ಮತ್ತೊಂದು ವಿಶ್ವ ದಾಖಲೆಗೆ ರಮೇಶ್ ಬಾಬು ಯತ್ನ
ಬೆಂಗಳೂರು, ಏ. 13 : ಕ್ರೀಡೆ, ಉಪನ್ಯಾಸ ಮುಂತಾದ ಕ್ಷೇತ್ರಗಳಲ್ಲಿ 37 ವಿಶ್ವ ದಾಖಲೆ ಸೇರಿದಂತೆ 45ಕ್ಕೂ ಹೆಚ್ಚಿನ ದಾಖಲೆಗಳನ್ನು ಬರೆದು 'ದಾಖಲೆಗಳ ಸರದಾರ' ಎಂಬ ಬಿರುದಿಗೆ ಭಾಜನರಾಗಿರುವ ಬಹುಮುಖ ಪ್ರತಿಭೆಯ ರಮೇಶ್ ಬಾಬು ಅವರು ಏಪ್ರಿಲ್ 14ರಂದು ಮತ್ತೊಂದು ವಿಶ್ವದಾಖಲೆ ಅಳಿಸಿಹಾಕಲು ಸಜ್ಜಾಗಿದ್ದಾರೆ.
ಗಿನ್ನೆಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿಯೂ ದಾಖಲಾಗಿರುವ 'ಟಾಪ್ ಆಫ್ ದಿ ವರ್ಲ್ಡ್' ಸೆಂಟರ್ ಆಪ್ ಎಕ್ಸೆಲೆನ್ಸ್ ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿರುವ 53 ವರ್ಷದ ರಮೇಶ್ ಬಾಬು ಅವರು ಏಕಾಂಗಿಯಾಗಿ ಸುದೀರ್ಘ ಬಾಸ್ಕೆಟ್ ಬಾಲ್ ಆಡಿ 38ನೇ ವಿಶ್ವ ದಾಖಲೆ ಸೃಷ್ಟಿಸಿಲು ಪ್ರಯತ್ನಿಸಲಿದ್ದಾರೆ. 51 ನಿಮಿಷಗಳಲ್ಲಿ 206 ಬಾರಿ ಗೋಲ್ ಬಾರಿಸಿರುವುದು ರಮೇಶ್ ಅವರ ವೈಯಕ್ತಿಕ ದಾಖಲೆ. ಪ್ರಥಮ ಬಾರಿಗೆ ಈ ಆಟದಲ್ಲಿ ವಿಶ್ವ ದಾಖಲೆ ಬರೆಯಲು ರಮೇಶ್ ಬಾಬು ಕೈಹಾಕುತ್ತಲಿದ್ದಾರೆ.
ಬಳ್ಳಾರಿ ರಸ್ತೆ ಕೋಡಿಗೆಹಳ್ಳಿ ಗೇಟ್ ಬಳಿಯಿರುವ ಗ್ರೀನ್ ಕಂಟ್ರಿ ಪಬ್ಲಿಕ್ ಶಾಲೆಯಲ್ಲಿ ಏಪ್ರಿಲ್ 14ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವ ದಾಖಲೆ ಬರೆಯಲು ರಮೇಶ್ ಬಾಬು ಯತ್ನಿಸಲಿದ್ದಾರೆ. ಅಂದು ನಡೆಯುವ ಸಮಾರಂಭದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಶೋಭಾ ನಾರಾಯಣ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ತನ್ನ 20ನೇ ಆವೃತ್ತಿಯ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾರ್ಚ್ 31ರಂದು ರಮೇಶ್ ಬಾಬು ಅವರನ್ನು ಸನ್ಮಾನಿಸಿತು. ಭಾರತದಲ್ಲಿ ಅತಿ ಹೆಚ್ಚು ದಾಖಲೆ ಬರೆದಿರುವ ಅವರನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸನ್ಮಾನಿಸಿದ್ದಕ್ಕೆ ಪ್ರತಿ ಗೌರವಪೂರಕವಾಗಿ ರಮೇಶ್ 38ನೇ ವಿಶ್ವ ದಾಖಲೆ ಬರೆಯಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಆಡು ಮುಟ್ಟದ ಸೊಪ್ಪಿಲ್ಲ ಬಾಬು ಮುರಿಯದ ದಾಖಲೆಗಳಿಲ್ಲ












Click it and Unblock the Notifications