ಟಿವಿ 9 ವಾರ್ತಾ ವಾಹಿನಿ ವಿರುದ್ಧ ದೂರು
ಬೆಂಗಳೂರು, ಡಿ. 23 : ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿಕೊಂಡು ಮಕ್ಕಳು ಅಸ್ವಸ್ಥರಾಗಿದ್ದಾರೆಂಬ ವರದಿ ಬಿತ್ತರಿಸಿದ ಟಿವಿ 9 ವಿರುದ್ಧ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ದಿಯನ್ನು ದೃಡಪಡಿಸಿಕೊಳ್ಳದೇ ರಾತ್ರಿ 11 ಗಂಟೆ ಸುಮಾರಿಗೆ ಈ ವದಂತಿಯನ್ನು ಸ್ಫೋಟಕ ಸುದ್ದಿಯ ರೂಪದಲ್ಲಿ ಪ್ರಕಟಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಕಾರಣ ಟಿವಿ 9 ವಿರುದ್ಧ ಐಪಿಸಿ ಸೆಕ್ಷನ್ 505 ಹಾಗೂ 120ಬಿ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಬಿ ಕೆ ಸಿಂಗ್ ತಿಳಿಸಿದ್ದಾರೆ.
ಪೂರ್ವ ವಿಭಾಗದ ಹೆಣ್ಣೂರು, ಫ್ರೇಜರ್ ಟೌನ್, ಶಿವಾಜಿ ನಗರ, ಕೆ ಆರ್ ಪುರ, ಹಾಗೂ ಬೌರಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಹಾಗೂ ಬಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಇದರ ಜತೆಗೆ ಐಪಿಸಿ ಸೆಕ್ಷನ್ 113, 290, 427 ಕರ್ನಾಟಕ ಸಾರ್ವಜನಿಕ ಆಸ್ತಿ ಧ್ವಂಸ (ಕೆಪಿಡಿಪಿ ಕಾಯ್ದೆ) ಸೆಕ್ಷನ್ 2 ಹಾಗೂ 3ರ ಅಡಿ ಪ್ರಕರಣ ದಾಖಲಿಸಕೊಳ್ಳಲಾಗಿದೆ.
ಈ ಬಗ್ಗೆ ವಿವರಣೆ ನೀಡುವಂತೆ ಸಂಬಂಧಪಟ್ಟ ವಾಹಿನಿಯ ನಿರ್ದೇಶಕರು ಹಾಗೂ ವರದಿಗಾರರಿಗೆ ನೋಟಿಸ್ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು 'ವಿಜಯ ಕರ್ನಾಟಕ' ಕ್ಕೆ ತಿಳಿಸಿದ್ದಾರೆ. ಈ ಎಲ್ಲ ದೂರುಗಳನ್ನು ಸಾರ್ವಜನಿಕರು ನೀಡಿಲ್ಲ, ಸಂಬಂಧಪಟ್ಟ ಠಾಣಾಧಿಕಾರಿಗಳು ಸ್ವಯಂ ಪ್ರೇರಣೆಯಿಂದಲೇ ದಾಖಲಿಸಿಕೊಂಡಿದ್ದಾರೆ.
ಕಳೆದ ಭಾನುವಾರ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿತ್ತು. ಆದರೆ, ಪೋಲಿಯೊ ಲಸಿಕೆ ಹಾಕಿಸಿಕೊಂಡ ಮಕ್ಕಳ ಜೀವಕ್ಕೆ ಅಪಾಯ ಎಂಬ ಸುದ್ದಿ ದಟ್ಟವಾದ ವದಂತಿಯೊಂದು ಹರಡುತ್ತಿದ್ದಂತೆಯೇ ಗಾಬರಿಗೊಂಡ ಪೋಷಕರು ರಾತ್ರೋರಾತ್ರಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಟಿವಿ 9 ಸುದ್ದಿಯನ್ನು ದೃಢಪಡಿಸಿಕೊಳ್ಳದೇ ವರದಿ ಬಿತ್ತರಿಸಿತ್ತು.
(ಕೃಪೆ: ವಿಜಯ ಕರ್ನಾಟಕ)
ಲಸಿಕೆ ಹಾಕಿಸಿಕೊಂಡ ಮಕ್ಕಳು ಅಸ್ವಸ್ಥ?












Click it and Unblock the Notifications