ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಎಸೆಯಲು ದೇವೇಗೌಡ ಕಾರಣ : ಸಿಎಂ

By Staff
|
Google Oneindia Kannada News

Yedyurappa blames Gowda for Slipper hurl incidence
ಹೊನ್ನಾಳಿ (ಶಿವಮೊಗ್ಗ), ಏ. 28 : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತನೊಬ್ಬ ತಮ್ಮ ಮೇಲೆ ಚಪ್ಪಲಿ ಎಸೆಯುವ ಪ್ರಯತ್ನ ಘಟನೆಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಇದು ದೇವೇಗೌಡ, ಅವರ ಪುತ್ರರು ಹಾಗೂ ಬೆಂಬಲಿಗರ ಕೃತ್ಯ ಎಂದು ಆರೋಪಿಸಿದ್ದಾರೆ.

ಹೊನ್ನಾಳಿಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ದೇವೇಗೌಡರ ಕುಟುಂಬದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ದೇವೇಗೌಡ ಮತ್ತು ಅವರ ಪುತ್ರರ ಕುಮ್ಮಕ್ಕಿನಿಂದ ಈ ಕೃತ್ಯ ಎಸೆಗಲಾಗಿದೆ. ನನ್ನನ್ನು ಸಾರ್ವಜನಿಕವಾಗಿ ಅಪಮಾನ ಮಾಡಲು ಈ ಸಂಚು ರೂಪಿಸಲಾಗಿದೆ ಎಂದು ಹರಿಹಾಯ್ದರು. ನಾನು ಮಂಡ್ಯದವನೇ, ನಾನು ಕೂಡಾ ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ಇಂತಹ ಬೆದರಿಕೆ ಈ ಯಡಿಯೂರಪ್ಪ ಹೆದರುವವನಲ್ಲ. ಇಂತಹ ನೂರೆಂಟು ಮಂದಿಗಳನ್ನು ನೋಡಿದ್ದೇನೆ. ಆ ದೇವೇಗೌಡ ಮತ್ತು ಅವರ ಮಕ್ಕಳು ನೂರು, ಇನ್ನೂರು ರುಪಾಯಿ ಕೊಟ್ಟು ಈ ಕೃತ್ಯ ಮಾಡಲು ಹೇಳಿರುತ್ತಾರೆ. ತಲೆಕಟ್ಟಿರುವ ಇಂತವರು ಈ ಕೆಲಸ ಮಾಡುತ್ತಾರೆ. ಚಪ್ಪಲಿ ಎಸೆಯಲು ಬಂದವನನ್ನು ಹಿಡಿದು ಧರ್ಮದೇಟು ಹಾಕಿ ಎಂದ ಯಡಿಯೂರಪ್ಪ ಕೆಂಡಾಮಂಡಲವಾದರು.

ಹೊಳೆನರಸೀಪುರ ತಾಲ್ಲೂಕಿನ ಕೋಡಿಹಳ್ಳಿ ನಿವಾಸಿ ಚಂದ್ರಶೇಖರ್ ಎಂಬ ಜೆಡಿಎಸ್ ಕಾರ್ಯಕರ್ತ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಚಪ್ಪಲಿ ಎಸೆಯಲು ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಕಳೆದ ಅನೇಕ ವರ್ಷಗಳಿಂದ ಚಂದ್ರಶೇಖರ್ ಜೆಡಿಎಸ್ ಪಕ್ಷದಲ್ಲಿ ಸಕ್ರಿಯನಾಗಿದ್ದು, ದೇವೇಗೌಡರ ಪಕ್ಕಾ ಬೆಂಬಲಿಗ ಎನ್ನಲಾಗಿದೆ. ಚಂದ್ರಶೇಖರ್ ನ ಕೃತ್ಯಕ್ಕೆ ಪ್ರತಿಕ್ರಿಯ ನೀಡಿರುವ ಅವರ ತಂದೆ ಹುಚ್ಚೇಗೌಡ, ಮಗನ ಕೃತ್ಯ ತಪ್ಪು ಎಂದು ಒಪ್ಪಿಕೊಳ್ಳುವೆ. ಅದರೆ, ಮುಖ್ಯಮಂತ್ರಿ ಉದ್ವೇಗದಿಂದ ಮಾಡುತ್ತಿದ್ದ ಭಾಷಣದಿಂದ ಕೋಪಗೊಂಡು ಈ ಕೃತ್ಯ ಮಾಡಿದ್ದಾನೆಯೇ ಹೊರತು, ದೇವೇಗೌಡರಾಗಲಿ, ಅವರ ಮಕ್ಕಳಾಗಲಿ ಈ ಕೃತ್ಯ ಎಸಗಲು ಹೇಳಿಲ್ಲ. ಯಡಿಯೂರಪ್ಪನವರು ವಿನಾಕಾರಣ ದೇವೇಗೌಡರ ಕುಟುಂಬದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹುಚ್ಚೇಗೌಡ ಹೇಳಿದರು.

ಚಂದ್ರಶೇಖರ್ ಮೇಲೆ ಕೇಸು

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶದ ಮೇಲೆ ಆರೋಪಿ ಚಂದ್ರಶೇಖರ್ ವಿರುದ್ದ ಸೆಕ್ಷನ್ 355 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅವನಿಗೆ ಶಿಕ್ಷೆ ಆಗಬೇಕು. ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುವಂತೆ ಆದೇಶ ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಖರ್ಗೆ ಖಂಡನೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ನಡೆದಿರುವ ಚಪ್ಪಲಿ ಎಸೆತದ ಪ್ರಕರಣ ಅತ್ಯಂತ ಖಂಡನೀಯ ಸಂಗತಿ. ಪ್ರಜಾಪ್ರಭುತ್ವಕ್ಕೆ ಅಪಮಾನ ಕೂಡಾ. ಇಂತಹ ಬೆಳವಣಿಗೆ ನಡೆಯದಂತೆ ತಡೆಯಬೇಕಾಗಿದೆ. ಆದ್ದರಿಂದ ತಪ್ಪಿತಸ್ಥನ ವಿರುದ್ದ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಮಲ್ಲಿಕಾರ್ಜನ ಖರ್ಗೆ ಹೇಳಿದ್ದಾರೆ. ಪ್ರಧಾನಮಂತ್ರಿ, ಅಡ್ವಾಣಿ, ಚಿದಂಬರಂ, ಜಿಂದಾಲ್ ಸೇರಿ ಅನೇಕರಿಗೆ ಈಗಾಗಲೇ ಅವಮಾನ ಮಾಡಲಾಗಿದೆ. ಇಂತವರನ್ನು ಸುಮ್ಮನೆ ಬಿಡಬಾರದು ಎಂದರು.

(ದಟ್ಸ್ ಕನ್ನಡ ವಾರ್ತೆ)

ಸಿಎಂ ಮೇಲೆ ಚಪ್ಪಲಿ ಎಸೆತ ದೇವೇಗೌಡ ಖಂಡನೆ
ಯಡಿಯೂರಪ್ಪ ಮೇಲೆ ಚಪ್ಪಲಿ ಎಸೆಯಲು ಯತ್ನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X