ಖುಷಿಕರ ಸ್ವರ್ಗಕ್ಕೆ ಪೋಲೀಸು ವೀಸಾ

ಏಷಿಯಾ ಖಂಡದಲ್ಲಿ, ಥಥ್ ತೆರಿಕೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಿದು ಎಂಬ ಹಣೆಪಟ್ಟಿ ಅಂಟಿಸಿಕೊಂಡ ನಗರ. ಮಂದಗಾಮಿಗಳು, ಪುರೋಗಾಮಿಗಳು, ಉಗ್ರಗಾಮಿಗಳಿಗೆ ಅನ್ನ ನೀರು ಬೀರು ಚಿಕನ್ನು, ನೂಡಲ್ಸ್ ಪಾಸ್ತ ಹಾಕಿ ಸಾಕಿ ಸಲಹುತ್ತಿರುವ ನಗರ. ಬೃಹದಾಕಾರವಾಗಿ, ಎಗ್ಗಿಲ್ಲದೆ ಬೆಳೆಯುತ್ತಿರುವ ನಗರದ ಸೀಮೆಗಳನ್ನು ಗುರುತಿಸುವುದೇ ಕಷ್ಟವಾಗಿರುವ ಕಾಲಘಟ್ಟದಲ್ಲಿ ತುತ್ತು ಕೂಳು ಮತ್ತು ತುಂಡು ಸೈಟಿಗಾಗಿ ಬದುಕನ್ನೇ ಒತ್ತೆ ಇಟ್ಟವರಂತೆ ಜೀವನ ತಳ್ಳುತ್ತಿರುವವರನ್ನು ಒಡಲಲ್ಲಿ ಕಟ್ಟಿಕೊಂಡ ಹಸ್ತಿನಾಪುರ.
ನೀವು ಏನಾದರೂ ಕರೆದುಕೊಳ್ಳಿ. ಪ್ರಗತಿಯೆಡೆಗೋ, ವಿಗತಿಯೆಡೆಗೋ ಅಂತೂ ದಿಕ್ಕಲ್ಲದ ದಿಕ್ಕಿನಲ್ಲಿ ನಾಗಾಲೋಟ ಕಿತ್ತಿರುವ ಬೆಂಗಳೂರಿನಲ್ಲಿ ವಿಮಾನ ಹಾರಿಸುವವರು ಮತ್ತು ಚಲ್ತೀಕಾ ನಾಮ್ ಗಾಡಿ ಎಂದು ಹಾಡುತ್ತಾ ಜೀವಿಸುವವರು ಏಕಕಾಲಕ್ಕೆ , ಅಕ್ಕಪಕ್ಕ ನೆಲೆಗೊಂಡಿರುವುದು ಕಟು ಸತ್ಯ. ಅವರವರ ಪ್ರಾರ್ಥನಾ ಮಂದಿರಗಳಲ್ಲಿ ಭಗವಂತನ ನಾಮಸ್ಮರಣೆ ಮಾಡಿ ಒಂದೇ ಹೋಟೆಲಿನಲ್ಲಿ ಊಟಮಾಡಿ ಒಂದೇ ರಸ್ತೆ ಮೂಲಕ ತಮ್ಮ ಮನೆ ಮಾಡುಗಳನ್ನು ಕಷ್ಟಪಡುತ್ತಾ ಹೇಗೋ ತಲುಪಿಕೊಳ್ಳುವವರ ಕರ್ಮಭೂಮಿಯಂತೂ ಹೌದು.
ಇಂಥ ನಗರದಲ್ಲಿ ಅನೇಕಾನೇಕ ತೊಂದರೆಗಳ ನಡುನಡುವೆಯೂ ಆಚರಿಸಲ್ಪಡುವ ಹಬ್ಬಗಳು ತರಹೇವಾರಿ. ಧರ್ಮರಾಯನ ಕರಗ, ಬಂದೇ ನವಾಜ್ ಉರುಸ್ಸು, ಸೆಂಟ್ ಮೇರಿ ಹಬ್ಬಗಳಲ್ಲದೆ ಜಾತಿ ಧರ್ಮದ ಎಲ್ಲೆಗಳನ್ನು ದಾಟಿ ಎಲ್ಲರೊಳಗೊಂದಾಗುವ, ಹೊಸ ವರ್ಷವನ್ನು ಬರಮಾಡಿಕೊಳ್ಳುವ ಹಬ್ಬದ ಸಂಭ್ರಮ ಭಾರೀ ಜೋರು. ಪ್ರಾಯವಿದ್ದಾಗ ಮಜಾಮಾಡಿ ನಿವೃತ್ತಿಪಡೆದ ನಂತರದ ದಿನಗಳಲ್ಲಿ ಹೊಸವರ್ಷದ ಹಬ್ಬಾಚರಣೆ ಹೆಸರೆತ್ತಿದರೆ ಮೂಗು ಮುರಿಯುವ ಹಿರೀಕರ ಮಕ್ಕಳೂ ಸಹ ಎಗ್ಗಿಲ್ಲದ ಸಂತೋಷಕ್ಕೆ ಸಿದ್ಧರಾಗುವುದು ಇಲ್ಲಿ ಮಾಮೂಲು. ಒಟ್ಟಾರೆ 2008ರ ಅಂತ್ಯ ಮತ್ತು 2009ರ ಶುಭಾರಂಭಕ್ಕೆ ನಾಂದಿಹಾಡಲು ಬೆಂಗಳೂರು ಗೆಜ್ಜೆಕಟ್ಟಿಕೊಳ್ಳುತ್ತಿದೆ.
ಮುಖ್ಯವಾಗಿ ಯುವಜನಾಂಗಕ್ಕೆ ಒಂದು ಹೆದರಿಕೆ ಇತ್ತು. ಭಯೋತ್ಪಾದನೆಯ ಈ ಪರ್ವಕಾಲದಲ್ಲಿ ಪೊಲೀಸರು ತಮ್ಮ ಸಂತೋಷಕ್ಕೆ ಅಡ್ಡಿಯಾಗುತ್ತಾರೆ ಎನ್ನುವುದೇ ಅವರ ಅಂಜಿಕೆಗೆ ಕಾರಣ. ಆದರೆ, ಬೆಂಗಳೂರು ಪೊಲೀಸರು ಹೊಸವರ್ಷದ ಸಂಭ್ರಮಕ್ಕೆ ಬ್ರೇಕ್ ಹಾಕುವುದಿಲ್ಲ ಎಂದು ಘೋಷಿಸಿರುವುದರಿಂದ ನ್ಯೂ ಇಯರ್ ಪಾರ್ಟಿ ಆಯೋಜಿಸುವವರಿಗೆ ಹೊಸ ಉತ್ಸಾಹ ಬಂದಿದೆ.
ಪೊಲೀಸರ ಪತ್ರಿಕಾ ಹೇಳಿಕೆ ಪ್ರಕಾರ ಹೊಸ ವರ್ಷ ಸಂಭ್ರಮಕ್ಕೆ ಪೊಲೀಸರು ಕತ್ತರಿ ಹಾಕುವುದಿಲ್ಲ. ಪ್ರತಿದಿನ 11 ಗಂಟೆಯಾದರೂ ಮನೆಗೆ ಹೋಗದ ಹೈಕಳು ಡಿ 31ರಂದು ಮಾತ್ರ ರಾತ್ರಿ 1 ಗಂಟೆಯವರೆಗೂ ತಿಂದು, ಕುಡಿದು, ಕುಪ್ಪಳಿಸಬಹುದು. ಆದರೆ ಒಂದು ಮಾತು. ನೀವು ಕುಪ್ಪಳಿಸುವಾಗ ಹೆಚ್ಚು ಶಬ್ದ ಮಾಡಬಾರದು, ಅಕ್ಕಪಕ್ಕದವರಿಗೆ ತೊಂದರೆಯಾಗಬಾರದು ಎಂಬ ಎಚ್ಚರಿಕೆ ಮಾತುಗಳೂ ಇವೆ. ಮಿತಿಮೀರಿದರೆ ಜೈಲಿನಲ್ಲಿ ವಾರ್ಡ್ ಗಳು ಖಾಲಿ ಇದೆ ಎನ್ನುವ ಸಂಗತಿ ಅಂಕೆ ತಪ್ಪಿನಡೆಯುವವರಿಗೆ ಗೊತ್ತಿರಲಿ.
ಕಳೆದ ಬಾರಿಯಂತೆ ಡಿಸೆಂಬರ್ 31ರ ರಾತ್ರಿ 12.30ರವರೆಗೆ ಮದ್ಯ ಸೇವಿಸಲು ಮತ್ತು ನರ್ತಿಸಲು ಅವಕಾಶ ನೀಡಲಾಗಿದೆ. ಹೊಸ ವರ್ಷದ ದಿನ ಹೋಟೆಲ್, ಕ್ಲಬ್ ನಲ್ಲಿ ನರ್ತಿಸಲೂ ಅನುಮತಿ ನೀಡಲಾಗಿದೆ. ಹೊಸ ವರ್ಷದ ಆಚರಣೆಗಾಗಿ ಹೋಟೆಲು, ರೆಸಾರ್ಟ್ ಮತ್ತು ಸಖತ್ ಖಾಸಗಿ ಪಾರ್ಟಿ ಆಚರಿಸುವವರು ಅಬಕಾರಿ ಇಲಾಖೆಯಿಂದ ವಿಶೇಷ ಅನುಮತಿ ಪಡೆದುಕೊಳ್ಳಬೇಕು ಎಂಬುದು ನಿಯಮ.
ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ ಮತ್ತು ಆಸುಪಾಸಿನ ಪ್ರದೇಶದಲ್ಲಿ ಹೊಸ ವರ್ಷ ಆಚರಣೆಗೆ ಗುಂಪು ಸೇರುವ ಯುವಕ ಮತ್ತು ಯುವತಿಯರಿಗೆ ನಗರದ ಪೊಲೀಸರು ಯಾವುದೇ ರೀತಿ ಅಡ್ಡಿಪಡಿಸುವುದಿಲ್ಲವಂತೆ. ಮಾತ್ರವಲ್ಲ, ಶಾಂತಿಪಾಲನೆಗೆ ಎಲ್ಲರೂ ತಮ್ಮೊಂದಿಗೆ ಸಹಕರಿಸಬೇಕೆಂದು ಕೋರಿಕೊಳ್ಳತ್ತಾ ಹಬ್ಬದ ಸಂಭ್ರಮಕ್ಕೆ ದಿಬ್ಬಣ ಹೊರಡಲು ನಿಮಗೆಲ್ಲ ಅನುಮತಿಕೊಟ್ಟಿದ್ದಾರೆ ರಾತ್ರಿ ಹೊತ್ತು ಗಸ್ತು ಹೊಡೆಯುವ ಶಸ್ತ್ರಧಾರಿ ಪೊಲೀಸರು.












Click it and Unblock the Notifications