ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರೇ, ನಿಮ್ಮ ಓಟು ಯಾರಿಗೆ?

By Staff
|
Google Oneindia Kannada News

Vote without fail and elect right candidate
ಇದು ಸಮ್ಮಿಶ್ರ ಸರಕಾರಗಳ ಯುಗ. ನಾಲ್ಕುನಾಲ್ಕು ರಂಗಗಳು ಉದ್ಭವವಾಗಿರುವುದರಿಂದ ಏಕೈಕ ರಾಷ್ಟ್ರೀಯ ಪಕ್ಷಕ್ಕೆ ಇನ್ನೆಂದೂ ಬಹುಮತ ಪಡೆಯುವ ಸಾಧ್ಯತೆ ಬರಲಾರದು. ಸಣ್ಣಪುಟ್ಟ ಪಕ್ಷಗಳು ಅಷ್ಟೇ ಏಕೆ ಒಬ್ಬಂಟಿ ಸಂಸದನೂ ಸರಕಾರವನ್ನು ಉಳಿಸುವಲ್ಲಿ ಅಥವಾ ಉರುಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸಬಲ್ಲ. ಆದ್ದರಿಂದ ಸಮರ್ಥ ನಾಯಕನನ್ನು ನೋಡಿ ಜನ ಮತ ಹಾಕಬೇಕೆ ಹೊರತು ಪಕ್ಷ ನೋಡಿ ಅಲ್ಲ.

* ಪ್ರಸಾದ ನಾಯಿಕ

15ನೇ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕರ್ನಾಟಕ ರಾಜ್ಯ ಅಣಿಯಾಗಿದೆ. ರಾಜಕೀಯ ಪಕ್ಷಗಳು ಎಂದಿನ ಉಮೇದಿನಿಂದ ಪ್ರಚಾರ ಮಾಡಿವೆ. ಚುನಾವಣಾ ಆಯೋಗಕ್ಕೆ ಚಳ್ಳೆಹಣ್ಣು ತಿನ್ನಿಸಿ ಸಾಕಷ್ಟು ಅನಾಚಾರಗಳನ್ನೂ ಮಾಡಿವೆ. ಪಾಕಿಗಳ ಭಯೋತ್ಪಾದನೆ, ನಕ್ಸಲೀಯರ ಬೆದರಿಕೆಯ ಹಿನ್ನೆಲೆಯಲ್ಲಿ ಅತ್ಯಂತ ಸುರಕ್ಷಿತವಾಗಿ ಚುನಾವಣೆ ನಡೆಸುವ ಹುಮ್ಮಸ್ಸಿನಿಂದ ರಾಜ್ಯ ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳಿದೆ. ಆದರೆ, ಪ್ರಶ್ನೆ ಇರುವುದು ರಾಜಕಾರಣಿಗಳ ಜುಟ್ಟನ್ನು ಕೈಯಲ್ಲಿ ಹಿಡಿದುಕೊಳ್ಳುವ ಅವಕಾಶ ಗಿಟ್ಟಿಸಿರುವ ಮತದಾರ ಸಿದ್ಧನಾಗಿದ್ದಾನಾ ಎಂಬುದು?

ಈಗಂತೂ ಐದು ವರ್ಷದ ನಂತರ ಲೋಕಸಭೆ ಚುನಾವಣೆ ಬಂದಿದೆ. ಮುಂದೆಯೂ ಐದು ವರ್ಷದ ನಂತರವೇ ಬರುತ್ತದೆಂಬ ಗ್ಯಾರಂಟಿಯಿಲ್ಲ. ಮುಂದಿನದೇನೇ ಇದ್ದರೂ ಮತ ಚಲಾಯಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಚಾನ್ಸು ಮತದಾರನಿಗೆ ಸಿಕ್ಕಿದೆ. ದೇಶ ಮುನ್ನಡೆಸಲು, ನಮ್ಮನ್ನು ಸಮರ್ಥವಾಗಿ ಪ್ರತಿನಿಧಿಸಲು ಅನರ್ಹರಾಗಿರುವ ಅಭ್ಯರ್ಥಿಗಳನ್ನು ಸದೆಬಡಿಯಲು ಸಿಕ್ಕಿರುವ ಏಕ ಮತ್ತು ಏಕೈಕ ಅವಕಾಶ ಇದೊಂದೇ. ಮತದಾನ ಮಾಡುವುದು ನಮ್ಮ ಸಾಂವಿಧಾನಿಕ ಹಕ್ಕು ಮಾತ್ರವಲ್ಲ ಅದು ನಮ್ಮ ಕರ್ತವ್ಯ ಕೂಡ.

Politics is the last resort of a scoundrel ಎಂಬ ಮಾತಿದೆ. ಇದನ್ನು ನಮ್ಮ ರಾಜಕಾರಣಿಗಳು ಒಪ್ಪುತ್ತಾರೋ ಬಿಡುತ್ತಾರೋ ಒಟ್ಟಿನಲ್ಲಿ ಅಂಥ scoundrelಗಳನ್ನೆಲ್ಲ ಬದಿಗೊತ್ತಿ ಇದ್ದುದರಲ್ಲೇ ಅತ್ಯುತ್ತಮ ಉಮೇದುವಾರನನ್ನು ಪಾರ್ಲಿಮೆಂಟಿಗೆ ಆರಿಸಿ ಕಳಿಸುವ ಜವಾಬ್ದಾರಿ ಮತದಾರನ ಮೇಲಿದೆ. ಮತ ಚಲಾಯಿಸುವುದು ಸಾಂವಿಧಾನಿಕ ಹಕ್ಕು ಹೇಗೋ ಚಲಾಯಿಸದಿರುವುದು ಕೂಡ ಸಾಂವಿಧಾನಕ ಹಕ್ಕೇ. ಆದರೆ, ಅಂಥ ಕಾರ್ಯವಾಗುವುದು ಬೇಡ. ತಮ್ಮ ಕ್ಷೇತ್ರದಲ್ಲಿರುವ ಎಲ್ಲ ಅಭ್ಯರ್ಥಿಗಳು ಉಪಯೋಗಕ್ಕೆ ಬಾರದಿರುವವರು ಎಂಬ ಭಾವನೆ ಅನೇಕರಲ್ಲಿ ಬರಬಹುದು. ಆದರೆ, ಅವರಲ್ಲೊಬ್ಬ ಆಯ್ಕೆಯಾಗಿ ಹೋಗೇ ಹೋಗುತ್ತಾನೆ. ಆದ್ದರಿಂದ ಉಪಯೋಗಕ್ಕೆ ಬಾರದಿರುವವರಲ್ಲಿಯೇ ಅತ್ಯುತ್ತಮನನ್ನು ಹುಡುಕಿ ಆರಿಸುವ ಹೊಣೆ ನಮ್ಮ ಮುಂದಿದೆ.

ಸಂಸತ್ತಿಗೆ ಆಯ್ಕೆಯಾಗಿ ಹೋಗುತ್ತಿರುವವರು ಶಾಸಕರಂತಲ್ಲ. ಸಂಸದೀಯರ ಜವಾಬ್ದಾರಿ ಶಾಸಕರಿಗಿಂತಲೂ ಹಿರಿದು. ಅವರು ಇಡೀ ರಾಜ್ಯವನ್ನು ಅತ್ಯಂತ ಸಮರ್ಥವಾಗಿ ಪ್ರತಿನಿಧಿಸುವ ತಾಕತ್ತುಳ್ಳವರಾಗಿಬೇಕು. ಭಾರೀ ಕನ್ನಡ ಪ್ರೇಮಿಯಾಗಿದ್ದು ಹಿಂದಿ ಮಾತನಾಡಲು ಬಾರದಿದ್ದರೂ ಪರವಾಗಿಲ್ಲ ಕನಿಷ್ಠ ಪಕ್ಷ ಇಂಗ್ಲಿಷ್ ಮಾತನಾಡಲು ಬಾರದಿರುವವ ಅಪ್ರಯೋಜನನೇ ಸರಿ. ಇಲ್ಲಿ ಶೋಕಿ ಮಾಡಿಕೊಂಡು ಅಲ್ಲಿ ಎರಡು ಅಕ್ಷರ ಉದುರಿಸದ, ಕನ್ನಡ ನಾಡಿನ ಆಶೋತ್ತರಗಳನ್ನು ಸಮರ್ಥವಾಗಿ ಎತ್ತಿಹಿಡಿಯದ ವ್ಯಕ್ತಿ ಅಲ್ಲಿರುವುದು ಬೇಡ ಇಲ್ಲಿಯೇ ಇರಲಿ. ಎಲ್ಲ ಸಂಸದರ ರಿಪೋರ್ಟ್ ಕಾರ್ಡ್ ಕೂಡ ಜನರ ಮುಂದೆಯೇ ಇದೆ. ಯಾರು ಎಷ್ಟು ಕೆಲಸ ಮಾಡಿದ್ದಾರೆಂಬ ತಿಳಿವಳಿಕೆಯೂ ಆತನಿಗಿದೆ.

ಪಕ್ಷ ನಿಷ್ಠೆಯ ಜಮಾನಾ ಎಂದೋ ಮುಗಿದುಹೋಗಿದೆ. ಪಕ್ಷದ ವರ್ಚಸ್ಸು, ಮುಖ ನೋಡಿ ಮತಹಾಕುವ ಕಾಲವಂತೂ ಅಲ್ಲವೇ ಅಲ್ಲ. ಇಂದೇನಿದ್ದರೂ ಚುನಾಯಿತನಾಗುವ ವ್ಯಕ್ತಿ ಮುಖ್ಯ. ಒಬ್ಬ ಸಮರ್ಥ ಪಕ್ಷೇತರನೂ ಸಂಸತ್ತಿನಲ್ಲಿ ಮತ್ತು ಸರಕಾರದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಬಲ್ಲ. ಇದು ಸಮ್ಮಿಶ್ರ ಸರಕಾರಗಳ ಯುಗ. ನಾಲ್ಕುನಾಲ್ಕು ರಂಗಗಳು ಉದ್ಭವವಾಗಿರುವುದರಿಂದ ಏಕೈಕ ರಾಷ್ಟ್ರೀಯ ಪಕ್ಷಕ್ಕೆ ಇನ್ನೆಂದೂ ಬಹುಮತ ಪಡೆಯುವ ಸಾಧ್ಯತೆ ಬರಲಾರದು. ಸಣ್ಣಪುಟ್ಟ ಪಕ್ಷಗಳು ಅಷ್ಟೇ ಏಕೆ ಒಬ್ಬಂಟಿ ಸಂಸದನೂ ಸರಕಾರವನ್ನು ಉಳಿಸುವಲ್ಲಿ ಅಥವಾ ಉರುಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸಬಲ್ಲ. ಆದ್ದರಿಂದ ಸಮರ್ಥ ನಾಯಕನನ್ನು ನೋಡಿ ಜನ ಮತ ಹಾಕಬೇಕೆ ಹೊರತು ಪಕ್ಷ ನೋಡಿ ಅಲ್ಲ.

ನಮ್ಮ ಗ್ರಾಮೀಣ ಜನತೆಯಷ್ಟು ನಗರದ ಜನ ಮತದಾನಕ್ಕೆ ಸಂಬಂಧಿಸಿದಂತೆ ಜಾಗೃತರಾಗಿಲ್ಲವೆಂದೇ ಹೇಳಬೇಕು. ಹೆಚ್ಚು ಮತದಾನಗಳಾಗುವುದೇ ಗ್ರಾಮೀಣ ಪ್ರದೇಶಗಳಲ್ಲಿ. ನಯಾಪೈಸೆ ಕೆಲಸ ಮಾಡದ ಇಂಥವರಿಗೆ ಮತ ನೀಡುವುದಿಲ್ಲ ಎಂದು ದಂಗೆ ಏಳುವುದೂ ಹಳ್ಳಿಗರೇ. ಇಂದಿಲ್ಲದಿದ್ದರೆ ಇನ್ನೆಂದೂ ಇಲ್ಲ. ಪಟ್ಟಣಿಗರು ಎಚ್ಚೆತ್ತುಕೊಳ್ಳುವುದು ಒಳಿತು. ರಾಜ್ಯ ಉಚ್ಚ ನ್ಯಾಯಾಲಯ ಕೂಡ ಎಲ್ಲ ಸರಕಾರಿ ಸಂಸ್ಥೆಗಳು ಕಡ್ಡಾಯವಾಗಿ ಮತ ನೀಡಲು ರಜೆ ನೀಡಬೇಕೆಂದು ತಾಕೀತು ಮಾಡಿದೆ. ಜನ ಕೂಡ ರಜೆಯನ್ನು ಸದುಪಯೋಗಪಡಿಸಿಕೊಂಡು ಮತದಾನದ ಅರ್ಹತೆ ಪಡೆದಿರುವ ಎಲ್ಲರೂ ಜರೂರಾಗಿ ಮತ ಚಲಾಯಿಸಬೇಕು. ಇಂದಿನ ಪರಿಸ್ಥಿತಿಯಲ್ಲಿ ಒಂದೊಂದು ಮತವೂ ನಿರ್ಣಾಯಕವಾಗಬಲ್ಲದು. ನಂದೊಂದು ಮತವಿಲ್ಲದಿದ್ದರೆ ಏನೂ ವ್ಯತ್ಯಾಸವಾಗಲಾರದು ಎಂದು ಉದಾಸೀನ ತಾಳದೆ ಸಾಲುಗಟ್ಟಿ ಮತ ನೀಡಲೇಬೇಕು. ಇದು ಮತದಾರರಲ್ಲಿ ನಮ್ಮ ಕಳಕಳಿಯ ಆಗ್ರಹ ಕೂಡ.

ಈಗ ಹೇಳಿ, ನಿಮ್ಮ ಓಟು ಯಾರಿಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X