ಬೀಜಿಂಗ್‌ಗೆ ಪ್ರವಾಸ ಹೊರಟ ಸೋನಿಯಾಗಾಂಧಿ
ನವದೆಹಲಿ, ಆ. 7 : ಶುಕ್ರವಾರದಿಂದ ಅಧಿಕೃತವಾಗಿ ಆರಂಭವಾಗಲಿರುವ ಬೀಜಿಂಗ್ ಒಲಿಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಗುರುವಾರ ಬೀಜಿಂಗ್ ಗೆ ತೆರಳಿದರು.
ಚೀನಾ ಕಮ್ಯುನಿಸ್ಟ್ ಪಕ್ಷದ ಮುಖಂಡರು ಸೋನಿಯಾಗಾಂಧಿ ಅವರಿಗೆ ವಿಶೇಷ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕ ಅವರ ಪತಿ ರಾಬರ್ಟ್ ವದ್ರಾ ಹಾಗೂ ವಿದೇಶಾಂಗ ಇಲಾಖೆ ರಾಜ್ಯ ಸಚಿವ ಆನಂದ ಶರ್ಮಾ ಅವರು ಸೋನಿಯಾ ಗಾಂಧಿ ಅವರೊಂದಿಗೆ ಇಂದು ಬೆಳಗ್ಗೆ ಚೀನಾಕ್ಕೆ ಪ್ರವಾಸ ಬೆಳೆಸಿದರು.
ಭವ್ಯವಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚೀನಾದ ಕಮ್ಯುನಿಸ್ಟ್ ಮುಖಂಡರು ಸೋನಿಯಾಗಾಂಧಿಯವರನ್ನು ಮಾತ್ರ ಆಹ್ವಾನಿಸಿದ್ದಾರೆ. ಆದರೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಅಹ್ವಾನ ನೀಡದಿರುವುದು ಅಚ್ಚರಿಯ ಸಂಗತಿಯಾಗಿದೆ. ಅಲ್ಲದೇ ಭಾರತ-ಅಮೆರಿಕ ಪರಮಾಣು ಒಪ್ಪಂದ ಅಂಕಿತ ಬೀಳುವ ಹಂತದಲ್ಲಿರುವ ಈ ಸಂದರ್ಭದಲ್ಲಿ ಚೀನಾ ದೇಶದ ಮುಖಂಡರು ಸೋನಿಯಾಗಾಂಧಿ ಅವರಿಗೆ ವಿಶೇಷ ಅಹ್ವಾನ ನೀಡಿರುವ ಕಾರಣ ಎಲ್ಲರ ಚಿತ್ತ ಅತ್ತ ನೆಟ್ಟಿದೆ.
ಮೂರು ದಿನಗಳ ಕಾಲದ ಪ್ರವಾಸದಲ್ಲಿ ಚೀನಾ ಪ್ರಧಾನಮಂತ್ಕಿ ಹೂ ಜಿಂಟಾವೊ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಕಾರ್ಯಕ್ರಮವಿದೆ. ದ್ವಿರಾಷ್ಟ್ರಗಳ ಮಹತ್ವದ ಚರ್ಚೆಯಲ್ಲಿ ಇಂಡೋ-ಸಿಯಾಚಿನ್ ಗಡಿ ಸಮಸ್ಯೆಯ ಬಗ್ಗೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಒಲಂಪಿಕ್ಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್, ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ, ಬ್ರಿಟನ್ ಪ್ರಧಾನಿ ಗಾರ್ಡನ್ ಬ್ರೌನ್ ಅವರು ಭಾಗವಹಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications