಕೆ.ಹೆಚ್.ಮುನಿಯಪ್ಪನವರ ಮೂಲಕ "ಕೈ" ಪಾಳೆಯ ಸೇರುವ ಪ್ರಯತ್ನವನ್ನ ಯೋಗೀಶ್ವರ್ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.

ಅಂತೆ ಕಂತೆಗಳ ನಡುವೆ ಯೋಗೀಶ್ವರ್‌ರ ಇತ್ತೀಚಿನ ನಡವಳಿಕೆಗಳು ಬಿಜೆಪಿಯಲ್ಲಿ ಬೇಸತ್ತಿರುವುದಂತೂ ಸತ್ಯದ ಮಾತಾಗಿದೆ. ಯೋಗೀಶ್ವರ್ ಪಾಲಿಗೆ ಕಾಂಗ್ರೆಸ್ ಬೆಂಕಿ ಆದರೆ ಬಿಜೆಪಿ ಬಾಣಲೆಯಾಗಿದೆ. ಬೆಂಕಿಯಿಂದ ಬಾಣಲೆಗೆ, ಬಾಣಲೆಯಿಂದ ಬೆಂಕಿಗೆ ಮತ್ತೆ ಹಾರುವುದು ಬೇಡವೆಂದು ತೀರ್ಮಾನಿಸುತ್ತಾರೋ ಅಥವಾ ಬೆಂಕಿ ಬಾಣಲೆಯಾಟವಾಡುವರೋ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X