ನ್ಯಾಕ್ ನಿರ್ದೇಶಕರಾಗಿ ರಂಗನಾಥ್ ನೇಮಕ
ಬೆಂಗಳೂರು, ಜು. 31 : ದೇಶದ ಬಹುದೊಡ್ಡ ವಿಶ್ವವಿದ್ಯಾಲಯ ಎಂಬ ಖ್ಯಾತಿ ಹೊತ್ತಿರುವ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಎ.ರಂಗನಾಥ್ ಅವರು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ(ನ್ಯಾಕ್) ನಿರ್ದೇಶಕರಾಗಿ ನೇಮಕವಾಗಿದ್ದಾರೆ. ವಿ.ಎಸ್.ಪ್ರಸಾದ್ ಅವರು ನಿವೃತ್ತಿಯ ನಂತರ ಈ ಸ್ಥಾನ ಕಳೆದ ಆರು ತಿಂಗಳ ಹಿಂದಿನಿಂದ ಖಾಲಿಯಿತ್ತು. ಎಚ್.ಎ.ರಂಗನಾಥ್ ನ್ಯಾಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಥಮ ಕನ್ನಡಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯಾಕ್ ನಿರ್ದೇಶಕರ ಹುದ್ದೆಗೆ ನೇಮಕ ಆಗಿರುವ ಕುರಿತು ವಿಶ್ವವಿದ್ಯಾಲಯ ಅನುದಾನ ಅಯೋಗದಿಂದ ನನಗೆ ಮಾಹಿತಿ ಬಂದಿದೆ. ಇದನ್ನು ಬುಧವಾರ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೂ ತಿಳಿಸಿದ್ದೇನೆ. ಅವರು ಶುಭ ಕೋರಿ ಮುಂದಿನ ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ನನಗೆ ಬಿಟ್ಟಿದ್ದಾರೆ ಎಂದು ರಂಗನಾಥ್ ತಿಳಿಸಿದರು. ವಿಶ್ವವಿದ್ಯಾಲಯ ಕುಲಪತಿ ಸ್ಥಾನದಲ್ಲಿರುವ ಕಾರಣ ಸಾಕಷ್ಟು ಜವಾಬ್ದಾರಿಯಿದೆ. ಆದ್ದರಿಂದ ಸದ್ಯಕ್ಕೆ ನಾನು ರಾಜೀನಾಮೆ ನೀಡಿಲ್ಲ. ಕೆಲ ನಿಯಮಗಳನ್ನು ಅನುಸರಿಸಬೇಕಾದ ಕಾರಣ ಸಮಯ ಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ನಾಗರಭಾವಿಯಲ್ಲಿ ನ್ಯಾಕ್ ಕೇಂದ್ರ ಕಚೇರಿಯನ್ನು ಹೊಂದಿದೆ. ಸದ್ಯ ಹಂಗಾಮಿ ನಿರ್ದೇಶಕರಾಗಿ ಡಾ.ರವೀಂದ್ರ ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಕ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ. ಗೋವರ್ಧನ್ ಮೆಹ್ತಾ ನೇತೃತ್ವದ ಶೋಧನಾ ಸಮಿತಿ ರಂಗನಾಥ್ ಅವರ ಹೆಸರನ್ನು ಸೂಚಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications