ಮೈಸೂರು ಜಿಲ್ಲೆಯಲ್ಲಿ ಶೇ. 89 ರಷ್ಟು ಪ್ರಗತಿ, ಮರಿಗೌಡ
ಮೈಸೂರು, ಫೆ. 26 : ಮೈಸೂರು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಈವರೆಗೆ ಯೋಜನಾ ಕಾರ್ಯದಲ್ಲಿ ಶೇ.89ರಷ್ಟು ಸಾಧನೆಯಾಗಿದೆ. ಯೋಜನಾ ಕಾರ್ಯಕ್ರಮಗಳಿಗಾಗಿ ಪ್ರಸಕ್ತ ಸಾಲಿನಲ್ಲಿ 106.48 ಕೋಟಿ ರೂಪಾಯಿ ವೆಚ್ಚದ ಗುರಿ ಇದ್ದು, ಈವರೆಗೆ 94 ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ಮರಿಗೌಡ ಅವರು ತಿಳಿಸಿದರು.
ಅವರು ಇಂದು ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಯೋಜನೇತರ ಕಾರ್ಯಕ್ರಮಗಳಲ್ಲಿ 95.24 ಕೋಟಿ ಬಿಡುಗಡೆಯಾಗಿದ್ದು , ಈವರೆಗೆ 91.60 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹುರಿದುಂಬಿಸಿ ಪ್ರಸಕ್ತ ಸಾಲಿಗೆ ನಿಗದಿಪಡಿಸಿರುವ ಅಭಿವೃದ್ಧಿ ಗುರಿ ತಲುಪಲೇ ಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾಗಿರುವ ಅನುದಾನಗಳನ್ನು ಪೂರ್ಣವಾಗಿ ಸದ್ಬಳಕೆ ಮಾಡಬೇಕು. ಪೂರ್ಣ ವೆಚ್ಚ ಮಾಡಿ ಜನರ ನೋವು ಪರಿಹರಿಸದ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದು ಅಧ್ಯಕ್ಷ ಮರಿಗೌಡ ಎಚ್ಚರಿಕೆ ನೀಡಿದರು.
ಬರುವ ಬೇಸಿಗೆ ಭೀಕರವಾದರೆ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸೂಚನೆ ಇದೆ. ಅಂತರ್ಜಲ ತೀವ್ರವಾಗಿ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಪೂರೈಸಲು ಯಾವುದೇ ಹಣದ ಕೊರತೆ ಇಲ್ಲ. ಅಧಿಕಾರಿಗಳು ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕು. ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಜವಾಬ್ದಾರಿ ನಿರ್ವಹಿಸುವ ಹೊಣೆ ಅಧಿಕಾರಿಗಳ ಮೇಲಿದೆ. ಇದನ್ನು ಸಮರ್ಪಕವಾಗಿ ನಿರ್ವಹಿಸುವತ್ತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮರಿಗೌಡ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮೈಸೂರು ಜಿಲ್ಲಾ ಪಂಚಾಯತ್ ಬಜೆಟ್ ಮಂಡನೆ












Click it and Unblock the Notifications