• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಸರಕಾರದ 'ಕ್ಲಿಯೋಪಾತ್ರ' ಶೋಭಾ

|

ಕರ್ನಾಟಕದಲ್ಲಿ ಭುಗಿಲೆದ್ದಿರುವ ಬಿಜೆಪಿ ಆಂತರಿಕ ಕೋಲಾಹಲ ಮುಗಿಲು ಮುಟ್ಟಿದೆ. ಯಡ್ಡಿ ವಿರುದ್ದ ರಣಕಹಳೆ ಊದಿರುವ ರೆಡ್ಡಿ ಸಹೋದರರು ಮುಖ್ಯಮಂತ್ರಿಯ ತಲೆದಂಡಕ್ಕಾಗಿ ಪಟ್ಟುಹಿಡಿದಿದ್ದಾರೆ. ಪಕ್ಷ ಮತ್ತು ಸರಕಾರ ಇವತ್ತು ಭಿನ್ನಮತ, ಅನ್ಯಮತ, ದ್ವೇಷ, ಅಸೂಯೆಯ ಕಡಾಯಿಯಲ್ಲಿ ಬೇಯುತ್ತಿದೆ. ಮುಂದೇನು? ಗೊತ್ತಿಲ್ಲ. ರಾಜ್ಯ ರಾಜಕೀಯ ಅಯೋಮಯವಾಗಿದೆ. ಆದರೆ, ಹಲವು ದಿವಸಗಳಿಂದ ಹೊಗೆಯಾಡುತ್ತಿದ್ದ ಅಸಮಾಧಾನದ ಬೆಂಕಿ ಧಿಗ್ಗನೆ ಜ್ವಾಲೆಯಾಗಿ ಹತ್ತಿ ಉರಿಯುತ್ತಿರುವುದಕ್ಕೆ ಕಾರಣಗಳೇನು?

ಅದಿರು ಲಾರಿಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಬಾರದು ಎಂಬ ಗಣಿಧಣಿಗಳ ಒತ್ತಾಯ ಅಸಮಾಧಾನದ ಒಂದು ಕಿಡಿಮಾತ್ರ. ಬಿಜೆಪಿ ಅಧಿಕಾರ ಸೂತ್ರ ಹಿಡಿದ 2008ರ ಮೇ ತಿಂಗಳಿನಿಂದ ಹೆಪ್ಪುಗಟ್ಟಿದ್ದ ಅತೃಪ್ತಿಯ ಪೆಟ್ರೋಲ್ ಬಂಕಿಗೆ ಅದೇ ಕಿಡಿ ಬಿದ್ದು ಭಾಜಪದ ಮನೆ ಉರಿಯುತ್ತಿದೆ. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದರ ಹಿಂದೆ ಅನೇಕರ ಶ್ರಮ, ಹಣ ಮತ್ತು ಚಾಕಚಕ್ಯತೆ ಇದ್ದರೂ ಮುಖ್ಯಮಂತ್ರಿ ಕೇವಲ ಕೆಲವರನ್ನು ಮಾತ್ರ ಓಲೈಸುತ್ತಾ , ಅಧಿಕಾರದ ರಿಮೋಟು ಕಂಟ್ರೋಲನ್ನು ತಮ್ಮ ಪ್ರಿಯರಿಗೆ ಮಾತ್ರ ಕೊಟ್ಟಿರುವ ಸಿಟ್ಟು ಸಂಪುಟ ಸಹೋದ್ಯೋಗಿಗಳ ಹೊಟ್ಟೆಯಿಂದ ಸಿಡಿದು ಹೊರಬಂದದ್ದು ಮಾತ್ರ ಸತ್ಯ.

