ಬರಾಕ್ ಒಬಾಮಗೆ ನೊಬೆಲ್ ಶಾಂತಿ ಪ್ರಶಸ್ತಿ

2009 ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಜಿಂಬಾಬ್ವೆಯ ಪ್ರಧಾನಮಂತ್ರಿ ಮಾರ್ಗನ್ ಸ್ವೇಂಗೀರೆ, ಕೊಲಂಬಿಯನ್ ಸೆನೆಟರ್ ಪಿಡಾಡ್ ಕಾರ್ಡಾಬಾ, ಚೀನಾದ ಹೂ ಜಿಯಾ ಅವರ ಹೆಸರು ಮುಂಚೂಣಿಯಲ್ಲಿತ್ತು. ಜೊತೆಗೆ ಫ್ರೆಂಚ್ ಕೊಲಂಬಿಯನ್ ರಾಜಕೀಯ ಮುಖ್ಯಸ್ಥ ಇಂಗ್ರಿಡ್ ಬೆಟೆನ್ ಕೋರ್ಟ್ ಮತ್ತು ಅಪಘಾನಿಸ್ತಾನ ಮಾನವ ಹಕ್ಕು ಹೋರಾಟಗಾರ್ತಿ ಸಿಮಿ ಸಮರ್ ಅವರು ಹೆಸರೂ ಕೂಡಾ ಕೇಳಿ ಬಂದಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಅಮೆರಿಕ ಅಧ್ಯಕ್ಷರ ಹೆಸರು ಅಂತಿಮಗೊಳಿಸಲಾಯಿತು. ಶಾಂತಿ ನೆಲೆಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬಾಮ ಸಲ್ಲಿಸಿದ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.
1906ರಲ್ಲಿ ತಿಯೋಡರ್ ರೂಸ್ ವೆಲ್ಟ್, 1919 ರಲ್ಲಿ ವಿಡ್ರೋ ವಿಲ್ಸನ್ ಅವರು ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು. ಅಧಿಕಾರದಲ್ಲಿದ್ದು ನೊಬೆಲ್ ಪಡೆದುಕೊಂಡವರ ಪೈಕಿ ಒಬಾಮ ಮೂರನೇ ಅಮೆರಿಕ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಅಮೆರಿಕದ ನಾಲ್ಕು ಅಧ್ಯಕ್ಷರು ನೊಬೆಲ್ ಪ್ರಶಸ್ತಿ ಪಡೆದುಕೊಂಡಂತಾಯಿತು.
ಅಮೆರಿಕದ 44ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಅಭ್ಯರ್ಥಿ ಬರಾಕ್ ಒಬಾಮಾ ಅವರು ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮೆಕೇನ್ ಅವರನ್ನು ಮಣಿಸಿ ಆಯ್ಕೆಯಾಗಿದ್ದರು. ಈ ಮೂಲಕ ಆಫ್ರೀಕಾ ಮೂಲಕ ಕಪ್ಪು ವರ್ಣದ ವ್ಯಕ್ತಿಯೊಬ್ಬರು ಶ್ವೇತಭವನದ ಅಧಿಪತ್ಯವನ್ನು ಏರುವ ಮೂಲಕ ಐತಿಹಾಸಿಕ ದಾಖಲೆ ಮೆರೆದಿದ್ದರು. 47 ಹರೆಯದ ಇಲಿನಾಯ್ ಸೆನೆಟರ್ ಆಗಿದ್ದ ಬರಾಕ್ ಒಬಾಮಾ ಅವರ ಎರಡು ವರ್ಷಗಳ ಅವಿರತ ಹೋರಾಟದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿತ್ತು.
ಒಹಿಯೋ, ಫ್ಲೋರಿಡಾ, ವರ್ಜಿನಿಯಾ ಹಾಗೂ ಲೋವಾ ರಾಜ್ಯಗಳಲ್ಲಿ ನಡೆದ ಮತದಾನದ ಪ್ರಕ್ರಿಯೆಯನ್ನು ಶಿಕಾಗೊದಲ್ಲಿ ಏರ್ಪಡಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಫಲಿತಾಂಶವನ್ನು ಘೋಷಿಸಲಾಯಿತು. 338 ಮತಗಳನ್ನು ಒಬಾಮಾ ಪಡೆದು ಜಯಶಾಲಿಯಾದರೆ, ಜಾನ್ ಮೆಕೇನ್ ಬರೀ 156 ಮತಗಳು ಪಡೆದು ಸೋಲನ್ನುಂಡಿದ್ದರು.
(ಏಜನ್ಸೀಸ್)











Click it and Unblock the Notifications