ವೇಗವಾಗಿ ತಿನ್ನುವ ಸ್ಪರ್ಧೆಯಲ್ಲಿ ಟೆಕ್ಕಿ ಸಾವು
ಗುರುಗಾಂವ್, ನ. 20 : ನಗರದಲ್ಲಿ ನೋಕಿಯಾ-ಸೀಮನ್ಸ್ ಸಂಸ್ಥೆ ಏರ್ಪಡಿಸಿದ್ದ ಸಿಹಿ ತಿನ್ನುವ ಸ್ಪರ್ಧೆಯಲ್ಲಿ ಕೂಳುಬಾಕ ಟೆಕ್ಕಿಯೊಬ್ಬ ವಿಪರೀತ ತಿಂದು ಅಸುನೀಗಿರುವ ಘಟನೆ ಬುಧವಾರ ಸಂಭವಿಸಿದೆ. ದೆಹಲಿ ಮೂಲದ 22 ವರ್ಷದ ಸೌರವ್ ಸಬ್ಬರವಾಲ್ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಎಲ್ಲರನ್ನೂ ಮೀರಿಸಿ ಅತಿ ವೇಗದಲ್ಲಿ ತಿಂದು ತನ್ನ ಜೀವಕ್ಕೇ ಅಪಾಯ ತಂದುಕೊಂಡ ಅಪರೂಪದ ಘಟನೆಯಾಗಿದೆ.
ಸ್ಪರ್ಧೆ ಮುಗಿಸಿ ಮಧ್ಯಾಹ್ನ 1.30ರ ಸುಮಾರಿಗೆ ಸ್ನಾನದ ಕೊಠಡಿಗೆ ಹೋದ ಸೌರವ್ ಎಷ್ಟು ಹೊತ್ತಾದರೂ ಹೊರಗೆ ಬರದಿದ್ದಾಗ ಸಹ ಉದ್ಯೋಗಿಗಳು ಒಳಗೆ ಹೋಗಿ ನೋಡಿದಾಗ ಆತ ಜ್ಞಾನ ತಪ್ಪಿ ಬಿದ್ದು ಹೋಗಿದ್ದ. ಕೂಡಲೇ ಸಮೀಪದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದರು, ವೈದ್ಯರು ತಮ್ಮ ಪ್ರಯತ್ನ ನಡೆಸಿದರಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಸೌರವ್ ಸಬ್ಬರಲಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದ.
ದುರಂತದ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯ ಡಾ.ಸುಶುಮ್ ಶರ್ಮ, ಸ್ಪರ್ಧೆಯಲ್ಲಿ ಅತಿ ವೇಗದಲ್ಲಿ ತಿನ್ನುತ್ತಿದ್ದಾಗ ಆಹಾರ ವಾಯುನಾಳದಲ್ಲಿ ಸೇರಿಕೊಂಡು ಈ ಸ್ಪರ್ಧಾಳು ಸಾವನ್ನಪ್ಪಿದ್ದಾನೆ ಎಂದರು. ಸಮೀಪದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸೌರವ್ ತಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಪ್ರಬಂಧಕರಾಗಿ ಕೆಲಸ ಮಾಡುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications