ಅಣು ಒಪ್ಪಂದ ದೇಶ ದ್ರೋಹದ ಕೆಲಸ: ಕಾರಟ್

ನವದೆಹಲಿ, ಜು. 10 : ಅಣು ಒಪ್ಪಂದ ದೇಶಕ್ಕೆ ಮಾರಕ. ಯುಪಿಎ ಸರ್ಕಾರ ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸದೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಯಾವುದೇ ಕಾಯಿದೆ, ಒಡಂಬಡಿಕೆಗಳು ಜಾರಿಗೆ ತರಬಾರದು ಎಂದು ಗೊತ್ತಿದ್ದರೂ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ. ಜೊತೆಗೆ ದೇಶ, ಜನತೆಗೆ ದ್ರೋಹ ಎಸಗಿದ್ದಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣು ಒಪ್ಪಂದದ ಬಗ್ಗೆ ಸಾರ್ವಜನಿಕವಾಗಿ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಅನೇಕ ಬಾರಿ ಮನವಿ ಮಾಡಿಕೊಂಡರೂ, ಗಣನೆಗೆ ತಗೆದುಕೊಂಡಿಲ್ಲ ಎಂದು ಖಾರವಾಗಿ ನುಡಿದರು. ಒಪ್ಪಂದಕ್ಕೆ ಏಕಾಏಕಿ ಸಹಿ ಹಾಕಿರುವುದರ ಹಿಂದೆ ಇರುವ ಮರ್ಮವಾದರೂ ಏನು ಎಂದು ಕೇಳಿದ್ದಾರೆ.

ಕೇಂದ್ರದ ಯುಪಿಎ ಸರ್ಕಾರಕ್ಕೆ ಸದನದಲ್ಲಿ ಬಹುಮತವಿಲ್ಲ. ಆದರೂ ಕೂಡಾ ಒಪ್ಪಂದಕ್ಕೆ ಸಹಿ ಹಾಕಿರುವುದು ಕಾನೂನು ಪ್ರಕಾರ ಯಾವುದೇ ಮಾನ್ಯತೆಯಿಲ್ಲ. ಪ್ರಧಾನಮಂತ್ರಿ ಅವರಿಗೆ ಒಪ್ಪಂದದ ಬಗ್ಗೆ ಅಷ್ಟೊಂದು ಕಾಳಜಿ ಇದ್ದಲ್ಲಿ ಸದನದಲ್ಲಿ ಬಹಮತ ಸಾಬೀತು ಪಡಿಸಿ ಮುಂದುವರೆಯಲಿ ಎಂದು ಸವಾಲು ಹಾಕಿದರು. ಬುಧವಾರ ಮಧ್ಯಾಹ್ನದವರೆಗೆ ಒಪ್ಪಂದ ಪರಿಶೀಲನೆಯಲ್ಲಿದೆ ಎಂದು ಹೇಳುತ್ತಿದ್ದ ಅವರು, ರಾತ್ರಿ ಆಗುತ್ತಿದ್ದಂತೆಯೇ ಅಧಿಕೃತವಾಗಿ ಸಹಿ ಹಾಕಿರುವುದು ಎಷ್ಟು ಸರಿ. ಸಭೆಯ ನಂತರ ಅಮೇರಿಕಾ ಅಧ್ಯಕ್ಷ ಜಾರ್ಜ ಬುಷ್ ಜತೆಗೆ ಮಾತನಾಡಿರುವುದು ಯಾಕೆ ಎಂದು ಕಾರಟ್ ಪ್ರಶ್ನಿಸಿದ್ದಾರೆ.

ಅಮೆರಿಕದ ಒತ್ತಡದ ಹಿನ್ನಲೆಯಲ್ಲಿ ಪ್ರಧಾನಿ ಸಿಂಗ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಆರೋಪಿಸಿದ ಅವರು, ದೇಶದ ಜನರ ಹಿತವನ್ನು ಕತ್ತಲೆಯಟ್ಟು ಕೌಟುಂಬಿಕ ವ್ಯವಹಾರದಂತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಿಡಿಕಾರಿದರು. ಪರಮಾಣು ಒಪ್ಪಂದದ ಸಂಪೂರ್ಣ ವರದಿಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿ ಎಂದು ಅನೇಕ ಸಲ ಒತ್ತಾಯಿಸಲಾಗಿತ್ತು, ಈ ಒಪ್ಪಂದದ ಸಮಗ್ರ ವರದಿಯನ್ನು ಅಮೆರಿಕದ ವೆಬ್ ಸೈಟ್ ಮೂಲಕ ತಿಳಿದುಕೊಳ್ಳಬೇಕಾಯಿತು ಇದು ವಿಷಾದಕರ ಸಂಗತಿ ಎಂದರು. ಈ ಮೂಲಕ ಪ್ರಧಾನಿ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಗಳಿವೆ . ಒಪ್ಪಂದದ ಕುರಿತು ಸ್ಪಷ್ಟ ಉತ್ತರ ನೀಡಬೇಕು ಎಂದು ಪ್ರಧಾನಿಗೆ ಕಾರಟ್ ತಾಕೀತು ಮಾಡಿದರು.

ದೇಶವ್ಯಾಪಿ ಪ್ರತಿಭಟನೆ
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಕ್ರಮವನ್ನು ಉಗ್ರವಾಗಿ ಖಂಡಿಸಿರುವ ಎಡಪಕ್ಷಗಳು ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಎಡಪಕ್ಷಗಳು ಈ ಅಣು ಒಪ್ಪಂದವನ್ನು ಯಾಕೆ ವಿರೋಧಿಸುತ್ತಿವೆ ಎಂಬುದನ್ನು ಪುಸ್ತಕ ರೂಪದಲ್ಲಿ ಹೊರತಂದಿವೆ. 'Lefts stand on N-deal' ಎನ್ನುವ ಪುಸ್ತಕವನ್ನು ಕಾರಟ್ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಈ ಪುಸ್ತಕದಲ್ಲಿ ಅಣು ಒಪ್ಪಂದದಿಂದ ದೇಶಕ್ಕೆ ಆಗುವ ಅನಾಹುತ, ಉದ್ಭವಿಸುವ ಸಮಸ್ಯೆಗಳ ಬಗೆಗೆ ವಿವರ ನೀಡಲಾಗಿದೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+