ವಿಶ್ವಸಂಸ್ಥೆ ಆದೇಶವನ್ನು ಕಡೆಗಣಿಸಿದ ಪಾಕ್ :ರೈಸ್
ನ್ಯೂಯಾರ್ಕ್, ಡಿ. 17 : ಭಯೋತ್ಪಾದಕರ ಬಗ್ಗೆ ಮೃದುಧೋರಣೆ ತಾಳಿರುವ ಪಾಕಿಸ್ತಾನದ ಕ್ರಮಕ್ಕೆ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಆದೇಶವನ್ನು ಕಡೆಗಣಿಸಿರುವ ಪಾಕ್ ಸರ್ಕಾರವನ್ನು ಅಮೆರಿಕ ಕಟುವಾಗಿ ಟೀಕಿಸಿದೆ.
ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಜಾ ರೈಸ್, ಭಯೋತ್ಪಾದನೆ ಕುರಿತು ಪಾಕ್ ಪ್ರಧಾನಮಂತ್ರಿ ಯೂಸೆಫ್ ರಾಜಾ ಗಿಲಾನಿ ಮತ್ತು ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಾಕ್ ಧಾರ್ಮಿಕ ದತ್ತಿ ಸಂಸ್ಥೆಯಾಗಿರುವ ಜಮಾತೆ ಉದ್ ದವಾ ಈಗಾಗಲೇ ಭಯೋತ್ಪಾದಕ ಸಂಘಟನೆ ಎಂದು ಸಾಬೀತಾಗಿದೆ ಎಂದು ರೈಸ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೊಯ್ಬಾದೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ತನಿಖೆಯಿಂದ ತಿಳಿದು ಬಂದಿದೆ. ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ಇದ್ದರೂ ಕೂಡಾ ಈ ಸಂಘಟನೆಗಳ ಬಗ್ಗೆ ಪಾಕ್ ಸರ್ಕಾರ ಸೂಕ್ತ ಕ್ರಮಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ವಿಶ್ವಸಂಸ್ಥೆಯೇ ಈ ಸಂಘಟನೆಯನ್ನು ಭಯೋತ್ಪಾದನೆ ಸಂಘಟನೆ ಎಂದು ಹೇಳಿದೆ. ಕೂಡಲೇ ಇದನ್ನು ನಿಷೇಧಿಸಿ ಹಾಗೂ ಈ ಸಂಘಟನೆಗೆ ಸಂಬಂಧಿಸಿದ ಆಸ್ತಿ ಪಾಸ್ತಿ ಹಾಗೂ ಬ್ಯಾಂಕ್ ಅಕೌಂಟ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಿತ್ತು. ಜತೆಗೆ ಈ ಸಂಘಟನೆ ಕಾರ್ಯಕರ್ತರಿಗೆ ವೀಸಾ ನೀಡಬಾರದು ಎಂದು ಕಟ್ಟಪ್ಪಣೆ ವಿಧಿಸಿದೆ. ವಿಶ್ವಸಂಸ್ಥೆಯ ಎಲ್ಲ ನಿಯಮಗಳನ್ನೂ ಪಾಕ್ ಸರ್ಕಾರ ಗಾಳಿಗೆ ತೂರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದರೆ ಪಾಕ್ ವಿನಾಕಾರಣ ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಭಯೋತ್ಪಾದನೆ ನಿಗ್ರಹ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಪಾಕ್ ಧೋರಣೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುವುದು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ಉಗ್ರರು, ಅಕ್ರಮ ವಲಸೆ ತಡೆಗೆ ಒಂದೇ ಆಸ್ತ್ರ
ಕಸಬ್ ಪ್ರಕರಣ ಕೈಗೆತ್ತಿಕೊಂಡ ವಕೀಲ ಸರೋಗಿ ?












Click it and Unblock the Notifications