ಅಧಿಕಾರದ ಉತ್ತುಂಗ ಸ್ಥಾನದಲ್ಲಿರುವವರ ಸುತ್ತ ಮುತ್ತಿಕೊಂಡು ಸರಕಾರದ ಆಗುಹೋಗುಗಳನ್ನು ನೇಪಥ್ಯದಲ್ಲಿದ್ದುಕೊಂಡೇ ನಿಯಂತ್ರಿಸುವ ಒಂದು ವ್ಯವಸ್ಥೆಯೇ ನಮ್ಮಲ್ಲಿದೆ. ಅದು ಅಧಿಕಾರದ ರಾಜಕೀಯದ ಮರ್ಮಾಂಗ. ಪ್ರಧಾನಿ ಇಂದಿರಾಗಾಂಧಿಗೆ ಆರ್.ಕೆ.ಧವನ್ ಇದ್ದಂತೆ, ಆರ್. ಗುಂಡೂರಾವ್ ಅವರಿಗೆ ಎಫ್ಎಂ ಖಾನ್, ಕೆಜೆ ರಾರ್ಜ್ ಹರಿಪ್ರಸಾದ್ ಇದ್ದಂತೆ, ಪ್ರಧಾನಿ ದೇವೇಗೌಡರಿಗೆ ಸಿಎಂ ಇಬ್ರಾಹಿಂ ಇದ್ದಂತೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗಳ ಎಡಕ್ಕೆ ಜಮೀರು ಬಲಕ್ಕೆ ಚೆಲುವರಾಯಸ್ವಾಮಿ ಇದ್ದಂತೆ, ನಮ್ಮ ಇವತ್ತಿನ ಕಥಾನಾಯಕ ಯಡಿಯೂರಪ್ಪ ಅವರಿಗೆ ಕುಮಾರಿ ಶೋಭಾ ಕರಂದ್ಲಾಜೆ Most adored lieutenant ಆಗಿರುವುದು ಬಹುತೇಕ ಜತೆಗಾರ ಸಚಿವರ ಕಣ್ಣು ಕುಕ್ಕಿದೆ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ದೃಷ್ಟಿದೋಷ ಎನ್ನುತ್ತಾರೆ. ಈ ಹೊತ್ತು ಯಡ್ಡಿಗೆ ತಟ್ಟಿರುವ ದೋಷ ಇದೇ.

ಪತ್ರಿಕೆ, ದೂರದರ್ಶನ, ಅಂತರ್ಜಾಲವನ್ನು ಕೂಲಂಕಷವಾಗಿ ಗಮನಿಸುವ ಓದುಗ ವರ್ಗದ ದೃಷ್ಟಿಗೂ ಈ ವಿದ್ಯಮಾನಗಳು ಬಿದ್ದೇ ಇರುತ್ತವೆ. ಸುದ್ದಿಚಿತ್ರಗಳನ್ನು ಸೆರೆಹಿಡಿಯುವ ಛಾಯಾಚಿತ್ರಗಾರರೂ ಇದಕ್ಕೆ ಜ್ವಲಂತ ಸಾಕ್ಷಿಯಾಗಿದ್ದಾರೆ. ಮುಖ್ಯಮಂತ್ರಿಗಳು ಭಾಗವಹಿಸುವ, ಸರಕಾರಕ್ಕೆ ಸಂಬಂಧಿಸಿದ ಒಂದು ನೂರು ಕಾರ್ಯಕ್ರಮಗಳ ಫೋಟೋ ಕ್ಲಿಕ್ಕಿಸಿದರೆ ಅದರ 96 ಚಿತ್ರಗಳಲ್ಲಿ ಶೋಭಾ ವಿರಾಜಮಾನರಾಗಿರುತ್ತಾರೆ. Its quite natural that she has scored 96/100!

ವಿದೇಶಾಂಗ ವ್ಯವಹಾರವಾಗಲೀ, ವಿಚಾರ ಸಂಕಿರಣವಿರಲಿ, ಕಾವೇರಿಗೆ ಬಾಗಿನ, ಪಾದಯಾತ್ರೆ, ನೆರೆಹಾವಳಿ, ರಾಜತಾಂತ್ರಿಕ ಒಡಬಂಡಿಕೆ, ದೇವಸ್ಥಾನಗಳಲ್ಲಿ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸುವಾಗ ಮತ್ತೆಲ್ಲ ಬುಡಬುಡಿಕೆಗಳಲ್ಲಿ ಯಡ್ಡಿ ಜತೆ ಶೋಭಾ ಇರತಕ್ಕದ್ದು ಎನ್ನುವುದು ಅಘೋಷಿತ ನಿಯಮವಾಗಿದೆ. Not only ಬಂದಾಗ but also ಬರಲೇಬೇಕು ಎಂಬ ವ್ಯಾಕರಣದ ನಿಯಮದಂತೆ ಎಲ್ಲಿ ಯಡಿಯೂರಪ್ಪನೋ ಅಲ್ಲಿ ನಾನು ಎನ್ನುತ್ತಾ ಶೋಭಾ ಹಾಜರಿರಲೇಬೇಕು. ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೆ ಡ್ಯುಯೆಟ್ ಹಾಡುತ್ತಾ ಶೋಭಾ ಮೆರೆಯುವುದನ್ನು ಜತೆಗಾರ ಸಚಿವರು ಎಷ್ಟು ದಿವಸ ಸಹಿಸಿಕೊಂಡಾರು?

ಕೇವಲ ಪ್ರಚಾರಕ್ಕಾಗಿ ಶೋಭಾ ಹಾತೊರೆದರು ಎಂಬ ಆರೋಪದ ಮಾತುಗಳು ಇವಲ್ಲ. ಹೆಸರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾದರೂ ಉಳಿದ ಬಹುತೇಕ ಸಚಿವರಿಗೆ ತಮ್ಮತಮ್ಮ ಆಡಳಿತದಲ್ಲಿ ಪ್ರಾಧಾನ್ಯತೆ ಕಡಿಮೆ ಎಂಬ ಆರೋಪ ವಿಧಾನಸೌಧ ಮತ್ತು ಶಾಸಕರ ಮೊಗಸಾಲೆಗಳಲ್ಲಿ ಜನಜನಿತ. ಆಗಾಗ ಅಶೋಕ್, ಕಟ್ಟಾ ಸುಬ್ರಮಣ್ಯನಾಯ್ಡು, ಅರವಿಂದ ನಿಂಬಾವಳಿ, ಸಿಎಂ ಉದಾಸಿ, ಸುರೇಶ್ ಕುಮಾರ್, ವಿಎಸ್ ಆಚಾರ್ಯ, ಬೊಮ್ಮಾಯಿ ಲೈಮ್ ಲೈಟಿನಲ್ಲಿ ಹೊಳೆಯುವುದು ಹೊರತು ಪಡಿಸಿದರೆ ಉಳಿದ ಒಂದೂವರೆ ಡಜನ್ ಸಚಿವರು ಭಾರತೀಯ ಜನತಾಪಕ್ಷದ ಮಲತಾಯಿ ಸಚಿವರೇನು? ಎನ್ನುವುದು ರೆಡ್ಡಿ ಸಹೋದರರು ಎತ್ತಿರುವ ಪ್ರಶ್ನೆ.

ಶೋಭಾ ಕರಂದ್ಲಾಜೆ ಅವರ ವಿರುದ್ಧ ರೆಡ್ಡಿ ಬಳಗ ಮಾಡುವ ಆರೋಪಗಳಲ್ಲಿ ಮುಖ್ಯವಾದದ್ದು ಆಕೆ ಇತರ ಇಲಾಖೆಗಳ ಕೆಲಸ ಕಾರ್ಯಗಳಲ್ಲಿ ಮೂಗು ಮತ್ತು ಮೂಗುತಿ ತೂರಿಸುತ್ತಾರೆ ಎನ್ನುವುದು. ರೆಡ್ಡಿಗಳು ಇಂದು ಎತ್ತಿರುವ ಪ್ರಮುಖ ಪ್ರಶ್ನೆಯಲ್ಲಿ 'ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ವಇಚ್ಛೆಯಿಂದ ಅಧಿಕಾರ ನಡೆಸುತ್ತಿಲ್ಲ. ಅವರು ಸುತ್ತಲೂ ಉಗ್ರಗಾಮಿಗಳನ್ನು ಮೀರಿಸುವಂತಹ ಸಚಿವರನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗಲ್ಲ. ಆ ಕಾರಣಕ್ಕೆ ಅವರ ನಾಯಕತ್ವ ನಮಗೆ ಬೇಡ. ಯಡ್ಡಿ ತೊಲಗಿದರೆ ಅವರ ಚಮಚಾ ಸಚಿವರು ತೊಲಗುತ್ತಾರೆ' ಎನ್ನುವುದು ಜನಾರ್ದನರೆಡ್ಡಿ ಅವರ ಸ್ಪಷ್ಟ ಅಭಿಮತ. ರೆಡ್ಡಿ ಜೊತೆ ಕಾಣಿಸಿಕೊಂಡಿರುವ ರೇಣುಕಾಚಾರ್ಯ 'ಹೆಂಗಸೇನ್ರಿ ಆಯಮ್ಮ. ಯಾರಿಗೂ ಮರ್ಯಾದೆ ಕೊಡೋದಿಲ್ಲ. ಅವರಾಡೋ ಮಾತುಗಳು ಹೆಂಗಸರಾಡೋ ಮಾತುಗಳೇನ್ರೀ' ಅಂತ ನೇರವಾಗಿ ಯುದ್ಧವನ್ನೇ ಸಾರಿದ್ದಾರೆ.

ರೆಡ್ಡಿಗಳು ಮತ್ತಿತರರು ಆರೋಪ ಮಾಡಿದ ಮಾತ್ರಕ್ಕೆ ಶೋಭಾ ಕೆಲಸಕ್ಕೆ ಬಾರದ ಸಚಿವೆ ಏನಲ್ಲ. ಅವರ ರಾಜಕೀಯ ಇಚ್ಛಾಶಕ್ತಿ, ಕಾರ್ಯಕ್ಷಮತೆ, ಕಾರ್ಯಗೌರವ ಮತ್ತು ರಾಜನೀತಿ ಒಬ್ಬ ದಕ್ಷ ಸಚಿವೆಯನ್ನಾಗಿಸಿದೆ ಎನ್ನುವ ಅಂಶವನ್ನು ಅವರ ಶತ್ರುಗಳೂ ಒಪ್ಪುತ್ತಾರೆ. ಆದರೆ ಎಲ್ಲಾ ಗುಣಗಳನ್ನು ಮಸಿ ನುಂಗಿ ಹಾಕಿತು ಎನ್ನುವ ಹಾಗೆ ಶೋಭಾ ಅವರ ಸಾಮೂಹಿಕ ಹಸ್ತಕ್ಷೇಪದ ಚಪಲ ಅವರ ವೈಯಕ್ತಿಕ ದಕ್ಷತೆಯನ್ನು ಮಣ್ಣುಗೂಡಿಸಿದೆ ಎನ್ನುವುದು ಭಿನ್ನಮತೀಯ ಸಚಿವರು ಹಾಕುವ ಸಿಗ್ನೇಚರ್.

ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಶೋಭಾ ಅವರು ಸಂಪುಟದಲ್ಲಿ ಇರಬೇಕೇ ಅಥವಾ ಅವರನ್ನು ತೆಗೆದು ಹಾಕಬೇಕೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯೇನಲ್ಲ. ಏಕೆಂದರೆ ಅದರಲ್ಲಿ ಅರ್ಧ ಮಿಲಿಯನ್ ಯಡ್ಡಿಯ ಆಪ್ತ ಸಲಹೆಗಾರ ವಿಪಿ ಬಳಿಗಾರ್ ಅವರಿಗೆ ಸಲ್ಲಬೇಕು. ರಾಜಕೀಯ ಸ್ಥಿತ್ಯಂತರ ಹಾದಿಯಲ್ಲಿರುವ ಭಾಜಪ ಮತ್ತು ಅದರ ಸರಕಾರಕ್ಕೆ ಶೋಭಾ ಅವರು ಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಉಳಿದೇ ಉಳಿಯುತ್ತದೆ. ಅದಕ್ಕೆ ಉತ್ತರ ಸಲೀಸು. ಮುಖ್ಯಮಂತ್ರಿಗಿಂತ ಮೊದಲು ಆಕೆ ಸಚಿವ ಸಂಪುಟಕ್ಕೆ ರಾಜೀನಾಮೆ ಕೊಟ್ಟರೆ ಅನೇಕ ರಗಳೆಗಳು ಬಗೆಹರಿದಂತಾಗುತ್ತವೆ. ನೆರೆಹಾವಳಿ ಪ್ರದೇಶಗಳಲ್ಲಿ ಮನೆಗಳನ್ನು ಯಾರು ಕಟ್ಟಬೇಕು ಎಂಬ ಜಿಜ್ಞಾಸೆ ತಂತಾನೆ ಪರಿಹಾರ ಕಂಡುಕೊಳ್ಳುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಸರಕಾರ ಉಳಿಯಲಿದೆ, ಬೀಳಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟಸಾಧ್ಯ. ಇಂತಹ ಬೆಳವಣಿಗೆಯ ನಡುವೆಯೂ ಹಾಟ್ ಪೊಟ್ಯಾಟೋ ಶೋಭಾ ರಾಜೀನಾಮೆ ಮತ್ತು ವಿಪಿ ಬಳಿಗಾರ್ ಎತ್ತಂಗಡಿ ಮಾಡುವುದೇ ಯಡಿಯೂರಪ್ಪ ಮತ್ತು ಅವರ ಮುಖ್ಯಮಂತ್ರಿ ಕುರ್ಚಿಗೆ ಶ್ರೀರಕ್ಷೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರದ ಲಗಾಮು ಹಿಡಿದರಷ್ಟೇ ಯಡ್ಡಿ ಹಾದಿ ಸುಗಮ. ಈ ಪಾಠವನ್ನು ಯಡ್ಡಿ ಆದಷ್ಟು ಬೇಗ ಅರಿತರೆ ರೆಡ್ಡಿಗಳು ಬಗ್ಗಬಹುದು, ಅವರ ನೇತೃತ್ವದ ಭಾಜಪ ಸರಕಾರ ಐದು ವರ್ಷ ಪೂರೈಸಬಹುದು.

ಗ್ಯಾಲರಿ : ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಜೊತೆಜೊತೆಯಲಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more