ಬಿಜೆಪಿ 10 ಸಚಿವರ ಮೇಲೆ ಕ್ರಿಮಿನಲ್ ಆರೋಪ
ಬೆಂಗಳೂರು, ಜು. 25 : ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟದಲ್ಲಿ ಶೇ. 30 ರಷ್ಟು ಜನ ಕ್ರಿಮಿನಲ್ ಅಪರಾಧಿ ಹಿನ್ನಲೆಯುಳ್ಳವರಿದ್ದಾರೆ. ಸಂಪುಟದ 10 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ.
8 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇಬ್ಬರು ಸಚಿವರ ವಿರುದ್ಧ ಇರುವ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಗುರುವಾರ ವಿಧಾನಸಭೆಯಲ್ಲಿ ಮಲ್ಲನಗೌಡ ನಾಡಗೌಡ ಅವರ ಪ್ರಶ್ನೆಗೆ ಗೃಹ ಸಚಿವ ವಿ.ಎಸ್.ಆಚಾರ್ಯ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು, ಪ್ರವಾಸಾಧ್ಯಮ ಸಚಿವ ಜನಾರ್ದನ ರೆಡ್ಡಿ, ಇಂಧನ ಸಚಿವ ಕೆ.ಎಸ್.ಈಶ್ವರಪ್ಪ, ಆಹಾರ ಮತ್ತು ನಾಗರಿಕ ಖಾತೆ ಸಚಿವ ಎಚ್.ಹಾಲಪ್ಪ, ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ, ಜವಳಿ ಸಚಿವ ಗೂಳಿಹಟ್ಟಿ ಶೇಖರ್, ಸಮಾಜ ಕಲ್ಯಾಣ ಸಚಿವ ಜಿ.ಸುಧಾಕರ್, ವಿಜ್ಞಾನ ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಣ್ಣ ಉಳಿತಾಯ ಖಾತೆ ಸಚಿವ ಶಿವನಗೌಡ ನಾಯಕ ಕ್ರಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಸಚಿವ ಮಹಾಶಯರು.
ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ 10 ಪ್ರಕರಣಗಳು ದಾಖಲಾಗಿವೆ. ಗಣಿಧಣಿ ಜನಾರ್ದನ ರೆಡ್ಡಿ ವಿರುದ್ಧ ಆರು ಪ್ರಕರಣಗಳಿವೆ. ಡಿ. ಸುಧಾಕರ್ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಕೃಷ್ಣಯ್ಯ ಶೆಟ್ಟಿ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿದ್ದು, ಎಲ್ಲವೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಾಗಿವೆ. ಗೂಳಿಹಟ್ಟಿ ಶೇಖರ್ ವಿರುದ್ಧ ಎರಡು ಮತ್ತು ಮುರುಗೇಶ್ ನಿರಾಣಿ ವಿರುದ್ಧ ಒಂದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications