7ನೇ ಏರೋ ಇಂಡಿಯಾ 2009ಗೆ ಕ್ಷಣಗಣನೆ
ಬೆಂಗಳೂರು, ಫೆ. 10 : ಐದು ದಿನಗಳ ಕಾಲ ನಡೆಯಲಿರುವ ಮಹತ್ವಾಕಾಂಕ್ಷೆಯ 7ನೇ ಏರೋ ಇಂಡಿಯಾ 2009 ಶೋ ಬುಧವಾರ ಚಾಲನೆ ದೊರೆಯಲಿದೆ. ಕೇಂದ್ರ ರಕ್ಷಣಾ ಸಚಿವ ಎ ಕೆ ಎಂಟನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವೈಭವಯುತ ಕಾರ್ಯಕ್ರಮ ವೀಕ್ಷಿಸಲು ಅರು ದೇಶಗಳ ರಕ್ಷಣಾ ಸಚಿವರು, 11 ದೇಶಗಳ ವಾಯುಪಡೆಯ ಮುಖ್ಯಸ್ಥರು, 303 ವಿವಿಧ ದೇಶಗಳ ಗಣ್ಯರು ಹಾಗೂ 600 ಕಂಪನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.
ಮುಖ್ಯಮಂತ್ರಿ ಡಾ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಕೂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 1996ರಲ್ಲಿ ಏರೋ ಇಂಡಿಯಾ ಶೋ ಆರಂಭವಾಗಿದ್ದು, ಬುಧವಾರ ನಡೆಯಲಿರುವ 5 ದಿನಗಳ ಏಷಿಯಾ ಪ್ರಿಮಿಯರ್ ಏರ್ ಶೋ ಕಳೆದ ಆರು ಶೋಗಳಿಗಿಂತ ಹೆಚ್ಚು ಆಕರ್ಷಣೆ ಜೊತೆಗೆ ಬೃಹತ್ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೀನಾ ಸೇರಿದಂತೆ 25 ದೇಶಗಳ 50 ಹಿರಿಯ ಅಧಿಕಾರಿಗಳು ಹಾಗೂ ಈ ಏರ್ ಶೋದಲ್ಲಿ ಭಾಗವಹಿಸಲಿದ್ದಾರೆ. ಮುಂಬೈ ದಾಳಿಯ ನಂತರ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಅಹ್ವಾನ ನೀಡಿಲ್ಲ ಎನ್ನುವುದು ವಿಶೇಷ. ಭಾರತದ 289 ಕಂಪನಿಗಳು, 303 ವಿದೇಶಿ ಕಂಪನಿಗಳು, 30 ವಿದೇಶ ಏರ್ ಕ್ರಾಫ್ಟ್ ತಯಾರಿಕೆ ಕಂಪನಿಗಳು ಏರ್ ಶೋ ದಲ್ಲಿ ಪಾಲ್ಗೊಳ್ಳಲಿವೆ. ಸುಮಾರು 40 ಸಾವಿರ ಚದರ ಅಡಿ ಇರುವ ಯಲಹಂಕ ವಾಯುಯಾನ ಮೈದಾನದಲ್ಲಿ ಲೋಹದ ಹಕ್ಕಿಗಳು ಕಲರವ ನಾಳೆ ಜನಮನಸೂರೆಗೊಳ್ಳಲಿದೆ.
ಭಾರಿ ಬಿಗಿ ಭದ್ರತೆ
ಭಯೋತ್ಪಾದಕರ ಕರಿನೆರಳು ಏರ್ ಶೋವನ್ನು ಕೂಡ ಬಿಟ್ಟಲ್ಲ. ಈ ಹಿನ್ನೆಲೆಯಲ್ಲಿ ಏರ್ ನಡೆಯುವ ಯಲಹಂಕ ವಾಯುಯಾನ ಮೈದಾನದ ಸುತ್ತಮುತ್ತ ಭಾರಿ ಬಿಗಿಭದ್ರತೆಯನ್ನು ನಿಯೋಜಿಸಲಾಗಿದೆ. ಒಟ್ಟು 140 ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕೇಂದ್ರೀಯ ಮೀಸಲು ಪಡೆ ಹಾಗೂ ವಿಶೇಷ ಭದ್ರತಾ ಪಡೆಯನ್ನು ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ ಎಂದು ಕೇಂದ್ರದ ರಕ್ಷಣಾ ಇಲಾಖೆ ಕಾರ್ಯದರ್ಶಿ ಪ್ರದೀಪ್ ಕುಮಾರ್ ತಿಳಿಸಿದರು.
ಅಲ್ಲದೆ 180 ಪರಿಣಿತ ಖಾಸಗಿ ಭದ್ರತಾ ಸಿಬ್ಬಂದಿ, 330 ರಕ್ಷಣಾ ಇಲಾಖೆ ತುಕಡಿಗಳು, ಮೂರು ಬೆಟಾಲಿಯನ್, 300 ಟ್ರೂಪರ್ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದರು. ಆಕಸ್ಮಿಕವಾಗಿ ದುರ್ಘಟನೆ ಸಂಭವಿಸಿದಲ್ಲಿ 10 ಹಾಸಿಗೆಯ ಆಸ್ಪತ್ರೆಯನ್ನು ಕೇಂದ್ರ ವಾಯುಯಾನ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ ಎಂದು ಹೇಳಿದರು. 1.5 ಲಕ್ಷ ಮಂದಿ ಈ ಏರ್ ಶೋ ವೀಕ್ಷಿಸುವ ಸಾಧ್ಯತೆ ಇದ್ದು, 50 ಸಾವಿರಕ್ಕೂ ಹೆಚ್ಚು ಉದ್ಯಮೆದಾರರು ಪಾಲ್ಗೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಫೆ.11ರಿಂದ ಏರೋ ಇಂಡಿಯಾ 2009 ಆರಂಭ












Click it and Unblock the Notifications