ಜ.1 ರೊಳಗೆ ನಾಮಫಲಕದಲ್ಲಿ ಕನ್ನಡ ಕಡ್ಡಾಯ
ಬೆಂಗಳೂರು, ಡಿ.19: ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಸರ್ಕಾರವು ಸರ್ಕಾರಿ ವಾಹನಗಳ ಮೇಲೆ ಕನ್ನಡ ಅಕ್ಷರ ಮತ್ತು ಅಂಕಿಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಹೊರಡಿಸಿದ್ದರೂ ಇನ್ನೂ ಇದು ಪೂರ್ಣ ರೀತಿಯಲ್ಲಿ ಬಳಕೆಗೆ ಬಂದಿಲ್ಲ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಪತ್ರಿಕಾಗೋಷ್ಠಿಗೆ ತಿಳಿಸಿದರು.
ತಮ್ಮ ಪ್ರವಾಸ ಸಂದರ್ಭದಲ್ಲಿ ತಾವು ಈ ಉಲ್ಲಂಘನೆಯನ್ನು ಬಹಳಷ್ಟು ಗಮನಿಸಿದ್ದು ಈ ಸಂಬಂಧವಾಗಿ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಾನಗರಪಾಲಿಕೆ ಆಯುಕ್ತರು, ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪತ್ರ ಬರೆದಿದ್ದು ಜನವರಿ 1 ರೊಳಗೆ ಕಡ್ಡಾಯವಾಗಿ ಬದಲಾವಣೆ ಮಾಡಬೇಕೆಂದು ಸೂಚಿಸಲಾಗಿದೆ.
ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ದ ಶಿಸ್ತುಕ್ರಮ ಜರುಗಿಸಲು ಸಹಾ ತಿಳಿಸಲಾಗಿದೆ. ಇಲ್ಲವಾದಲ್ಲಿ ಮುಂದಿನ ಅಧಿವೇಶನದಲ್ಲಿ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದೆಂದು ತಿಳಿಸಿದರು. ಅಲ್ಲದೆ ಸಾರ್ವಜನಿಕರಲ್ಲಿಯೂ ಜಾಗೃತಿ ಮೂಡಿಸುವ ಮೂಲಕ ಜನಾಂದೋಳನ ಮಾಡುವುದಾಗಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮೈಮ್ ಚಂದ್ರು ಮುಖ್ಯಮಂತ್ರಿ ಚಂದ್ರು ಆಗಿದ್ದು ಹೇಗೆ?


Click it and Unblock the Notifications
