ಬಳ್ಳಾರಿಯಲ್ಲಿ 'ಸುವರ್ಣ ಆರೋಗ್ಯ ಚೈತನ್ಯ' ಜಾರಿ
ಬಳ್ಳಾರಿ, ಆ.20: ಈ ವರ್ಷಬಳ್ಳಾರಿ ಜಿಲ್ಲೆಯ 1,900 ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಒಟ್ಟು 4.5 ಲಕ್ಷ ವಿದ್ಯಾರ್ಥಿಗಳು 'ಸುವರ್ಣ ಆರೋಗ್ಯ ಚೈತನ್ಯ' ಯೋಜನೆಯಡಿ ಆರೋಗ್ಯ ತಪಾಸಣೆಗೆ ಒಳಗಾಗಲಿದ್ದಾರೆ.
ಯೋಜನೆಯನ್ನು ಉದ್ಘಾಟಿಸಿದ ಪ್ರವಾಸೋದ್ಯಮ ಸಚಿವ ಜಿ.ಜನಾರ್ಧನ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಯೋಜನೆ ಆರೋಗ್ಯವಂತ ಸಮಾಜವನ್ನು ನಿರ್ಮಿಸುವುದರ ಜೊತೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಚಿಕಿತ್ಸೆಗೆ ನೆರವಾಗಲಿದೆ ಎಂದರು.
ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಸೀಮಿತವಾಗಿದ್ದ ಈ ಯೋಜನೆಯನ್ನು ಈಗ ಖಾಸಗಿ ಶಾಲೆಗಳಿಗೂ ವಿಸ್ತರಿಸಲಾಗಿದೆ, ಈ ಯೋಜನೆ ಖಂಡಿತ ಯಶಸ್ವಿಯಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪುಷ್ಪರೇಖಾ ವಿಶ್ವಾಸ ವ್ಯಕ್ತಪಡಿಸಿದರು. ಸುವರ್ಣ ಆರೋಗ್ಯ ಚೈತನ್ಯ ಯೋಜನೆಯ ಫಲ ಎಲ್ಲ ವಿದ್ಯಾರ್ಥಿಗಳಿಗೂ ಲಭಿಸುವಂತೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಕಾಳಜಿ ವಹಿಸಬೇಕು ಎಂದು ಉಪ ಆಯುಕ್ತ ಬಿ.ಶಿವಪ್ಪ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನುಶಾಸಕ ಜಿ.ಸೋಮಶೇಖರ ರೆಡ್ಡಿ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಂತೋನಿ ಮೆಂಡೋಂಕಾ ಮಾತನಾಡುತ್ತಾ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುವುದರ ಜೊತೆಗೆ ಅಗತ್ಯವಾದರೆ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications