ಏಪ್ರಿಲ್ 8, 9ರಂದು ಸಮುದಾಯದತ್ತ ಶಾಲೆ
ಬೆಂಗಳೂರು, ಮಾ.29: ಮಕ್ಕಳ ಕಲಿಕೆಯ ಪ್ರಗತಿಯ ಮಾಹಿತಿಯನ್ನು ಪೋಷಕರಿಗೆ ಒದಗಿಸುವ ಸಮುದಾಯ ದತ್ತ ಶಾಲೆ ಕಾರ್ಯಕ್ರಮವು ರಾಜ್ಯಾದ್ಯಂತ ಏಪ್ರಿಲ್ 8 ಹಾಗೂ 9ರಂದು ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಜಿ. ಕುಮಾರ ನಾಯಕ್ ಅವರು ತಿಳಿಸಿದರು.
ಏಪ್ರಿಲ್ 8ರಂದು ಪ್ರಾಥಮಿಕ ಶಾಲೆಗಳಲ್ಲಿ ಹಾಗೂ ಏಪ್ರಿಲ್ 9ರಂದು ಪ್ರೌಢಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಚುನಾವಣೆ ಪ್ರಯುಕ್ತ ಸಾರ್ವಜನಿಕ ಸಮಾರಂಭವನ್ನು ರದ್ದುಪಡಿಸಲಾಗಿದ್ದು, ಕಾರ್ಯಕ್ರಮದ ಚಟುವಟಿಕೆಗಳು ತರಗತಿಯ ಕೊಠಡಿಗೆ ಮೀಸಲಾಗಿದೆ. ಶಿಕ್ಷಕರು, ವಿದ್ಯಾರ್ಥಿ, ಪೋಷಕರ ನಡುವಿನ ಸಂವಾದಕ್ಕೇ ಸೀಮಿತಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಕಲಿಕೆ, ನಡವಳಿಕೆಯನ್ನು ದಾಖಲಿಸುವ ವಿದ್ಯಾರ್ಥಿಗಳ ಡೈರಿ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿದ್ದು ಈ ವರ್ಷವೂ ಅದನ್ನು ಮುಂದುವರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಪಠ್ಯಪುಸ್ತಕ, ಸಮವಸ್ತ್ರ ವಿತರಣೆ: ಶಾಲೆಯ ಕೊನೆಯ ದಿನದಂದೇ ಈ ಬಾರಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 1ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭವಾದ ದಿನ ವಿತರಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications