ಪಾಕ್ ವಿರುದ್ಧ ಭಾರತ ಸಮರ ತಪ್ಪಿಲ್ಲ:ಒಬಾಮಾ
ವಾಷಿಂಗ್ ಟನ್, ಡಿ. 8 : ಭಾರತ ತನ್ನ ರಾಷ್ಟ್ರದ ಐಕ್ಯತೆ ಹಾಗೂ ಸಮಗ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಮೆರಿಕದನೂತನ ಅಧ್ಯಕ್ಷ ಬರಾಕ್ ಒಬಾಮಾ ಅಭಿಪ್ರಾಯಪಟ್ಟಿದ್ದಾರೆ. ಉಗ್ರರು ಮತ್ತು ಉಗ್ರರ ಮೇಲೆ ಮೃದುಧೋರಣೆ ತಾಳಿರುವವರ ವಿರುದ್ಧ ಸಮರ ಸಾರುವುದರಲ್ಲಿ ಯಾವ ಅಪರಾಧವೂ ಕಂಡುಬರುವದಿಲ್ಲ ಎನ್ನುವ ಮೂಲಕ ಒಬಾಮಾ ಭಾರತ ಪರ ನಿಂತಿದ್ದಾರೆ. ಈ ಮೂಲಕ ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ತೀಕ್ಷ್ಣ ಸಂದೇಶವನ್ನು ರವಾನಿಸಿದ್ದಾರೆ.
ಅಮೆರಿಕದ ವಾಹಿನಿಯೊಂದರ ನೇರ ಪ್ರಸಾರ ಮಾತನಾಡುತ್ತಿದ್ದ ಅವರು, ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಲು ಉದ್ದೇಶಿಸಿದರೆ, ತಮ್ಮ ದೇಶದ ಮೇಲೆ ಆಗುತ್ತಿರುವ ಉಗ್ರರ ದಾಳಿಯೇ ಕಾರಣ ಹೊರತು ಬೇರೆ ಏನೂ ಅಲ್ಲ. ಪಾಕಿಸ್ತಾನದಲ್ಲಿ ಉಗ್ರರಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದರೂ ಪಾಕಿಸ್ತಾನ ಸೂಕ್ತ ಕ್ರಮಕೈಗೊಳ್ಳುವಲ್ಲಿ ಹಿಂದೇಟು ಹಾಕುವುದು ಸರಿಯಲ್ಲ ಎಂದು ಒಬಾಮಾ ಸ್ಪಷ್ಟಪಡಿಸಿದ್ದಾರೆ.
ಭಯೋತ್ಪಾದನೆ ದಾಳಿ ನಡೆದಾಗ ಆಯಾ ದೇಶಗಳು ತಮ್ಮ ತಮ್ಮ ರಕ್ಷಣೆ ಮಾಡಿಕೊಳ್ಳುವುದರಲ್ಲಿ ಯಾವ ತಪ್ಪು ಕಾಣಿಸದು ಎಂದಿರುವ ಅವರು, ಭಯೋತ್ಪಾದನೆ ಹತ್ತಿಕ್ಕುವಲ್ಲಿ ಪಾಕಿಸ್ತಾನ ಕೈಜೋಡಿಸುವುದಾಗಿ ಹೇಳಿದೆ. ಪಾಕ್ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಈಗಾಗಲೇ ಈ ಬಗ್ಗೆ ಚಿಂತನೆ ನಡೆಸಿರುವುದಾಗಿ ತಮಗೆ ತಿಳಿಸಿದ್ದಾರೆ ಎಂದರು. ಉಗ್ರರನ್ನು ಮಟ್ಟಹಾಕಲು ಭಾರತದೊಂದಿಗೆ ಅಮೆರಿಕದ ಕೈಜೋಡಿಸಿದ್ದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಹಾಗೂ ಸೆನೆಟರ್ ಜಾನ್ ಮೆಕೇನ್ ಉಗ್ರ ವಿರುದ್ಧ ಕ್ರಮಗೊಳ್ಳಬೇಕು ಎಂದು ಸ್ಪಷ್ಟವಾದ ಸೂಚನೆ ನೀಡಿದ್ದರು. ಕಳೆದ ನ. 28 ರಂದು ಮುಂಬೈ ಭಯೋತ್ಪಾದನೆಯಲ್ಲಿ 195 ಮಂದಿ ಮೃತಪಟ್ಟಿದ್ದು, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications